ನವದೆಹಲಿ: ನೋವು ನಿವಾರಕ ಪ್ಯಾರಾಸೆಟಮೊಲ್, ಆ್ಯಂಟಿ ಬಯೋಟಿಕ್ ಅಜಿತ್ರೋಮೈಸಿನ್, ಹೈಡ್ರೋಕ್ಸಿಕ್ಲೋರೋಕ್ವಿನ್ ಸೇರಿದಂತೆ ಎಲ್ಲ ಅತ್ಯವಶ್ಯಕ ಔಷಧಗಳು ಹಾಗೂ ಅವನ್ನು ತಯಾರಿಸಲು ಬೇಕಾಗುವ ಮೂಲ ರಾಸಾಯನಿಕಗಳು (ಎಪಿಐ) ಮುಂದಿನ ಹಲವು ತಿಂಗಳ ತನಕ ಸಾಕಾಗುವಷ್ಟು ದಾಸ್ತಾನು ಇದೆ ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ ಹೇಳಿದರು.
ರಾಷ್ಟ್ರದಲ್ಲಿ ಔಷಧ ಹಾಗೂ ರಸಗೊಬ್ಬರ ದಾಸ್ತಾನು ಬಗ್ಗೆ ಸಾರ್ವಜನಿಕರು ಆತಂಕಪಡಿಸಿದ ಹಿನ್ನೆಲೆಯಲ್ಲಿ ಅವರು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿ ಸಾರ್ವಜನಿಕರಿಗೆ ಅಭಯ ನೀಡಿದ್ದಾರೆ.
ಎಲ್ಲ ರಾಜ್ಯಗಳಿಗೆ ಔಷಧ ಹಾಗೂ ರಾಸಾಯನಿಕ ಸಾಗಣೆ ವ್ಯವಸ್ಥೆಯನ್ನು ಸಹಜ ಸ್ಥಿತಿಗೆ ತರಲು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳ ಜತೆ ನಿರಂತರ ಸಂಪರ್ಕ ಹೊಂದಿ ಕ್ರಮ ಕೈಗೊಳ್ಳುತ್ತಿದೆ. ಜನೌಷಧಿ ಕೇಂದ್ರಗಳ ಔಷಧ ಸರಬರಾಜು ವ್ಯವಸ್ಥೆ ಕೂಡ ಸಹಜ ಸ್ಥಿತಿಗೆ ಮರಳುತ್ತಿದೆ. ಲಾಕ್ಡೌನ್ ಹಿನ್ನೆಲೆಯಲ್ಲಿ ಬಹುತೇಕ ಕೊರಿಯರ್ ವ್ಯವಸ್ಥೆ ಸ್ಥಗಿತವಾಗಿತ್ತು. ಈ ಸಮಸ್ಯೆ ನಿವಾರಣೆ ಮಾಡಲಾಗಿದೆ.
