ನ್ಯೂಸ್

ಅನರ್ಹರ ರೇಷನ್ ಕಾರ್ಡ್ ರದ್ದು; ಪ್ರಧಾನಿ ನಿವಾಸದ ಮುಂದೆ ಧರಣಿ ನಡೆಸಿ: ಬಿಜೆಪಿಗೆ ಎಂ‌.ಬಿ. ಪಾಟೀಲ್ ಸಲಹೆ​

ಮೋಹನ್​ ಶೆಟ್ಟಿ

ಬೆಂಗಳೂರು: ಅನರ್ಹರ ಬಿಪಿಎಲ್​ ಕಾರ್ಡ್​ ರದ್ದು ವಿಚಾರ ಇದೀಗ ರಾಜ್ಯದಲ್ಲಿ ದೊಡ್ಡ ಸಂಚಲವನ್ನೇ ಮೂಡಿಸಿದ್ದು. ಕಾಂಗ್ರೆಸ್​ ಸರ್ಕಾರದ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ. ಈ ವಿವಾದಕ್ಕೆ ಪ್ರತಿಕ್ರಿಯಿಸಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ, ರಾಜ್ಯದಲ್ಲಿ ಅನರ್ಹರ ಬಿಪಿಎಲ್ ಪಡಿತರ ಚೀಟಿ ರದ್ದುಪಡಿಸುತ್ತಿರುವುದನ್ನು ಬಿಜೆಪಿ ನಾಯಕರು ಪ್ರಶ್ನಿಸುತ್ತಿದ್ದಾರೆ. ಕೇಂದ್ರದ ಮೋದಿ ಸರಕಾರವೇ ಡಿಜಿಟಲೀಕರಣದ ಹೆಸರಿನಲ್ಲಿ 5.80 ಕೋಟಿ ರೇಷನ್ ಕಾರ್ಡ್ ರದ್ದುಪಡಿಸಿದೆ. ಬಿಜೆಪಿ ನಾಯಕರೇಕೆ ಈಗ ಗಪ್​ಚುಪ್ ಆಗಿದ್ದಾರೆ ತಮ್ಮ ಎಕ್ಸ್​ ಖಾತೆಯಲ್ಲಿ ಪ್ರಶ್ನಿಸಿದ್ದಾರೆ.

"ರಾಜ್ಯ ಬಿಜೆಪಿ ಇಬ್ಭಾಗವಾಗಿದೆ. ವಿಜಯೇಂದ್ರ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಯತ್ನಾಳ ಮತ್ತು ಅವರ ತಂಡ ಪ್ರಯತ್ನಿಸುತ್ತಿದೆ. ಈಗ ವಿನಾ ಕಾರಣ ಪಡಿತರ ಚೀಟಿ ಹೆಸರಿನಲ್ಲಿ ಗದ್ದಲ ಸೃಷ್ಟಿಸುತ್ತಿದ್ದಾರೆ. ಬಿಪಿಎಲ್ ಪಡಿತರ ಚೀಟಿಯು ನಿಜವಾದ ಬಡವರಿಗೆ ಸಿಗಬೇಕು. ಹೀಗಾಗಿಯೇ ರಾಜ್ಯ ಸರ್ಕಾರವು ಶ್ರೀಮಂತರು, ತೆರಿಗೆ ಪಾವತಿದಾರರು ಮತ್ತು ಸರಕಾರಿ ಅಧಿಕಾರಿಗಳ ಬಳಿ‌ ಇರುವ ಬಿಪಿಎಲ್ ಕಾರ್ಡ್​ಗಳನ್ನು ರದ್ದುಪಡಿಸುತ್ತಿದೆ. ರಾಜ್ಯ ಬಿಜೆಪಿ ನಾಯಕರು ಇದರ ವಿರುದ್ಧ ಮಾತನಾಡುವುದರಲ್ಲಿ ಯಾವುದೇ ಅರ್ಥವಿಲ್ಲ" ಎಂದು ಹೇಳಿದರು.

"ನಮ್ಮ ವಿರುದ್ಧ ಆರೋಪ ಮಾಡುತ್ತಿರುವ ವಿಜಯೇಂದ್ರ, ಅಶೋಕ, ಯತ್ನಾಳ ಅವರಿಗೆ ದೆಹಲಿಗೆ ಹೋಗಿ ಪ್ರಧಾನಿ ಮನೆಯ ಎದುರು ಧರಣಿ ಕೂರುವ ಧೈರ್ಯ ಇದೆಯೇ" ಎಂದು ಟ್ವೀಟ್​ ಮಾಡಿ ಟೀಕಿಸಿದ್ದಾರೆ.