ಬೆಂಗಳೂರು: ರಕ್ಷಣಾ ಕ್ಷೇತ್ರದ ಉತ್ಪಾದನೆಯನ್ನು ದ್ವಿಗುಣಗೊಳಿಸುವ ಗುರಿಯನ್ನು ರಾಜ್ಯ ಸರ್ಕಾರ ಹೊಂದಿದೆ. 2025ರ ವೇಳೆಗೆ ರಕ್ಷಣಾ ರಫ್ತುಗಳನ್ನು 25,000 ಕೋಟಿ ರೂ.ಗೆ ಹೆಚ್ಚಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ನಗರದ ಎಂ.ವಿ.ಸಭಾಂಗಣದಲ್ಲಿ ಆಯೋಜಿಸಿದ್ದ ಏರೋಸ್ಪೇಸ್ ಇಂಜಿನಿಯರ್‌ಗಳ 36ನೇ ರಾಷ್ಟ್ರೀಯ ಸಮಾವೇಶದಲ್ಲಿ ಶುಕ್ರವಾರ ಮಾತನಾಡಿದರು. ಮುಂದಿನ 5 ವರ್ಷಗಳ ಅವಧಿಯಲ್ಲಿ ಏರೋಸ್ಪೇಸ್ ಮತ್ತು ರಕ್ಷಣಾ ವಲಯದಲ್ಲಿ 45,000 ಕೋಟಿ ರೂ. ಹೂಡಿಕೆಯನ್ನು ಆಕರ್ಷಿಸುವ ಗುರಿಯನ್ನು ಹೊಂದಿದೆ. ಇದು ಸುಮಾರು 60 ಸಾವಿರ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಜಾಗತಿಕ ಬಾಹ್ಯಾಕಾಶ ಆರ್ಥಿಕತೆಯ ಭಾಗವಾಗಿದ್ದು, ಈ ಕ್ಷೇತ್ರದಲ್ಲಿ ಖಾಸಗಿ ಸಹಭಾಗಿತ್ವವನ್ನು ಉತ್ತೇಜಿಸಲು ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿ ಹೆಚ್ಚಿನ ಪ್ರಗತಿ ಸಾಧಿಸಲು ಸರ್ಕಾರ ಹಲವು ಸುಧಾರಣಾ ಕ್ರಮಗಳನ್ನು ಆರಂಭಿಸಿದೆ. ಈ ಮೂಲಕ ರಾಜ್ಯದ ಜಾಗತಿಕ ಮಾರುಕಟ್ಟೆ ಪಾಲನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ ಎಂದು ತಿಳಿಸಿದರು.
ದೇಶದ ವಿಮಾನ ಮತ್ತು ಬಾಹ್ಯಾಕಾಶ ನೌಕೆ ಉದ್ಯಮದ ಶೇ.25 ರಷ್ಟು ಪಾಲನ್ನು ಕರ್ನಾಟಕ ಹೊಂದಿದೆ. ಅಲ್ಲದೆ ರಕ್ಷಣಾ ವ್ಯವಸ್ಥೆಗಾಗಿ ತಯಾರಿಸಲಾದ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳ ಶೇ.67 ಕೆಲಸವನ್ನು ಇಲ್ಲೇ ಮಾಡಲಾಗಿದೆ. ದೇಶದ ಏರೋಸ್ಪೇಸ್ ಸಂಬಂಧಿತ ರಫ್ತಿಗೆ ರಾಜ್ಯ 65% ಕೊಡುಗೆ ನೀಡುತ್ತಿದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಡಾ. ಮುಕೇಶ್ ಕುಮಾರ್ ಮತ್ತು ಡಾ. ಅಸ್ವತಿ ಸುರೇಂದ್ರನ್ ಅವರಿಗೆ ಯುವ ಎಂಜಿನಿಯರ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ಎಎಸ್ಡಿಬಿ ಅಧ್ಯಕ್ಷ ಡಾ. ಪಿ.ವಿ. ವೆಂಕಟಕೃಷ್ಣನ್, ಐಇಐ ಅಧ್ಯಕ್ಷ ಎಂ. ಲಕ್ಷ್ಮಣ್ ಮತ್ತಿತರರಿದ್ದರು.