ಗುರುಗ್ರಾಮ ಹಾಗೂ ಗುವಾಹಟಿಗಳಲ್ಲಿರುವ ಔಷಧ ಗೋದಾಮುಗಳಿಂದ ವಿಶೇಷ ಸರಕು ವಾಹನಗಳಲ್ಲಿ ಸರಬರಾಜು ಚುರುಕುಗೋಳಿಸಲಾಗಿದೆ. ಕೆಲವು ಔಷಧಿಯನ್ನುನ್ನು ನೇರವಾಗಿ ಕಾರ್ಖಾನೆಗಳಿಂದಲೇ ಅಗತ್ಯವಿರುವಡೆ ಕಳುಹಿಸಲಾಗುತ್ತಿದೆ. ಸಾಗಣೆ ಹಾಗೂ ಪೂರೈಕೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಲು ಕೇಂದ್ರ ಕಚೇರಿಯಲ್ಲಿ ಉನ್ನತಾಧಿಕಾರಿಗಳ ವಿಶೇಷ ತಂಡ ರಚಿಸಲಾಗಿದೆ. ಹಾಗೆಯೇ ಸಹಾಯವಾಣಿ 011-23389840 ಕೂಡ ಸ್ಥಾಪಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ರಾಷ್ಟ್ರಕ್ಕೆ ಪ್ರತಿ ತಿಂಗಳು ಸರಾಸರಿ 95 ಲಕ್ಷ ಹೈಡ್ರೋಕ್ಸಿಕ್ಲೋರೋಕ್ವಿನ್ ಮಾತ್ರೆಗಳು ಬೇಕು. ನಮ್ಮಲ್ಲಿ ಮುಂದಿನ ಮೂರು ತಿಂಗಳಿಗೆ ಸಾಕಾಗುವಷ್ಟು ದಾಸ್ತಾನು ಇದೆ. ಹಾಗೆಯೇ ಇದರ ಉತ್ಪಾದನೆ ನಿರಂತರವಾಗಿದೆ. ಮುಖ್ಯ ಆ್ಯಂಟಿ ಬಯೋಟಿಕ್ ಔಷಧಗಳಲ್ಲಿ ಒಂದಾದ ಅಜಿತ್ರೋಮೈಸಿನ್ ನಮಗೆ ವಾರ್ಷಿಕವಾಗಿ 2.2 ಕೋಟಿ ಮಾತ್ರೆ ಬೇಕು. ನಾವು 9.6 ಕೋಟಿ ಅಜಿತ್ರೋಮೈಸಿನ್ ಮಾತ್ರೆಯನ್ನು ಉತ್ಪಾದಿಸುತ್ತಿದ್ದೇವೆ. ಜ್ವರ ಮುಂತಾದ ಸಣ್ಣಪುಟ್ಟ ಕಾಯಿಲೆಗಳಿಗೆ ಬಳಸುವ ಪ್ಯಾರಾಸೆಟಮೊಲ್ ಮಾತ್ರೆ 482 ಕೋಟಿಗಿಂತ ಹೆಚ್ಚು ಸಂಗ್ರಹವಿದೆ. ಆಂತರಿಕ ಬೇಡಿಕೆಯನ್ನು ಪೂರೈಸುವುದು ನಮ್ಮ ಮೊದಲ ಆದ್ಯತೆ. ಮಿಕ್ಕಿದ್ದನ್ನು ಮಾತ್ರ ರಫ್ತು ಮಾಡುತ್ತಿದ್ದೇವೆ. ಹಾಗಾಗಿ ಯಾವುದೇ ರೀತಿಯ ಆತಂಕಕ್ಕೆ ಆಸ್ಪದವಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ರಸಗೊಬ್ಬರ: ದೇಶದಲ್ಲಿ ಸಾಕಷ್ಟು ರಸಗೊಬ್ಬರ ದಾಸ್ತಾನು ಇದೆ. ಬೇರೆ ಬೇರೆ ರಾಜ್ಯಗಳಲ್ಲಿಯೂ ಮುಂಗಾರು ಬಿತ್ತನೆಗೆ ಬೇಕಾಗುವಷ್ಟು ರಸಗೊಬ್ಬರವನ್ನು ಈಗಾಗಲೇ ದಾಸ್ತಾನು ಮಾಡಲಾಗಿದೆ. ಹಾಗಾಗಿ ರೈತರು ಆತಂಕಪಡಬೇಕಿಲ್ಲ. ರಸಗೊಬ್ಬರವನ್ನು ಈಗ ಅಗತ್ಯ ವಸ್ತುಗಳ ಪಟ್ಟಿಗೆ ಸೇರಿಸಲಾಗಿದೆ. ಅದನ್ನು ಅಕ್ರಮ ದಾಸ್ತಾನು, ಕಾಳಸಂತೆ ಮಾಡುವುದು ಶಿಕ್ಷಾರ್ಹ ಅಪರಾಧ ಎಂದು ಎಚ್ಚರಿಸಿದರು.