ನ್ಯೂಸ್

ಆರ್‌ಟಿಒ, ನೋಂದಣಿ ಕಚೇರಿಗಳಲ್ಲಿ ಮಧ್ಯವರ್ತಿಗಳ ದರ್ಬಾರು

ಮಂಜುನಾಥ ಕೆ. ಬೆಂಗಳೂರು
ರಾಜ್ಯದ ಸಬ್ ರಿಜಿಸ್ಟ್ರಾರ್ ಕಚೇರಿಗಳು ಹಾಗೂ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ (ಆರ್‌ಟಿಒ) ಮಧ್ಯವರ್ತಿಗಳ ಹಾವಳಿ ಮಿತಿಮೀರಿರುವ ವಿಚಾರ ಲೋಕಾಯುಕ್ತ ದಾಳಿ ವೇಳೆ ಪತ್ತೆಯಾಗಿದೆ. ಪ್ರತಿಯೊಂದು ಆರ್‌ಟಿಒ ಕಚೇರಿಯಲ್ಲಿ ಕನಿಷ್ಠ ಐದಾರು ಮಧ್ಯವರ್ತಿಗಳು ಕಾರ್ಯನಿರ್ವಹಿಸುತ್ತಿರುವುದು ಕಂಡುಬಂದಿದೆ.

ಕಳೆದ ವರ್ಷ ಲೋಕಾಯುಕ್ತ ಅಧಿಕಾರಿಗಳು ರಾಜ್ಯದ ಬಹುತೇಕ ಆರ್‌ಟಿಒ ಕಚೇರಿಗಳ ಮೇಲೆ ದಾಳಿ ನಡೆಸಿದಾಗ, ಎಲ್ಲೆಡೆ ಮಧ್ಯವರ್ತಿಗಳು ಕಾರ್ಯನಿರ್ವಹಿಸುತ್ತಿರುವುದು ಬೆಳಕಿಗೆ ಬಂದಿತ್ತು. ದಾಳಿ ವೇಳೆ ಅಕ್ರಮದ ಬಗ್ಗೆ ಸಾಕಷ್ಟು ಪ್ರಮಾಣದ ಸಾಂದರ್ಭಿಕ ಪುರಾವೆಗಳನ್ನು ಸಂಗ್ರಹಿಸಲಾಗಿದ್ದರೂ, ಖಾಸಗಿ ವ್ಯಕ್ತಿಗಳಾಗಿರುವುದರಿಂದ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಅಧಿಕಾರ ಇಲ್ಲ. ಹೀಗಾಗಿ, ಯಾವುದೇ ಬಂಧನಗಳನ್ನು ಮಾಡಲು ಸಾಧ್ಯವಾಗಿಲ್ಲ.

ಕರ್ನಾಟಕ ಲೋಕಾಯುಕ್ತ ಕಾಯ್ದೆಯಡಿ ಅಧಿಕಾರಿಗಳು ದಾಳಿ ನಡೆಸುತ್ತಾರೆ. ಇದು ಸರ್ಕಾರಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಕರ್ತವ್ಯಗಳ ಬಗ್ಗೆ ಪ್ರಶ್ನಿಸಲು ಅವಕಾಶ ನೀಡುತ್ತದೆ. ಆದರೆ, ಅವರ ಬಂಧನಕ್ಕೆ ಅನುಮತಿ ನೀಡುವುದಿಲ್ಲ. ಇನ್ನು ಖಾಸಗಿ ವ್ಯಕ್ತಿಗಳ ವಿರುದ್ಧ ಒಂಬುಡ್ಸ್‌ಮನ್ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಮಾತ್ರ ಪ್ರಕರಣ ದಾಖಲಿಸಬಹುದಾಗಿದೆ. ಇದಕ್ಕೆ ಸೂಕ್ತ ದೂರು ದಾಖಲಾಗಿರಬೇಕು ಮತ್ತು ಆ ವ್ಯಕ್ತಿ ರೆಡ್‌ಹ್ಯಾಂಡ್ ಆಗಿ ಸಿಕ್ಕಿ ಬೀಳಬೇಕಾಗುತ್ತದೆ. ಜತೆಗೆ ದಾಳಿ ಸಮಯದಲ್ಲಿ ಸೂಕ್ತ ಪುರಾವೆಗಳನ್ನು ಸಂಗ್ರಹಿಸುವ ಅಗತ್ಯವಿದೆ. ಭ್ರಷ್ಟಾಚಾರದಲ್ಲಿ ವ್ಯಕ್ತಿಯ ಪಾಲ್ಗೊಳ್ಳುವಿಕೆಯನ್ನು ಸಾಬೀತುಪಡಿಸುವುದು ಅತ್ಯಂತ ಅವಶ್ಯಕವಾಗಿದೆ.

