ಬೆಂಗಳೂರು ವಿನಾಯಕ ನಗರದಲ್ಲಿ ಗೋವಿನ ಮೇಲೆ ಕ್ರೂರತ್ವ ಎಸಗಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ರಾಷ್ಟ್ರಭಕ್ತರ ಬಳಗದ ಕೆ.ಎಸ್.ಈಶ್ವರಪ್ಪ, ಕೆ.ಇ.ಕಾಂತೇಶ್, ಇ.ವಿಶ್ವಾಸ್, ಲಕ್ಷ್ಮೀ ಶಂಕರ ನಾಯ್ಕ, ಶ್ರೀಕಾಂತ್, ಮಹಾಲಿಂಗಯ್ಯ ಶಾಸ್ತ್ರಿ ಮುಂತಾದವರು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.  
ನ್ಯೂಸ್

ಕೆಚ್ಚಲು ಕತ್ತರಿಸಿದವರಿಗೆ ತಕ್ಕ ಶಾಸ್ತ್ರಿಯಾಗಲಿ: ಈಶ್ವರಪ್ಪ

ಶಿವಮೊಗ್ಗ: ಬೆಂಗಳೂರು ವಿನಾಯಕ ನಗರದಲ್ಲಿ ಗೋವಿನ ಕೆಚ್ಚಲು ಕತ್ತರಿಸಿ ವಿಕೃತಿ ಮೆರೆದವರಿಗೆ ಕಠಿಣ ಶಿಕ್ಷೆ ನೀಡಬೇಕು. ಇಂತಹ ವ್ಯಕ್ತಿಗಳಿಗೆ ಕುಮ್ಮಕ್ಕು ನೀಡುತ್ತಿರುವ ದೇಶದ್ರೋಹಿ ಸಂಘಟನೆಗಳನ್ನು ಪತ್ತೆ ಮಾಡಿ ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ರಾಷ್ಟ್ರಭಕ್ತರ ಬಳಗದಿಂದ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಗೋಮಾತೆಯ ಕೆಚ್ಚಲನ್ನು ಕತ್ತರಿಸುವ ಮೂಲಕ ಬಹುಸಂಖ್ಯಾತ ಹಿಂದೂಗಳ ಆರಾಧ್ಯದೈವವಾದ ಗೋಮಾತೆಯನ್ನು ಘಾಸಿಗೊಳಿಸಲಾಗಿದೆ. ಹಿಂದುಗಳ ಧಾರ್ಮಿಕ ನಂಬಿಕೆ ಮೇಲೆ ಪ್ರಹಾರ ಮಾಡಲಾಗಿದೆ. ಆತ ಮಾನಸಿಕ ಅಸ್ವಸ್ಥ ಎಂಬುದು ಪೊಲೀಸರ ಕಟ್ಟುಕತೆಯಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಅಲ್ಪಸಂಖ್ಯಾತರನ್ನು ಓಲೈಸುವುದಕ್ಕಾಗಿ ಮತ್ತು ಬಹುಸಂಖ್ಯಾತ ಹಿಂದೂಗಳ ಧಾರ್ಮಿಕ ನಂಬಿಕೆಗಳ ಮೇಲೆ ದಾಳಿ ನಡೆಸುವ ಪ್ರಯತ್ನಗಳಿಗೆ ರಾಜ್ಯ ಸರ್ಕಾರ ಬೆಂಬಲ ನೀಡುತ್ತಿದೆ ಎಂಬ ಸಂಶಯ ವ್ಯಕ್ತವಾಗುತ್ತಿದೆ. ಈ ಪ್ರಕರಣದಲ್ಲಿ ದುಷ್ಕೃತ್ಯವೆಸಗಿದ ವ್ಯಕ್ತಿಗೆ ಕೂಡಲೇ ಘೋರ ಶಿಕ್ಷೆ ಕೊಡಬೇಕು. ರಾಜ್ಯದಲ್ಲಿ ಸೂಕ್ತ ಮತ್ತು ಕಠಿಣವಾದ ವಲಸೆ ನೀತಿಯನ್ನು ಜಾರಿಗೊಳಸಿಬೇಕೆಂದು ಆಗ್ರಹಿಸಿದರು.

ಜಿಪಂ ಮಾಜಿ ಸದಸ್ಯ ಕೆ.ಇ. ಕಾಂತೇಶ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಮಹಾಲಿಂಗಯ್ಯ ಶಾಸ್ತ್ರಿ, ಮಾಜಿ ಉಪಮೇಯರ್ ಲಕ್ಷ್ಮೀ ಶಂಕರ ನಾಯ್ಕ, ಪಾಲಿಕೆ ಮಾಜಿ ಸದಸ್ಯ ಇ.ವಿಶ್ವಾಸ್, ಪ್ರಮುಖರಾದ ಶ್ರೀಕಾಂತ್, ಜಾದವ್, ಪ್ರಕಾಶ್ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.