ನ್ಯೂಸ್

ಸಾರ್ಥಕ ಬದುಕು

ಬದುಕಿನ ಅಂತಿಮ ಒಂದೇ ಒಂದು ಕ್ಷಣದೊಳಗೆ ಭಗವಂತನ ಸ್ಮರಣೆ ಮಾಡಿದರೆ ಸಾಕು ಜನ್ಮ ಸಾರ್ಥಕವಾಗಿ ಹೋಗುತ್ತದೆ. ತನ್ನ ಭಕ್ತನಾಗಿದ್ದರೆ ಮೋಕ್ಷವನ್ನೇ ಕೊಟ್ಟು ಬಿಡುತ್ತಾನೆ ಎಂದು ಶಾಸ್ತ್ರ ಹೇಳುತ್ತದೆ. ಅಜಾಮಿಳನ ಕಥೆಯೊಳಗೆ ಆದದ್ದೂ ಅದೇ. ಹೀಗಿರುವಾಗ ಹಗಲು ರಾತ್ರಿ ಎಲ್ಲ ಹೊತ್ತಿನಲ್ಲಿ ಆ ಪರಮಾತ್ಮನ ಜೊತೆಗೆ ಇದ್ದು ಅವನಿಗೆ ಹಾಲು ಕುಡಿಸುವುದು, ಊಟ ಮಾಡಿಸುವುದು. ಕೂಡುವುದು, ನಿಲ್ಲು ವುದು, ಮಲಗುವುದು ಎಲ್ಲವನ್ನೂ ಮಾಡಿದರಲ್ಲ, ನೀವು ಎಂತಹ ಭಾಗ್ಯ ವಂತರು ಎಂದು ಉದ್ಧವ ನಂದ ಯಶೋದೆಯರನ್ನು ಕೇಳುತ್ತಾನೆ.

‘ಕಿಂ ವಾವಶಿಷ್ಟಂ ಯುವಯೋಃ ಸುಕೃತ್ಯಮ್ (10.1.46.33 ಭಾಗವತ) - ಇದನ್ನು ಉದ್ಧವ, ನಂದ ಯಶೋದೆಯರಿಗೆ ಹೇಳುತ್ತಾನೆ. ನಿಮ್ಮದು ಎಂತಹ ದೊಡ್ಡ ಭಾಗ್ಯ ಎಂಬುದಾಗಿ. ಇದೇ ಮಾತು ದಾಸರಿಗೆ ಪ್ರೇರಣೆ ನೀಡಿದೆ ಎಂದು ಅನಿಸುತ್ತದೆ. ‘ಏನು ಸುಕೃತವ ಮಾಡಿದಳೋ ಯಶೋದೆ’ ಎಂದರು. ಅದು ಭಾಗವತದ ಶಬ್ದ. ಅದೇ ‘ಕಿಂ ವಾವಶಿಷ್ಟಂ ಯುವಯೋಃ ಸುಕೃತ್ಯಮ್ - ಏನು ಸುಕೃತ ನೀನು ಮಾಡಿದೆ ಯಶೋದೆ ಎಂದು ಉದ್ಧವ ಆಡಿದ ಮಾತು. ಅದನ್ನೇ ದಾಸರು ಹಾಡಿನ ರೂಪದಲ್ಲಿ ರಚಿಸಿ ಹಾಡಿದ್ದಾರೆ.

ಉದ್ಧವ ಹೇಳುತ್ತಾನೆ: ನೀನು ಅಥವಾ ನಂದ ಏನೆಲ್ಲ ಸುಕೃತವ ಮಾಡಿದಿರಿ, ಅನಂತ ವೇದಗಳಿಂದ ಪ್ರತಿಪಾದ್ಯನಾದ ಆ ಭಗವಂತನಿಗೆ ಜೋಗುಳ ಹಾಡಿ ತೂಗುತ್ತಿದ್ದೀರಿ, ಕೋಟಿ ಸೂರ್ಯ ಪ್ರಕಾಶನಾದ ಪರಮಾತ್ಮ ಅಂದರೆ ಯಾವ ಪರಮಾತ್ಮನ ಪ್ರಕಾಶದಿಂದ ಸೂರ್ಯ ಚಂದ್ರ ನಕ್ಷತ್ರಾದಿಗಳಿಗೆ ಪ್ರಕಾಶ ಇದೆಯೋ ಅಂತಹ ಪರಮಾತ್ಮನಿಗೆ ಆರತಿ ಮಾಡುತ್ತಿದ್ದೀರಿ. ಜಗನ್ನಿಯಾಮಕನಾದ ಪರಮಾತ್ಮನಿಗೆ -ಅಂದರೆ- ಜಗತ್ತಿಗೆ ನಿದ್ರೆ ಕೊಡತಕ್ಕಂತಹ ಪರಮಾತ್ಮನಿಗೆ ಜೋಗುಳ ಹಾಡುತ್ತಿದ್ದೀರಿ.

‘ಸ್ವಾಪಂ ಪ್ರಾಪಯತಿ ಶ್ರಮಾಪಹೃತಯೇ||

ಜಗತ್ತಿನ ಜನರ ಶ್ರಮವನ್ನು ಕಳೆಯುವುದಕ್ಕಾಗಿ ನಿದ್ರೆಯನ್ನು ಕೊಡುವ ಆ ಭಗವಂತನನ್ನೇ ನೀವು ಮಲಗಿಸುತ್ತೀರಿ ಎಂದು ಹೊಗಳುತ್ತಾನೆ.