ಹಾಗಾದರೆ ಕೋಟಿ ಕೋಟಿ ಜನ ದೇವರ ದರ್ಶನಕ್ಕೆ ಯಾವ ಭಾವನೆಯಲ್ಲಿ ತೆರಳುತ್ತಾರೆ? ಎಂದು ವಿಮಶಿಸಿದಾಗ ಕಂಡು ಬರುವುದು ಭಯದಿಂದ. ಏನಾಗಿ ಬಿಡುತ್ತದೆಯೋ? ದುರಿತಗಳು ಹರಿದು ಬಂದು ಬಿಡಬಹುದು, ಇರುವ ಕಷ್ಟಗಳು ಇನ್ನಷ್ಟು ಹೆಚ್ಚಬಹುದು ಎಂಬ ಭಯದಿಂದ. ಹುಡುಕಿದರೂ ಭಗವದ್ ಪ್ರೀತಿಯಿಂದ ಅವನ ದರುಶನಕ್ಕೆ ತೆರಳುವವರ ಸಂಖ್ಯೆ ಇಲ್ಲವೇ ಇಲ್ಲ ಎನ್ನಬಹುದು. ಕನಕದಾಸ, ಪುರಂದರದಾಸ, ಭಕ್ತೆ ಮೀರಾ ಅವರಂತಹ ನಿಜವಾದ ಭಗವದ್ ಭಕ್ತರು ಕಾಣುವುದಿಲ್ಲ.
ಇದು ಕಾಲಸ್ಥಿತಿಯ ನೈಜ ಚಿತ್ರಣ. ಭಗವಾನ್ ಶ್ರೀ ರಾಮಕೃಷ್ಣ ಪರಮಹಂಸರ ಬಳಿ ಆ ದಿನದ ಸತ್ಸಂಗಕ್ಕೆ ಬಂದಂತಹ ಭಕ್ತರಿಗೆ ಭಗವಂತನಿರುವುದು ಎಲ್ಲಿ? ಎಂಬುದನ್ನು ಅತ್ಯಂತ ಸರಳವಾಗಿ, ನೇರವಾಗಿ, ಖಚಿತವಾಗಿ ಉಪದೇಶಿಸುತ್ತಾರೆ. ಅದು ಹೀಗಿದೆ: ‘ಎಲ್ಲರಿಗೂ ಭಗವಂತನನ್ನು ಗ್ರಹಿಸಲು ಸಾಧ್ಯವೇ? ಆತ ಒಳ್ಳೆಯವರು, ಕೆಟ್ಟವರು, ಭಕ್ತರು, ಅಭಕ್ತರು, ವಿಶ್ವಾಸಿ, ಅವಿಶ್ವಾಸಿ - ಹೀಗೆ ಎಲ್ಲರನ್ನೂ ಸೃಷ್ಟಿಸಿದ್ದಾನೆ. ಆತನ ಸೃಷ್ಟಿಯಲ್ಲಿ ಈ ವೈಚಿತ್ರ್ಯವೆಲ್ಲ್ಲ ಇದೆ. ಆತನ ಶಕ್ತಿ ಕೆಲವಲ್ಲಿ ಅಧಿಕವಾಗಿ, ಇನ್ನು ಕೆಲವಲ್ಲಿ ಕಡಿಮೆಯಾಗಿ ವ್ಯಕ್ತವಾಗಿದೆ. ಸೂರ್ಯನ ಬೆಳಕು ಮಣ್ಣಿಗಿಂತ ನೀರಿನಲ್ಲಿ ಹೆಚ್ಚಾಗಿ ಪ್ರತಿಬಿಂಬಿತವಾಗುತ್ತದೆ; ಕನ್ನಡಿಯಲ್ಲಿ ಇನ್ನೂ ಅಧಿಕವಾಗಿ. ಹಾಗೆಯೇ ಭಕ್ತರಲ್ಲೂ ವಿವಿಧ ಅಂತಸ್ತಿನವರಿದ್ದಾರೆ. ಉತ್ತಮ, ಮಧ್ಯಮ, ಅಧಮ’.
