ಶಿವಮೊಗ್ಗದಲ್ಲಿ ದೇವಾಂಗ ಸಮಾಜದ ಸುವರ್ಣ ಮಹೋತ್ಸವದಲ್ಲಿ ವಿವಿಧ ಕ್ಷೇತ್ರದ ಸಾಧಕರಾದ ಡಾ. ಡಿ.ನಾಗರಾಜ್, ಶ್ರೀನಿವಾಸಮೂರ್ತಿ, ರಮೇಶ್ ಬಾಬು ಯಾಳಗಿ, ಡಾ. ಎಸ್.ಗುರುಪ್ರಸಾದ್, ಕಲ್ಪನಾ ಅರವಿಂದ್ ಅವರನ್ನು ಸನ್ಮಾನಿಸಲಾಯಿತು. ಶ್ರೀ ದಯಾನಂದಪುರಿ ಸ್ವಾಮೀಜಿ, ಶ್ರೀ ಶಿವಾನಂದ ಸ್ವಾಮೀಜಿ, ಮಧು ಬಂಗಾರಪ್ಪ, ಬಿ.ವೈ.ರಾಘವೇಂದ್ರ, ಪಿ.ಆರ್.ಗಿರಿಯಪ್ಪ, ಅರುಣ್ ವರಾಡೆ, ಆರ್.ಪ್ರಕಾಶ್, ಯು.ರಾಮಪ್ಪ, ಕೆ.ಬಿ.ಭಾಸ್ಕರಯ್ಯ ಇತರರಿದ್ದರು. 
ನ್ಯೂಸ್

ದೇವಾಂಗ ಸಮಾಜ ಇನ್ನಷ್ಟು ಸಂಘಟಿತವಾಗಲಿ

ನವೀನ ಬಿ.ಎಂ

ಶಿವಮೊಗ್ಗ: ದೇವಾಂಗ ಸಮಾಜದ ಮುಖ್ಯ ವೃತ್ತಿ ನೇಕಾರಿಕೆ. ಈ ಸಮುದಾಯವು ಜಗಕ್ಕೆ ಹಿತ ಕಾಯುವ ಕೆಲಸವನ್ನು ಸದಾ ಮಾಡುತ್ತಿದೆ ಎಂದು ಹಂಪಿ-ಹೇಮಕೂಟ ಗಾಯತ್ರಿ ಪೀಠದ ಪೀಠಾಧ್ಯಕ್ಷ ಶ್ರೀ ದಯಾನಂದಪುರಿ ಸ್ವಾಮೀಜಿ ಹೇಳಿದರು.

ಕುವೆಂಪು ರಂಗಮಂದಿರದಲ್ಲಿ ಭಾನುವಾರ ಮಲೆನಾಡು ದೇವಾಂಗ ಸಮಾಜದ ದೇವರ ದಾಸಿಮಯ್ಯ ಸಭಾಭವನ ಮತ್ತು ಸುವರ್ಣ ಮಹೋತ್ಸವ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀವರ್ಚನ ನೀಡಿದ ಅವರು, ನಾವೆಲ್ಲರೂ ಸಮಾಜವನ್ನು ಸಂಘಟನೆ ಮಾಡಬೇಕಿದೆ. ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಬೇಕಿದೆ ಎಂದರು.

ಜಗತ್ತಿನಲ್ಲಿ ಸೇವೆಯೇ ಪರಮ ಧರ್ಮವಾಗಬೇಕು. ಅದು ಯಾವ ರೀತಿ ಇರಬೇಕೆಂದರೆ ರಾಮನಿಗೆ ಹನುಮಂತ ಸೇವೆ ಮಾಡಿದಂತೆ ಇರಬೇಕು. ಸೇವೆ ಎಂಬುದು ಯಾವತ್ತೂ ಶಾಶ್ವತ. ಸಮಾಜದ ಹಿರಿಯರ ಆಶಯದಂತೆ ಜೀವನದಲ್ಲಿ ಮುನ್ನಡೆದರೆ ಜಗತ್ತಿನಲ್ಲಿ ಸಮಾಜ ತಲೆ ಎತ್ತಿ ನಡೆಯಲು ಸಾಧ್ಯವಾಗಲಿದೆ ಎಂದು ಹೇಳಿದರು.