ನಗರದ ಆರ್‌ಟಿಒ ಕಚೇರಿಗಳ ಮೇಲೆ ಎರಡು ಬಾರಿ ಲೋಕಾಯುಕ್ತ ದಾಳಿ ಆಗಿತ್ತು. ಮೊದಲ ದಾಳಿ ಸಮಯದಲ್ಲಿ ಮಾಹಿತಿ ಸೋರಿಕೆಯಾಗಿ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದರು. ಆದರೂ ಕೆಲ ಮಧ್ಯವರ್ತಿಗಳು ಸಿಕ್ಕಿ ಬಿದ್ದಿದ್ದರು. ಎರಡನೇ ದಾಳಿಯಲ್ಲಿ ಮಧ್ಯವರ್ತಿಗಳ, ಮೊಬೈಲ್ ಫೋನ್‌ಗಳು, ಎಟಿಎಂ ಕಾರ್ಡ್‌ಗಳು ಮತ್ತು ದೊಡ್ಡ ಮೊತ್ತದ ಹಣ, ಡಿಎಲ್, ಆರ್‌ಸಿ ಕಾರ್ಡ್ ಸೇರಿ ಅನೇಕ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿತ್ತು. ಒಂದು ಪ್ರಕರಣ ಶಿಕ್ಷೆಯಲ್ಲಿ ಕೊನೆಗೊಳ್ಳಬೇಕಾದರೆ, ಹಣದ ಬೇಡಿಕೆ ಅಥವಾ ಹಣ ಸ್ವೀಕಾರದ ಬಗ್ಗೆ ಸಮರ್ಥ ಸಾಕ್ಷ್ಯಗಳನ್ನು ನ್ಯಾಯಾಲಯಕ್ಕೆ ಒದಗಿಸಬೇಕು. ಅದು ತುಂಬಾ ಕಷ್ಟಕರ. ಹೀಗಾಗಿ ಲೋಕಾಯುಕ್ತ ಪ್ರಕರಣಗಳಲ್ಲಿ ಶಿಕ್ಷೆಗಳು ಆಗುವುದು ತೀರಾ ಕಡಿಮೆ ಎಂದು ಹೇಳಲಾಗುತ್ತಿದೆ.

ಲಕ್ಷಾಂತರ ರೂ. ನಗದು ಪತ್ತೆ
೨೦೨೨ರ ಸೆ.೩೦ರಂದು ರಾಜ್ಯದ ಹಲವು ಆರ್‌ಟಿಒ ಚಕ್ ಪೋಸ್ಟ್‌ಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ೧೧.೩೬ ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ. ನ.೩ರಂದು ಬೆಂಗಳೂರು ನಗರ ಜಿಲ್ಲೆ ಮತ್ತು ಗ್ರಾಮಾಂತರ ಜಿಲ್ಲೆಯ ಸಬ್ ರಿಜಿಸ್ಟ್ರಾರ್ ಕಚೇರಿಗಳ ಮೇಲೆ ದಾಳಿ ನಡೆಸಿ ೯,೭೨,೨೯೪ ರೂ. ವಶಪಡಿಸಿಕೊಳ್ಳಲಾಗಿತ್ತು.

ಬಾಕ್ಸ್….
ಯಾವ್ಯಾವ ಆರ್‌ಟಿಒ, ಚೆಕ್ ಪೋಸ್ಟ್‌ನಲ್ಲಿ ಎಷ್ಟು ಹಣ ಸಿಕ್ತು?
ವಿಜಯಪುರ- ೪,೫೩,೬೧೧ ರೂ.
ಬೆಳಗಾವಿ-೩,೬೨,೦೧೦ ರೂ.
ಬೆಂಗಳೂರು- ೬೨,೨೨೭ ರೂ.
ಬೀದರ್-೧,೫೪,೫೩೬ ರೂ.
ಬಳ್ಳಾರಿ-೫೪,೯೦೦ ರೂ.
ಕೊಪ್ಪಳ-೯,೭೭೯ ರೂ.
ಕೋಲಾರ, ೬,೫೮೪ ರೂ.
ಒಟ್ಟು ೧೧,೦೩,೬೪೭ ರೂ.

ಮಧ್ಯವರ್ತಿಗಳ ವಿರುದ್ಧ ಲೋಕಾಯುಕ್ತ ಕಾಯ್ದೆಯಡಿ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಆದರೆ ಸರ್ಕಾರಿ ಅಧಿಕಾರಿಗಳ ಜತೆ ಸೇರಿ ಭ್ರಷ್ಟಚಾರ ಚಟುವಟಿಕೆಯಲ್ಲಿ ತೊಡಗಿರುವುದು ಕಂಡುಬಂದರೆ, ಐಪಿಸಿ ಸೆಕ್ಷನ್ ಅಡಿಯಲ್ಲಿ ಕ್ರಮ ಕೈಗೊಳ್ಳಲು ಕಾನೂನಿನಲ್ಲಿ ಅವಕಾಶವಿದೆ. ಸರ್ಕಾರಿ ಅಧಿಕಾರಿ ಹಾಗೂ ಮಧ್ಯವರ್ತಿ ವಿರುದ್ಧ ಪ್ರತ್ಯೇಕ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿ ಕ್ರಮಕೈಗೊಳ್ಳಲಾಗುವುದು.
ನ್ಯಾಯಮೂರ್ತಿ ಬಿ.ಎಸ್.ಪಾಟೀಲ್, ಲೋಕಾಯುಕ್ತ