Russia-Ukraine War: ಪ್ರಸ್ತುತ ರಷ್ಯಾ ಮತ್ತು ಯುಕ್ರೇನ್ ನಡುವಿನ ಭೀಕರ ಯುದ್ಧದಲ್ಲಿ ಇತ್ತೀಚೆಗಷ್ಟೇ ಕೇರಳದ ಓರ್ವ ಯುವಕ ಬಿನಿಲ್ ಬಾಬು ಸಾವನ್ನಪ್ಪಿದರೆ, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದರು. ಉದ್ಯೋಗ ಅರಸಿ ರಷ್ಯಾಗೆ ತೆರಳಿದ್ದ ಕೇರಳ ಮೂಲದ ಬಿನಿಲ್, ಯುಕ್ರೇನ್ ವಿರುದ್ಧದ ಯುದ್ಧದಲ್ಲಿ ದುರಂತ ಸಾವನ್ನಪ್ಪಿದ ಸುದ್ದಿ ಅವರ ಕುಟುಂಬಸ್ಥರಲ್ಲಿ ಆಘಾತವನ್ನು ತಂದೊಡ್ಡಿದೆ. ರಷ್ಯಾದಲ್ಲಿ ಕೆಲಸ ಮಾಡಿಕೊಂಡು, ಅಲ್ಲಿಯೇ ವಾಸ್ತವ್ಯ ಹೂಡಿದ್ದ ಬಿನಿಲ್ ಬಾಬು, ಯುಕ್ರೇನ್ ಸೇನೆ ವಿರುದ್ಧ ಹೋರಾಡುವಂತೆ ಬಲವಂತವಾಗಿ ತಳ್ಳಿದ ಹಿನ್ನೆಲೆ ಯುದ್ಧದಲ್ಲಿ ಗುಂಡೇಟು ತಗುಲಿ ಸಾವನ್ನಪಿದ್ದಾರೆ ಎಂದು ಭಾರತೀಯ ರಾಯಭಾರ ಕಚೇರಿ ಅಧಿಕೃತ ಮಾಹಿತಿ ಹಂಚಿಕೊಂಡಿತು. ಈ ಸುದ್ದಿ ಬೆನ್ನಲ್ಲೇ ಮತ್ತೊಂದು ಆಘಾತಕಾರಿ ಸುದ್ದಿ ಹೊರಬಿದ್ದಿದೆ.
ಕನಿಷ್ಠ 12 ಭಾರತೀಯರು ರಷ್ಯಾ ಮತ್ತು ಯುಕ್ರೇನ್ ವಿರುದ್ಧದ ಯುದ್ಧದಲ್ಲಿ ಸಾವಿಗೀಡಾಗಿದ್ದಾರೆ ಮತ್ತು 16 ಮಂದಿ ಕಾಣೆಯಾಗಿದ್ದಾರೆ ಎಂದು ವಿದೇಶಾಂಗ ಸಚಿವಾಲಯ (MEA) ಶುಕ್ರವಾರ (ಜ.17) ಮಾಹಿತಿ ಹಂಚಿಕೊಂಡಿದೆ. ಎರಡು ದೇಶಗಳ ನಡುವೆ ನಡೆಯುತ್ತಿರುವ ಭೀಕರ ಯುದ್ಧದಲ್ಲಿ ಭಾರತೀಯರು ಮೃತಪಟ್ಟಿದ್ದು, ರಷ್ಯಾ ಪರ ಹೋರಾಡುವಾಗ ಯುಕ್ರೇನ್ ದಾಳಿಗೆ ಬಲಿಯಾಗಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.
ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, "ಇಲ್ಲಿಯವರೆಗೆ 126 ಪ್ರಕರಣಗಳು. ಈ 126 ಪ್ರಕರಣಗಳಲ್ಲಿ 96 ಮಂದಿ ಭಾರತಕ್ಕೆ ಹಿಂತಿರುಗಿದರೆ, ಅದರಲ್ಲಿ ಕೆಲವರನ್ನು ರಷ್ಯಾದ ಸಶಸ್ತ್ರ ಪಡೆಯೇ ಬಿಡುಗಡೆಗೊಳಿಸಿದೆ. ರಷ್ಯಾದ ಸೈನ್ಯದಲ್ಲಿರುವ 18 ಭಾರತೀಯ ಪ್ರಜೆಗಳಲ್ಲಿ 16 ಮಂದಿ ಎಲ್ಲಿದ್ದಾರೆ? ಏನು ಮಾಡ್ತಿದ್ದಾರೆ ಎಂಬ ಮಾಹಿತಿ ಲಭ್ಯವಿಲ್ಲ. ಇವರನ್ನು ರಷ್ಯಾ ಕಾಣೆಯಾದವರ ವರ್ಗಕ್ಕೆ ಸೇರಿಸಿದೆ. ಉಳಿದವರನ್ನು ಶೀಘ್ರವಾಗಿ ಬಿಡುಗಡೆ ಮಾಡಿ ವಾಪಸ್ ಕಳುಹಿಸುವಂತೆ ನಾವು ತಿಳಿಸಿದ್ದೇವೆ. ರಷ್ಯಾದ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದ 12 ಭಾರತೀಯ ಪ್ರಜೆಗಳು ಸಾವನ್ನಪ್ಪಿದ್ದಾರೆ" ಎಂದು ತಿಳಿಸಿದ್ದಾರೆ,(ಏಜೆನ್ಸೀಸ್).