ನ್ಯೂಸ್

ಮೆಡಿಕಲ್ ಸೀಟ್ ಆಮಿಷ ವಂಚನೆ; ಕೆಇಎ ನಿರ್ದೇಶಕ ಸೇರಿ ಮೂವರು ವಿರುದ್ಧ ಕೇಸ್

ಬೆಂಗಳೂರು: ಮೆಡಿಕಲ್ ಸೀಟ್ ಆಮಿಷವೊಡ್ಡಿ ಹಣ ಪಡೆದು ವಂಚಿಸಿದ ಆರೋಪದ ಮೇಲೆ ಕರ್ನಾಟಕ ಪರೀಕ್ಷ ಪ್ರಾಧಿಕಾರ(ಕೆಇಎ) ಕಾರ್ಯನಿರ್ವಹಕ ನಿರ್ದೇಶಕ ಸೇರಿ ಮೂವರ ವಿರುದ್ಧ ಮಲ್ಲೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು ನಗರದ ಕೆ.ಆರ್.ವಿಜಯ ಶಂಕರ್ ನೀಡಿದ ದೂರಿನ ಮೇರೆಗೆ ಕೆಇಎ ಕಾರ್ಯನಿರ್ವಹಕ ನಿರ್ದೇಶಕ, ನಾಗಸಂದ್ರದ ಶ್ರೀಧರ್ ಮತ್ತು ಆರ್.ಟಿ.ನಗರದ ಹರಿಣಿ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯ್ ಶಂಕರ್ ಅವರ ಪುತ್ರ ವಿ.ಎಸ್. ಧನುಷ್ ಎಂಬಾತ 2017ರಲ್ಲಿ ಪಿಯುಸಿಯಲ್ಲಿ ಪ್ರಥಮ ದರ್ಜೆಯನ್ನು ಉತ್ತೀರ್ಣರಾಗಿದ್ದ. ಎಂಬಿಬಿಎಸ್‌ಗೆ ಸೇರಿಸಲು ಕೋಚಿಂಗ್ ಸೆಂಟರ್‌ಗೆ ಸೇರಿದ್ದರು. ಆ ಮೂಲಕ ಕೆಇಎನಲ್ಲಿ ಕೆಲಸ ಮಾಡುತ್ತಿದ್ದ ಕೆ.ಶ್ರೀಧರ್ ಪರಿಚಯವಾಗಿದ್ದು, 2018ನೇ ಸಾಲಿನಲ್ಲಿ ನಿಜಲಿಂಗಪ್ಪ ಮೆಡಿಕಲ್ ಕಾಲೇಜಿನಲ್ಲಿ ಸೀಟ್ ಕೊಡಿಸುವುದಾಗಿ ಭರವಸೆ ಕೊಟ್ಟಿದ್ದ.

ವಿದ್ಯಾರ್ಥಿಯಿಂದ ಎಲ್ಲ ದಾಖಲೆ ಪತ್ರಗಳನ್ನು ಪಡೆದು ಕೆಇಎ ಹೆಸರಿನಲ್ಲಿ 6.83 ಲಕ್ಷ ರೂ. ಡಿಡಿ ಪಡೆದುಕೊಂಡಿದ್ದ. ಇದಾದ ಮೇಲೆ ಮತ್ತೆ 30.73 ಲಕ್ಷ ರೂ. ಮೌಲ್ಯದ ಡಿಡಿ ಕೊಟ್ಟಿದ್ದರು. ಸ್ವಲ್ಪ ದಿನಗಳ ಬಳಿಕ ಕೆಇಎ ಅಧಿಕಾರಿಗಳು ಹೆಚ್ಚುವರಿಯಾಗಿ ಸೀಟ್ ಭದ್ರತೆಗೆ ಹಣ ಕೇಳುತ್ತಿದ್ದಾರೆ ಎಂದು ಹೇಳಿ 20 ಲಕ್ಷ ರೂ. ಅನ್ನು ನಗದು ರೂಪದಲ್ಲಿ ಪಡೆದುಕೊಂಡಿದ್ದ. ಇಷ್ಟೇಲ್ಲ ಆದರು ಸೀಟ್ ಮಾತ್ರ ಲಭ್ಯವಾಗಿರಲಿಲ್ಲ.

ಕೊನೆಗೆ ವಿಜಯಶಂಕರ್, ಹಣ ವಾಪಸ್ ಕೇಳಿದಾಗ ಚೆಕ್‌ಗಳು ಕೊಟ್ಟಿದ್ದರು. ಚೆಕ್ ಬೌನ್ಸ್ ಆದ ಕಾರಣಕ್ಕೆ ನೊಂದ ವಿಜಯಶಂಕರ್, ಕೋರ್ಟ್‌ನಲ್ಲಿ ಖಾಸಗಿ ದೂರು ಸಲ್ಲಿಸಿದ್ದರು. ವಾದ-ಪ್ರತಿವಾದ ಆಲಿಸಿದ ಕೋರ್ಟ್, ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಪೊಲೀಸರಿಗೆ ಆದೇಶ ನೀಡಿತ್ತು. ಇದರ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.