ನ್ಯೂಸ್

ಮಹತ್ವದ ಸುಧಾರಣೆಗಳು ಸಮರ್ಪಕವಾಗಿ ಅನುಷ್ಠಾನಕ್ಕೆ ಬರಲಿ

theerthaswamy

ಹದಿನೈದನೇ ವಿಧಾನಸಭೆಯ ಹನ್ನೆರಡನೇ ಅಧಿವೇಶನ ಸೋಮವಾರದಿಂದ ಆರಂಭವಾಗಿದೆ. ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡಿದ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಸರ್ಕಾರದ ಸಾಧನೆಗಳನ್ನು ವಿವರಿಸುವ ಜತೆಗೆ, ಹಲವು ಮಹತ್ವದ ಘೋಷಣೆಗಳನ್ನೂ ಮಾಡಿರುವುದು ಗಮನಾರ್ಹ. ಮುಂದಿನ ವರ್ಷ ರಾಜ್ಯ ವಿಧಾನಸಭೆ ಚುನಾವಣೆ ನಡೆಯಲಿರುವುದರಿಂದ, ಅದಕ್ಕೆ ತಯಾರಿ ಎಂಬಂತೆ ಹಲವು ಸುಧಾರಣಾಕ್ರಮಗಳನ್ನು ಪ್ರಕಟಿಸಲಾಗಿದೆ. ಪ್ರತಿಪಕ್ಷಗಳು ರಾಜ್ಯಪಾಲರ ಭಾಷಣವನ್ನು ಟೀಕಿಸಿದ್ದು, ‘ಹೊಸದು ಏನಿಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿವೆಯಾದರೂ, ಕೆಲ ಅಂಶಗಳು ಸಾಮಾನ್ಯ ಜನರ ಗಮನವನ್ನೂ ಸೆಳೆದಿವೆ.

ಸದ್ಯ ಆದ್ಯತಾ ಪಡಿತರ ಚೀಟಿ ಹೊಂದಿದ ಪ್ರತಿ ಕುಟುಂಬಕ್ಕೆ 5 ಕೆ.ಜಿ. ಧಾನ್ಯವನ್ನು ಪ್ರತಿ ತಿಂಗಳು ಹಂಚಲಾಗುತ್ತಿದೆ, ಸರ್ಕಾರವು ಹೆಚ್ಚುವರಿಯಾಗಿ ಒಂದು ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲು ಉದ್ದೇಶಿಸಿದ್ದು, ಏಪ್ರಿಲ್ 1ರಿಂದ ಜಾರಿಗೆ ಬರಲಿದೆ. ರಾಜ್ಯದಲ್ಲಿರುವ 1.14 ಕೋಟಿ ಬಿಪಿಎಲ್ ಕಾರ್ಡ್​ದಾರರಿಗೆ ಈ ತೀರ್ವನದಿಂದ ಅನುಕೂಲವಾಗಲಿದೆ. ‘ಮರಳಿ ತಾಯ್ನಾಡಿಗೆ’ ಕುತೂಹಲ ಮೂಡಿಸಿರುವ ಘೋಷಣೆ. ವಿದೇಶದಲ್ಲಿರುವ ಕನ್ನಡಿಗರ ಜ್ಞಾನವನ್ನು ಸ್ವದೇಶದಲ್ಲಿ ಬಳಸಿಕೊಳ್ಳಲು ಈ ಯೋಜನೆ ಅನುಷ್ಠಾನಕ್ಕೆ ಬರಲಿದೆ.

ಈ ಕುರಿತಂತೆ ಸೂಕ್ತ ನೀತಿ ರಚನೆಯಾಗಬೇಕಿದ್ದು, ಮುಂದಿನ ದಿನಗಳಲ್ಲಿ ಅನುದಾನ ಬಿಡುಗಡೆಗೊಳಿಸಲು ಸರ್ಕಾರ ಮುಂದಾಗಿದೆ. ಪ್ರತಿಭಾವಂತ ಕನ್ನಡಿಗರು ವಿದೇಶಗಳಲ್ಲಿ ನೆಲೆಸಿದ್ದು, ಅವರೂ ತಮ್ಮ ತಾಯ್ನಾಡಿಗಾಗಿ ಕೊಡುಗೆ ನೀಡಲು ಉತ್ಸುಕರಾಗಿದ್ದಾರೆ. ಆದರೆ, ಈ ಸಂಬಂಧ ಸೂಕ್ತ ವೇದಿಕೆಯ ಕೊರತೆ ಕಾಡುತ್ತಿತ್ತು. ‘ಮರಳಿ ತಾಯ್ನಾಡಿಗೆ’ ಯೋಜನೆ ಮೂಲಕ ಆ ಕೊರತೆ ನಿವಾರಣೆಯಾದರೆ ಖಂಡಿತವಾಗಿಯೂ, ಕೌಶಲಾಭಿವೃದ್ಧಿ ಮತ್ತು ಹಲವು ಕ್ಷೇತ್ರಗಳ ಸುಧಾರಣೆ ನಿಟ್ಟಿನಲ್ಲಿ ಪ್ರಯೋಜನಕಾರಿಯಾಗಬಹುದು.

