ನವದೆಹಲಿ: ಭಾರತದಲ್ಲಿ ಸಿ-ಸೆಕ್ಷನ್ (ಸಿಸೇರಿಯನ್) ಮೂಲಕ ಹೆರಿಗೆ ಪ್ರಮಾಣ ಹೆಚ್ಚುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿರುವ ತಜ್ಞರು, ಖಾಸಗಿ ಆಸ್ಪತ್ರೆಗಳ ಮೇಲೆ ನಿಯಂತ್ರಣ ಹೇರುವುದರ ಸಹಿತ ನೀತಿ ನಿರ್ಧಾರಗಳನ್ನು ಕೈಗೊಳ್ಳುವಂತೆ ಕರೆ ನೀಡಿದ್ದಾರೆ. ಭಾರತದಲ್ಲಿ 2005ರಲ್ಲಿ ಶೇ.8.5ರಷ್ಟಿದ್ದ ಸಿಸೇರಿಯನ್ ಹೆರಿಗೆಗಳು 2021ರಲ್ಲಿ ಶೇ. 21.5ಕ್ಕೆ ಏರಿದೆ. ಇದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ನಿಗದಿಪಡಿಸಿದ ಮಟ್ಟಕ್ಕಿಂತ ಅಧಿಕವಾಗಿದೆ ಎಂದು ದಿ ಲ್ಯಾನ್ಸೆಟ್ ರೀಜನಲ್ ಹೆಲ್ತ್ ಸೌತ್ಈಸ್ಟ್ ಏಷ್ಯಾ ಜರ್ನಲ್ನಲ್ಲಿ ಪ್ರಕಟವಾದ ವಿಶ್ಲೇಷಣಾ ವರದಿ ಹೇಳಿದೆ.
ಬೆಂಗಳೂರು ಸಂಸ್ಥೆ ಸಂಶೋಧಕರು: ತಾಯಿ ಮತ್ತು ನವಜಾತ ಶಿಶುವಿನ ಮರಣ ಪ್ರಮಾಣ ತಪ್ಪಿಸುವಲ್ಲಿ ಸಿಸೇರಿಯನ್ ಪಾತ್ರ ಮಹತ್ವದ್ದಾಗಿದೆ ಎಂದು ಸಾರ್ವಜನಿಕ ಆರೋಗ್ಯ ಸಂಸ್ಥೆ, ಬೆಂಗಳೂರು ಮತ್ತು ತಮಿಳುನಾಡಿನ ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜ್ನ ಸಂಶೋಧಕರು ಹೇಳಿದ್ದಾರೆ. ಆದರೆ ಡಬ್ಲ್ಯುಎಚ್ಒ ಹೇಳಿರುವಂತೆ, ಜನಸಂಖ್ಯೆಯ ಶೇ.10ಕ್ಕೂ ಮೀರಿದ ಸಿಸೇರಿಯನ್ ಡೆಲಿವರಿ ದರಕ್ಕೂ ತಗ್ಗಿದ ಸಾವಿನ ಪ್ರಮಾಣಕ್ಕೂ ಸಂಬಂಧವಿಲ್ಲ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ಭಾರತ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಹಿಂದಿನ ಪ್ರಕಟಿತ ಅಧ್ಯಯನಗಳನ್ನು ಸಂಶೋಧಕರ ತಂಡ ಪರಿಶೀಲಿಸಿ ಸಿಸೇರಿಯನ್ ಡೆಲಿವರಿಯಿಂದ ಜನಿಸುವ ಮಕ್ಕಳ ಸಮಸ್ಯೆಗಳನ್ನು ಎತ್ತಿ ತೋರಿಸಿದೆ.