Gang rape: ವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಘಟನೆ ಪಶ್ಚಿಮ ಬಂಗಾಳದ ದುರ್ಗಾಪುರದಲ್ಲಿ ಶುಕ್ರವಾರ (ಅ.10) ನಡೆದಿದೆ.
ಸಂತ್ರಸ್ಥೆ ದ್ವಿತೀಯ ವರ್ಷದ ವೈದ್ಯಕೀಯ ವಿದ್ಯಾರ್ಥಿನಿಯಾಗಿದ್ದು, ಒಡಿಶಾದ ಜಲೇಶ್ವರಿ ನಿವಾಸಿ ಎಂದು ತಿಳಿದುಬಂದಿದೆ. ಆಕೆ ಸಂಜೆ ಕ್ಯಾಂಪಸ್ನ ಹೊರಗೆ ತನ್ನ ಸ್ನೇಹಿತರೊಂದಿಗೆ ಊಟಕ್ಕೆ ಹೋದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಸುದ್ದಿಮೂಲಗಳ ಪ್ರಕಾರ, ತಡರಾತ್ರಿ ಸುಮಾರು 8:30 ಸಮಯಕ್ಕೆ ವಿದ್ಯಾರ್ಥಿನಿ ತನ್ನ ಸಹಪಾಠಿಗಳೊಂದಿಗೆ ಕ್ಯಾಂಪಸ್ನಿಂದ ಹೊರಗೆ ಊಟಕ್ಕೆ ಹೋಗಿದ್ದಾಳೆ. ಈ ಸಂದರ್ಭದಲ್ಲಿ ಕೆಲವು ಯುವಕರು ಆಕೆಯನ್ನು ತಡೆದಿದ್ದು, ಆಕೆಯನ್ನು ನಿರ್ಜನ ಪ್ರದೇಶಕ್ಕೆ ಎಳೆದುಕೊಂಡು ಹೋಗಿ ಸಾಮೂಹಿಕ ಅತ್ಯಾಚಾರ ನಡೆಸಿ, ಆಕೆಯನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ ಎಂದು ಆಕೆಯ ಸ್ನೇಹಿತರು ಆರೋಪಿಸಿದ್ದಾರೆ.
ವಿದ್ಯಾರ್ಥಿನಿಯ ಪಾಲಕರಿಗೆ ಈ ವಿಷಯ ತಿಳಿದ ಕೂಡಲೇ, ದುರ್ಗಾಪುರಕ್ಕೆ ತಲುಪಿದ್ದು, ಅತ್ಯಾಚಾರದ ಬಗ್ಗೆ ನ್ಯೂಟೌನ್ ಪೊಲೀಸರಿಗೆ ದೂರು ದಾಖಲಿಸಿದ್ದಾರೆ. ಸಂತ್ರಸ್ತೆಯ ಹೇಳಿಕೆ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದು, ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆಯ ಬಗ್ಗೆ ವಿಷಾದ ವ್ಯಕ್ತ ಪಡಿಸಿದ ಪಾಲಕರು ಕಾಲೇಜಿನ ಬಗ್ಗೆ ಚೆನ್ನಾಗಿ ತಿಳಿದುಕೊಂಡ ನಂತರ ನನ್ನ ಮಗಳನ್ನು ಇಲ್ಲಿ ಓದಲು ಕಳುಹಿಸಿದೆ. ನನ್ನ ಮಗಳಿಗೆ ಹೊರಹೋಗಲು ಇಷ್ಟವಿದ್ದಿಲ್ಲ. ಸಹಪಾಠಿಗಳ ಮಾತುಗಳಿಗೆ ಒಪ್ಪಿಕೊಂಡು ಹೊರಗೆ ಹೋದ ನಂತರ ಈ ರೀತಿ ಘಟನೆ ಸಂಭವಿಸಿದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)