ನ್ಯೂಸ್

ವೈದ್ಯಕೀಯ ಕಾಲೇಜುಗಳಲ್ಲಿ ಮೂಲ ಸೌಕರ್ಯ ಸಮಸ್ಯೆ; ಖುದ್ದು ಭೇಟಿ ನೀಡಿ ಸಮಸ್ಯೆ ಅಧ್ಯಯನ ಮಾಡಿದ ಸಚಿವ ಶರಣ ಪ್ರಕಾಶ್ ಪಾಟೀಲ್

ಬೆಂಗಳೂರು:
ವೈದ್ಯಕೀಯ ಕಾಲೇಜುಗಳಿಗೆ ಕಾಯಕಲ್ಪ ಕೊಡಲು ಮುಂದಾಗಿರುವ ಸಚಿವ ಶರಣ ಪ್ರಕಾಶ್ ಪಾಟೀಲ್ ಅವರು, ಎಲ್ಲಾ ವೈದ್ಯಕೀಯ ಕಾಲೇಜುಗಳಿಗೂ ಭೇಟಿ ನೀಡಿ ಅಲ್ಲಿರುವ ವಾಸ್ತವ ಸಂಗತಿಗಳನ್ನು ಅರಿಯಲು ಮುಂದಾಗಿದ್ದಾರೆ.
ಹಲವು ವೈದ್ಯಕೀಯ ಕಾಲೇಜುಗಳಲ್ಲಿ ಇನ್ನೂ ಮೂಲ ಸೌಕರ್ಯ ವ್ಯವಸ್ಥೆ ಪೂರ್ಣ ಪ್ರಮಾಣದಲ್ಲಿ ಕಲ್ಪಿಸಲು ಸಾಧ್ಯವಾಗಿಲ್ಲ. ಹೊಸದಾಗಿ ಪ್ರಾರಂಭಿಸಿರುವ ವೈದ್ಯಕೀಯ ಕಾಲೇಜುಗಳಿಗೆ ಕನಿಷ್ಠ ಮೂಲ ಸೌಲಭ್ಯ ಲಭ್ಯವಾಗಿಲ್ಲ. ಇನ್ನು ಬೋಧಕ ಸಿಬ್ಬಂದಿಗಳು ಹಾಗೂ ತಜ್ಞ ವೈದ್ಯರ ಕೊರತೆ ನೀಗಿಲ್ಲ. ಇಂಥದ್ದೆ ಹತ್ತು ಹಲವು ಸಮಸ್ಯೆ ಹೊತ್ತು ಶಾಸಕರು ಮತ್ತು ಜನಪ್ರತಿನಿಧಿಗಳು ಬರುತ್ತಿರುವ ಹಿನ್ನೆಲೆಯಲ್ಲಿ ತಾವೇ ಖುದ್ದು ಪ್ರವಾಸ ಮಾಡಿ ಸಮಸ್ಯೆ ಅರಿಯಲು ಸಚಿವರು ನಿರ್ಧರಿಸಿದ್ದಾರೆ.
ರಾಜ್ಯದಲ್ಲಿರುವ 22 ವೈದ್ಯ ಕಾಲೇಜುಗಳಲ್ಲಿ ಈಗಾಗಲೇ 15ಕ್ಕೂ ಹೆಚ್ಚಿನ ಕಾಲೇಜುಗಳಿಗೆ ಸಚಿವರು ಭೇಟಿ ನೀಡಿದ್ದಾರೆ. ಕೊನೆಯ ಹಂತವಾಗಿ ಈಗಾಗಲೇ ಕೊಡಗು, ಚಿಕ್ಕಮಗಳೂರು, ಹಾಸನ ವೈದ್ಯ ಕಾಲೇಜುಗಳಿಗೆ ಭೇಟಿ ನೀಡಿ ಅಲ್ಲಿಯ ಸ್ಥಿತಿ ಗತಿಗಳನ್ನು ಅಧ್ಯಯನ ಮಾಡಿ ಹಿಂತಿರುಗಿರುವ ಸಚಿವರು, ಇನ್ನುಳಿದ ಕಾಲೇಜುಗಳಿಗೆ ಶೀಘ್ರವೇ ಪ್ರವಾಸ ಮಾಡಲಿದ್ದಾರೆ ಎಂದು ಕಚೇರಿಯ ಮೂಲಗಳು ಖಚಿತಪಡಿಸಿವೆ.
ಹಾಸನ ವೈದ್ಯಕೀಯ ಕಾಲೇಜಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಲ್ಲಿನ ವೈದ್ಯಕೀಯ ಕಾಲೇಜಿನ ನಿರ್ದೇಶಕರು, ನಿಯಮಾವಳಿ ಉಲ್ಲಂಸಿ ಅವರ ಪತ್ನಿಯನ್ನೆ ನೇಮಕ ಮಾಡಿಕೊಂಡಿದ್ದರು ಎನ್ನುವ ದೂರು ಬಂದಿದ್ದ ಹಿನ್ನೆಲೆಯಲ್ಲಿ ಕೂಡಲೇ ಕ್ರಮ ಕೈಗೊಂಡು ಆ ನಿರ್ದೇಶಕರನ್ನು ಬದಲು ಮಾಡುವ ತೀರ್ಮಾನವನ್ನು ಸಚಿವರು ಕೈಗೊಳ್ಳುವ ಮೂಲಕ ಇನ್ನುಳಿದ ವೈದ್ಯಕೀಯ ಕಾಲೇಜುಗಳಿಗೂ ಎಚ್ಚರಿಕೆ ಸಂದೇಶವನ್ನು ರವಾನಿಸಿದರು.
ವೈದ್ಯ ಕಾಲೇಜಿಗೆ ತುರ್ತಾಗಿ ಅಗತ್ಯವಿರುವ ಉಪಕರಣ ಮತ್ತು ಮೂಲ ಸೌಲಭ್ಯ ಕಲ್ಪಿಸುವ ಸಲುವಾಗಿ ಮುಖ್ಯಮಂತ್ರಿಗಳ ಬಳಿ ಅನುದಾವನ್ನು ಕೇಳಲು ಸಚಿವರು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಡೀ ರಾಜ್ಯದ ಬಗ್ಗೆ ಸಮಗ್ರವಾದ ವರದಿಯೊಂದನ್ನು ಅವರು ಸಿದ್ಧಪಡಿಸಿ ಮುಖ್ಯಮಂತ್ರಿಗಳಿಗೆ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಮನಗರ ಮತ್ತು ಕನಕಪುರ ವೈದ್ಯ ಕಾಲೇಜಿಗೆ ಇನ್ನೂ ಅತ್ಯಗತ್ಯವಿರುವ ಮೂಲ ಸೌಲಭ್ಯ ಕಲ್ಪಿಸಲು ಡಿಸಿಎಂ ಜೊತೆಗೆ ಚರ್ಚೆ ನಡೆಸಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

*ರಾಜ್ಯದಲ್ಲಿ 22 ಸರ್ಕಾರಿ ಮೆಡಿಕಲ್ ಕಾಲೇಜುಗಳಿವೆ. ಅವುಗಳಿಗೆ ಆದ್ಯತೆಯ ಮೇರೆಗೆ ಮೂಲ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ.
-ಮೊಹಮದ್ ಮೊಸೀನ್, ಪ್ರಧಾನ ಕಾರ್ಯದರ್ಶಿ, ವೈದ್ಯಕೀಯ ಶಿಕ್ಷಣ ಇಲಾಖೆ.