ಶಿವಮೊಗ್ಗ: ಗೌರವಧನ ಹೆಚ್ಚಳವೂ ಸೇರಿ ಹಲವು ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಜು.7ರಿಂದ ರಾಜ್ಯಮಟ್ಟದ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ರಾಜ್ಯ ಗ್ರಾಮ ಪಂಚಾಯತಿ ಮಟ್ಟದ ಮುಖ್ಯ ಪುಸ್ತಕ ಬರಹಗಾರರ ಒಕ್ಕೂಟ(ಎಂಬಿಕೆ ಮತ್ತು ಎಲ್‌ಸಿಆರ್‌ಪಿ, ಸಖಿಯರ)ದ ರಾಜ್ಯಾಧ್ಯಕ್ಷೆ ರುದ್ರಮ್ಮ ಹೇಳಿದರು.
ಎಂಬಿಕೆ ಮತ್ತು ಎಲ್‌ಸಿಆರ್‌ಪಿ ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳ, ಸಖಿಯರ ಮಹಾ ಒಕ್ಕೂಟದಿಂದ ಧರಣಿ ಹಮ್ಮಿಕೊಳ್ಳಲಾಗಿದೆ. ನಮ್ಮ ಸಮಸ್ಯೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಹಲವು ವರ್ಷಗಳಿಂದ ಪ್ರತಿಭಟನೆ ಮಾಡುತ್ತಲೇ ಬಂದಿದ್ದೇವೆ. ಆದರೂ ಪ್ರಯೋಜನ ಆಗಿಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಅಧಿಕಾರಿಗಳೊಂದಿಗೆ ಜಂಟಿ ಸಭೆ ಮಾಡಿದ್ದು ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ಆದರೆ ಈಗ ಮಾತಿಗೆ ತಪ್ಪಿದ್ದಾರೆ. ನಮ್ಮ ಬೇಡಿಕೆಗಳನ್ನು ಈಡೇರಿಸಿ ನುಡಿದಂತೆ ನಡೆದುಕೊಳ್ಳಬೇಕು ಎಂದು ಧರಣಿ ಮೂಲಕ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದರು.
ಬೆಳಗಾವಿ ಅಧಿವೇಶನದ ಸಮಯದಲ್ಲೂ ನಾವು ಹೋರಾಟ ಮಾಡಿದ್ದೆವು. ಆಗ ಕಾರ್ಮಿಕ ಇಲಾಖೆ ಸಚಿವ ಸಂತೋಷ್ ಲಾಡ್ ನಮ್ಮ ಮನವಿ ಸ್ವೀಕರಿಸಿ, ಬೇಡಿಕೆಗಳನ್ನು ಈಡೇರಿಸುತ್ತೇವೆಂದು ಭರವಸೆ ನೀಡಿದ್ದರು. ಇಲಾಖೆ ಸಚಿವರು ನಮಗೆ ಭರವಸೆ ಕೊಟ್ಟಿದ್ದರು. ಆದರೆ ಅವರೂ ಮಾತಿಗೆ ತಪ್ಪಿ ನಮಗೆ ಮೋಸ ಮಾಡಿದ್ದಾರೆ ಎಂದು ಕಿಡಿಕಾರಿದರು.
ಗೌರವಧನ 5000 ರೂ. ಇದ್ದು, ಅದನ್ನು ಎಂಬಿಕೆಯವರಿಗೆ 20 ಸಾವಿರ ರೂ., ಎಲ್‌ಸಿಆರ್‌ಪಿಯವರಿಗೆ 15 ಸಾವಿರ ರೂ. ಮತ್ತು ಸಖಿಯರಿಗೆ 10 ಸಾವಿರ ರೂ. ನೀಡಬೇಕು. ಸಂಘಗಳ ಆಧಾರಗಳಲ್ಲಿ ವೇತನ ನಿಗದಿ ಮಾಡದೆ ಅಂಗನವಾಡಿ ಮತ್ತು ಅಡುಗೆಯವರಿಗೆ ನೀಡುವಂತೆ ಸಮಾನವಾಗಿ ನೀಡಬೇಕು. ತಾರತಮ್ಯ ಸರಿಯಲ್ಲ. ಎಲ್ಲರಿಗೂ ಒಂದೇ ವೇತನ ಇರಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆಯಾಗಿದೆ ಎಂದರು. ಪದಾಧಿಕಾರಿಗಳಾದ ಎಂ.ಸಿ.ಸುಮಾ, ಭಾಗ್ಯಾ, ಕವಿತಾ, ಮಮತಾ ಸುದ್ದಿಗೋಷ್ಠಿಯಲ್ಲಿದ್ದರು.