ಚಿಕ್ಕಮಗಳೂರು: ಮಣಿಪುರದಲ್ಲಿ ಹಿಂಸಾಚಾರಕ್ಕೆ ಕಾರಣರಾದ, ದೌರ್ಜನ್ಯ ನಡೆಸಿದವರನ್ನು ಬಂಧಿಸಿ ಕಠಿಣ ಶಿಕ್ಷೆಯಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಶಾಂತಿ ಮತ್ತು ಸೌಹಾರ್ದತೆಯ ಒಕ್ಕೂಟದ ಪದಾಧಿಕಾರಿಗಳು ಶುಕ್ರವಾರ ನಗರದ ಹನುಮಂತಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಮಣಿಪುರದಲ್ಲಿ ಕುಕಿ ಸಮುದಾಯದ ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿರುವ ಆರೋಪಿಗಳನ್ನು ಬಂಧಿಸಿ ಶಿಕ್ಷೆಗೆ ಒಳಪಡಿಸಬೇಕು. ಈ ಕೃತ್ಯದಿಂದ ಇಡೀ ಸಮಾಜ ತಲೆ ತಗ್ಗಿಸುವಂತಾಗಿದೆ. ಆರೋಪಿಗಳನ್ನು ಬಂಧಿಸಿ ಅಲ್ಲಿ ಶಾಂತಿ ನೆಲೆಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಚಿಕ್ಕಮಗಳೂರಿನ ಧರ್ಮಾಧ್ಯಕ್ಷ ಡಾ. ಟಿ.ಅಂತೋಣಿ ಸ್ವಾಮಿ ಒತ್ತಾಯಿಸಿದರು.
ಸಮಾಜದಲ್ಲಿ ಶೋಷಿತ, ಹಿಂದುಳಿದ ಸಮುದಾಯಗಳ ಮೇಲೆ ನಿರಂತರ ದೌರ್ಜನ್ಯ, ಶೋಷಣೆ, ದಬ್ಬಾಳಿಕೆ ನಡೆಯುತ್ತಲೇ ಇದೆ. ಅಲ್ಪಸಂಖ್ಯಾತರ ಶಕ್ತಿಯನ್ನು ಕುಗ್ಗಿಸುವ ಕೆಲಸ ನಡೆದಿದೆ. ಅಲ್ಲಿ ಘಟನೆ ನಡೆದು ಹಲವು ದಿನಗಳು ಕಳೆದ ಮೇಲೆ ಬೆಳಕಿಗೆ ಬಂದಿದೆ. ಇಂತಹ ಪ್ರಕರಣಗಳು ಮರುಕಳಿಸದಂತೆ ಸರ್ಕಾರ ಎಚ್ಚರವಹಿಸಬೇಕು ಎಂದು ಆಗ್ರಹಿಸಿದರು.
ಹಿಂಸಾಚಾರದಲ್ಲಿ ಅಮಾಯಕರು ಜೀವ ಕಳೆದುಕೊಂಡಿದ್ದಾರೆ. ಪ್ರಾರ್ಥನಾ ಮಂದಿರಗಳನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ್ದಾರೆ. ಮಹಿಳೆಯರನ್ನು ಅಮಾನುಷವಾಗಿ ನಡೆಸಿಕೊಂಡಿದ್ದಾರೆ. ಈ ಕೃತ್ಯದ ವಿರುದ್ಧ ಇಡೀ ದೇಶದಲ್ಲಿ ವ್ಯಾಪಕ ವಿರೋಧಗಳು ವ್ಯಕ್ತವಾಗಿದ್ದರೂ ಸರ್ಕಾರ ಮೌನಕ್ಕೆ ಶರಣಾಗಿದೆ ಎಂದು ದೂರಿದರು.
ಸಾಮೂಹಿಕ ಅತ್ಯಾಚಾರ ಮಾಡಿ ಜೀವಂತವಾಗಿ ಸುಟ್ಟುಹಾಕುತ್ತಾರೆ ಎಂದರೆ ನಮ್ಮ ಸಮಾಜ ಎತ್ತ ಸಾಗುತ್ತಿದೆ ಎಂಬುದನ್ನು ಊಹಿಸಿಕೊಳ್ಳಲಾಗುತ್ತಿಲ್ಲ. ಜನಾಂಗೀಯ ಗಲಭೆಯನ್ನು ತಕ್ಷಣ ನಿಲ್ಲಿಸಿ ಅಲ್ಲಿ ಶಾಂತಿಗೆ ಭಂಗ ತರುವ ವ್ಯಕ್ತಿಗಳನ್ನು ಬಂಧಿಸಬೇಕು. ಅಪರಾಧಿಗಳಿಗೆ ಗಲ್ಲುಶಿಕ್ಷೆ ವಿಧಿಸಬೇಕು ಎಂದು ತಿಳಿಸಿದರು.
ಸಂತ ಜೋಸೆಫರ ಪ್ರಧಾನಾಲಯದ ಗುರು ಅಂತೋಣಿ ಪಿಂಟೊ, ಮಾರ್ಸೆಲ್ ಪಿಂಟೊ, ರೆವರೆಂಡ್ ಸಿ.ಜಾರ್ಜ್ ವಿನೋದಕುಮಾರ್, ಪಾಸ್ಟರ್ ಸುಂದರ್‌ಬಾಬು, ಶ್ರೀಧರ್ ಸ್ಯಾಮುಯೆಲ್, ಉಪ್ಪಳ್ಳಿ ಮೌಲ್ವಿ ಔರಂಗಜೇಬ್, ಜಾನ್ ಎ ಸಚಿನ್, ರೂಬಿನ್ ಮೊಸಸ್ ಇತರರಿದ್ದರು.