ಬೆಂಗಳೂರಿನ ರಸ್ತೆಗುಂಡಿಗಳ ಕುರಿತಂತೆಯೂ ರಾಜ್ಯಪಾಲರು ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ. ಸಾವಿರಾರು ಕೋಟಿ ರೂಪಾಯಿಯನ್ನು ರಸ್ತೆದುರಸ್ತಿಗೆಂದು ಖರ್ಚು ಮಾಡಿದರೂ, ಹೈಕೋರ್ಟ್ ಎಚ್ಚರಿಕೆ ನೀಡಿದರೂ ಪರಿಸ್ಥಿತಿ ಸುಧಾರಣೆಯಾಗಿಲ್ಲ. ಇತ್ತೀಚಿನ ದಿನಗಳಲ್ಲಂತೂ ಹಲವರು ಈ ರಸ್ತೆಗುಂಡಿಗಳಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ. ‘ಬಿಬಿಎಂಪಿಯು 158.27 ಕಿಮೀ ಉದ್ದದ 77 ರಸ್ತೆಗಳನ್ನು ಗುಂಡಿಮುಕ್ತಗೊಳಿಸಲು ಆಯ್ಕೆ ಮಾಡಿದೆ’ ಎಂದು ರಾಜ್ಯಪಾಲರು ಹೇಳಿದ್ದು, ಈ ಕಾಮಗಾರಿಗಳು ಗುಣಮಟ್ಟದ್ದಾಗಿರಬೇಕು, ಬೆಂಗಳೂರು ರಸ್ತೆಗುಂಡಿ ಸಮಸ್ಯೆಯಿಂದ ಮುಕ್ತಿ ಹೊಂದುವಂತಾದರೆ, ಜನರ ಜೀವ ಉಳಿಯುವ ಜತೆಗೆ, ಕೋಟ್ಯಂತರ ರೂಪಾಯಿ ಅನುದಾನದ ಖರ್ಚು ಸಾರ್ಥಕವಾದಂತೆ.

ಕರೊನಾ ಸೋಂಕು ಪ್ರಸಕ್ತ ನಿಯಂತ್ರಣದಲ್ಲಿದೆಯಾದರೂ, ಸೂಕ್ತ ಎಚ್ಚರ ವಹಿಸುವುದು ಅಗತ್ಯವಾಗಿದೆ. ಕರೊನಾ ಸಂಕಷ್ಟದಿಂದ ನಷ್ಟ ಹೊಂದಿದ ವಿವಿಧ ವಲಯಗಳ ಪುನಶ್ಚೇತನಕ್ಕೆ ಸಮರ್ಥ ಹಾದಿಯನ್ನು ರೂಪಿಸಿ ಕೊಡುವುದು ಸರ್ಕಾರದ ಕರ್ತವ್ಯವಾಗಿದೆ. ಮುಂದಿನ ದಿನಗಳಲ್ಲಿ ಅಧಿವೇಶನವು ಅರ್ಥಪೂರ್ಣ ಚರ್ಚೆಗೆ ವೇದಿಕೆಯಾಗಲಿ. ರಾಜ್ಯ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಕುರಿತಂತೆ ರಚನಾತ್ಮಕ ಚರ್ಚೆ ನಡೆದು, ಪರಿಹಾರ ಸೂತ್ರ ಕಂಡುಕೊಳ್ಳಲಿ. ಹಾಗೆಯೇ, ಸರ್ಕಾರದ ಹೊಸ ಘೋಷಣೆಗಳು ಅನುಷ್ಠಾನದ ಮಾರ್ಗದಲ್ಲಿ ಎಡವಬಾರದು ಅಥವಾ ಕೆಲ ಸಮಯದ ನಂತರ ಮೂಲೆಗೆ ಸೇರಬಾರದು. ಪರಿಣಾಮಕಾರಿಯಾಗಿ ಜಾರಿಗೊಳಿಸುವ ಮೂಲಕ ಸರ್ಕಾರ ತನ್ನ ಇಚ್ಛಾಶಕ್ತಿ ಪ್ರದರ್ಶಿಸುವುದು ಅಗತ್ಯ.