ದೇವಾಂಗ ಸಮಾಜ ಇಡೀ ರಾಜ್ಯಕ್ಕೆ ಮಾದರಿಯಾಗಿದೆ. ಬೇರೆ ಜಿಲ್ಲೆ ಅಥವಾ ರಾಜ್ಯಗಳಿಗೆ ಹೋಲಿಸಿದರೆ ಕಾರ್ಯಚಟುವಟಿಕೆಯಲ್ಲಿ ಮಲೆನಾಡು ದೇವಾಂಗ ಸಮಾಜ ಮುಂಚೂಣಿಯಲ್ಲಿದೆ. ಈ ಬಗ್ಗೆ ಎಲ್ಲರೂ ಹೆಮ್ಮೆಪಡಬೇಕು ಎಂದು ತಿಳಿಸಿದರು.

ಧಾರವಾಡ ಜಿಲ್ಲೆ ಕವಲಗೇರಿ ಶಿವಾನಂದ ಮಠದ ಶ್ರೀ ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಲೆನಾಡು ದೇವಾಂಗ ಸಮಾಜದ ಅಧ್ಯಕ್ಷ ಪಿ.ಆರ್.ಗಿರಿಯಪ್ಪ ಅಧ್ಯಕ್ಷತೆ ವಹಿಸಿದ್ದರು.

ಶಾಸಕ ಎಸ್.ಎನ್.ಚನ್ನಬಸಪ್ಪ, ಅಖಿಲ ಭಾರತ ದೇವಾಂಗ ಸಂಘದ ಅಧ್ಯಕ್ಷ ಅರುಣ್ ವರಾಡೆ, ಸಿಎಂ ಕಾರ್ಯದರ್ಶಿ ಕೆ.ಆರ್.ಶ್ರೀನಿವಾಸ್, ಕೃಷಿ ಮತ್ತು ತೋಟಗಾರಿಕೆ ವಿವಿ ಕುಲಪತಿ ಡಾ. ಸಿ.ವಾಸುದೇವಪ್ಪ, ಶಿವಮೊಗ್ಗ ಮೆಸ್ಕಾಂ ಅಧೀಕ್ಷಕ ಅಭಿಯಂತ ಬಿ.ಆರ್.ಯೋಗೀಶ್, ಸಮಾಜದ ಗೌರವಾಧ್ಯಕ್ಷ ಅರೇಕಲ್ ಆರ್.ಪ್ರಕಾಶ್, ಉಪಾಧ್ಯಕ್ಷ ಯು.ರಾಮಪ್ಪ, ದೇವಾಂಗ ನೌಕರರ ಸಂಘದ ಅಧ್ಯಕ್ಷ ಕೆ.ಬಿ.ಭಾಸ್ಕರಯ್ಯ, ಶಿವಮೊಗ್ಗ ಜಿಲ್ಲಾ ದೇವಾಂಗ ಸಂಘದ ಅಧ್ಯಕ್ಷ ಟಿ.ರಾಜೇಶ್, ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ಕೆ.ಶ್ರೀನಿವಾಸ್ ಇತರರಿದ್ದರು.

ಐವರು ಸಾಧಕರಿಗೆ ಸನ್ಮಾನ

ಅಂತಾರಾಷ್ಟ್ರೀಯ ಕ್ರೀಡಾಪಟು ಡಾ. ಡಿ.ನಾಗರಾಜ್, ಹಿರಿಯ ನಟ ಶ್ರೀನಿವಾಸಮೂರ್ತಿ, ಲೇಖಕ ರಮೇಶ್ ಬಾಬು ಯಾಳಗಿ, ಡಿಆರ್‌ಡಿಒ ಡೈರೆಕ್ಟರ್ ಜನರಲ್ ಡಾ. ಎಸ್.ಗುರುಪ್ರಸಾದ್, ಇಸ್ರೋ ವಿಜ್ಞಾನಿ ಕಲ್ಪನಾ ಅರವಿಂದ್ ಅವರನ್ನು ಸನ್ಮಾನಿಸಲಾಯಿತು. ಇದೇ ವೇಳೆ ಸಮಾಜದ ಹಿರಿಯರಾದ ಶಿವಮೊಗ್ಗದ ಹುಚ್ಚರಾಯಪ್ಪ, ಎಚ್.ತಿಮ್ಮಪ್ಪ, ಡಿ.ತಿಮ್ಮಪ್ಪ, ತರೀಕೆರೆಯ ಟಿ.ಕೆ.ಶಂಕರಪ್ಪ, ಬಿರೂರಿನ ಅರೇಕಲ್ ಆರ್. ಕಾಂತರಾಜ್, ಕಡೂರಿನ ಬೆಂಕಿ ಶೇಖರಪ್ಪ ಅವರನ್ನು ಗೌರವಿಸಲಾಯಿತು.