ಅಧಮ ಭಕ್ತ ಹೇಳುತ್ತಾನೆ, ಭಗವಂತನಿದ್ದಾನೆ, ಆದರೆ ಆಕಾಶದಲ್ಲಿ ಬಹುದೂರದಲ್ಲಿ. ಮಧ್ಯಮ ಭಕ್ತನ ಪ್ರಕಾರ ಭಗವಂತ ಎಲ್ಲಾ ಭೂತಗಳಲ್ಲಿಯೂ ಚೈತನ್ಯ ರೂಪದಿಂದ, ಪ್ರಾಣರೂಪದಿಂದ ಇದ್ದಾನೆ. ಉತ್ತಮ ಭಕ್ತ ಹೇಳುವುದು, ಭಗವಂತನೇ ಎಲ್ಲವೂ ಆಗಿದ್ದಾನೆ, ಏನೇನಿದೆಯೋ ಅದೆಲ್ಲಾ ಭಗವಂತನ ಒಂದೊಂದು ರೂಪ. ಆತನೇ ಮಾಯಾ, ಜೀವ, ಜಗತ್ತು ಎಲ್ಲವೂ ಆಗಿದ್ದಾನೆ.
ಹಾಗೆಯೇ ಭಾಗವತದಲ್ಲಿಯೂ ಮೂರು ರೀತಿಯ ಭಕ್ತರ ವಿಚಾರ ಬರುತ್ತದೆ. ಕನಿಷ್ಠ ಅಧಿಕಾರಿ, ಮಧ್ಯಮ ಅಧಿಕಾರಿ ಮತ್ತು ಉತ್ತಮ ಅಧಿಕಾರಿ. ಕನಿಷ್ಠ ಅಧಿಕಾರಿ ಎಂದರೆ ಕೆಳಹಂತದ ಭಕ್ತರು, ಭಗವಂತನ ನಿಜ ಸ್ವರೂಪದ ಕಿಂಚಿತ್ತೂ ತಿಳಿವಳಿಕೆ ಇಲ್ಲದಿರುವ ಗುಂಪು. ಎರಡನೇ ಹಂತದ ಭಕ್ತರು ಮೊದಲು ತಿಳಿಸಿದವರಿಗಿಂತ ಉತ್ತಮರು. ಸದಾ ಭಗವದ್ ಚಿಂತನೆ, ಸ್ಮರಣೆ ಹಾಗೂ ಭಕ್ತರ ಸಂಗದಲ್ಲಿರಲು ಪ್ರಯತ್ನಿಸುತ್ತಾರೆ. ಉತ್ತಮ ಅಧಿಕಾರಿಯೆಂದರೆ ಭಗವಂತನನ್ನು ಕೇವಲ ದೇವಾಲಯ, ಪುಣ್ಯ ಕ್ಷೇತ್ರ ಇತ್ಯಾದಿಗೆ ಸೀಮಿತಗೊಳಿಸದೆ ಸರ್ವಾಂತರ್ಯಾಮಿಯಾಗಿ ಎಲ್ಲರಲ್ಲೂ, ಎಲ್ಲ ಪ್ರದೇಶಗಳಲ್ಲಿಯೂ ಭಗವಂತನನ್ನು ಬಿಟ್ಟು ಬೇರೇನೂ ಕಾಣುವುದಿಲ್ಲ ! ಎಲ್ಲರಲ್ಲಿಯೂ ಆ ದಿವ್ಯತೆಯನ್ನು ಕಾಣುತ್ತಾರೆ. ಉತ್ತಮ ಭಕ್ತರಿಗೆ ಭಗವದ್ ದರ್ಶನ ಖಂಡಿತಾ ಲಭಿಸುವುದು. ಕಾರಣ, ಅವರು ಭಗವಂತನಲ್ಲದೆ ಬೇರೇನನ್ನೂ ಈ ಜಗತ್ತಿನಲ್ಲಿ ಕಾಣುವುದಿಲ್ಲ ಮತ್ತು ಬಯಸುವುದೂ ಇಲ್ಲ. ದಾಸರ ಪದದಂತೆ ‘ಅಲ್ಲಿ ನೋಡಲು ರಾಮ, ಇಲ್ಲಿ ನೋಡಲು ರಾಮ, ಎಲ್ಲೆಲ್ಲಿ ನೋಡಿದರೂ ರಾಮನೇ ...’ ಎಂಬ ಪವಿತ್ರ ಭಾವನೆಯುಳ್ಳ ಗುಂಪೇ ಉತ್ಕೃ್ಟವಾದುದು. ಒಂದು ಸಂಭಾಷಣೆ ಹೀಗಿದೆ:
‘ಭಗವದ್ದರ್ಶನ ದೊರೆತಿದೆಯೋ ಇಲ್ಲವೋ ಎಂಬುದನ್ನು ಅರಿಯಲು ಲಕ್ಷಣಗಳಿವೆ. ಆತ ಕೆಲವು ವೇಳೆ ಉನ್ಮತ್ತನ ಹಾಗೆ ನಗುತ್ತಾನೆ, ಅಳುತ್ತಾನೆ, ನರ್ತಿಸುತ್ತಾನೆ. ಇನ್ನು ಕೆಲವು ವೇಳೆ ಬಾಲಕನ ಹಾಗೆ, ಅಂದರೆ ಪುಟ್ಟ ಬಾಲಕನ ಹಾಗೆ ಸರಳವಾಗಿ, ಉದಾರಿಯಾಗಿ, ಅಹಂಕಾರ ಶೂನ್ಯನಾಗಿ, ಯಾವ ವಸ್ತುವಿನಲ್ಲೂ ಆಸಕ್ತಿಯಿಲ್ಲದವನಾಗಿ, ಯಾವ ಗುಣಕ್ಕೂ ವಶವಾಗದವನಾಗಿ ಸದಾನಂದಮಯನಾಗಿ ಇರುತ್ತಾನೆ’- ಇದು ರಾಮಕೃಷ್ಣ ಪರಮಹಂಸರು ತಿಳಿಸಿದ ನಿಜವಾದ ಅರ್ಥದಲ್ಲಿ ಭಗವದ್ದರ್ಶನ ಪಡೆದವನ ಸ್ಥಿತಿ! ಸ್ವಯಂ ರಾಮಕೃಷ್ಣರೇ ತಮ್ಮ ಸಾಧನಾ ಪರ್ವದಲ್ಲಿ ಈ ತೆರನಾದ ಅನುಭವಗಳನ್ನು ಪಡೆದಿದ್ದಾರೆೆ. ಹಾಗಾಗಿ ಅವರ ನುಡಿಗಳು ಕೇವಲ ಊಹೆ, ಭ್ರಮೆಯಲ್ಲ, ಬದಲಾಗಿ ಸದಾನಂದಮಯನ ನಿಜಾನುಭಾವ ನುಡಿಗಳು.
ಭಗವದ್ದರ್ಶನ ಎಂಬುದು ತೋರ್ಪಡಿಕೆ ಅಥವಾ ನಾಟಕವೇ? - ಇಲ್ಲ. ಖಂಡಿತಾ ಇಲ್ಲ, ಆ ದಿಟ್ಟ ಆನಂದಮಯ ಚೈತನ್ಯದ ದರುಶನ ದೊರೆಯಿತು ಎಂದರೆ ಆತ ಸದಾನಂದಮಯನಾಗುತ್ತಾನೆ, ದೇವಮಾನವನಾಗುತ್ತಾನೆ, ಅವತಾರವರಿಷ್ಠನಾಗುತ್ತಾನೆ. ಇದೇ ನಿಜವಾದ ಅರ್ಥದಲ್ಲಿ ಭಗವಂತನ ದರುಶನ !
(ಲೇಖಕರು ಶ್ರೀ ರಾಮಕೃಷ್ಣ ಸೇವಾಶ್ರಮ, ಪಾವಗಡದ ಅಧ್ಯಕ್ಷರು. ಪ್ರತಿಕ್ರಿಯಿಸಿ: vvsudina@gmail.com, swajapa@gmail.com)