ಸರಗೂರು ತಾಲೂಕಿನ ಹೆಡಿಯಾಲ ಅರಣ್ಯ ಇಲಾಖೆ ಕಚೇರಿಯಲ್ಲಿ ಬೇಲದಕುಪ್ಪೆ ಮಹದೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ಶಾಸಕ ಅನಿಲ್‌ಕುಮಾರ್ ಮಾತನಾಡಿದರು. ಮೋಹನಕುಮಾರಿ, ಸತೀಶ್, ಪ್ರೇಮಕುಮಾರಿ, ಲಕ್ಷ್ಮಿಕಾಂತ್ ಇತರರು ಇದ್ದರು. 
ನ್ಯೂಸ್

ಬೇಲದಕುಪ್ಪೆ ಮಹದೇಶ್ವರ ಜಾತ್ರೆ ಅದ್ದೂರಿಯಾಗಿರಲಿ

ಶಾಸಕ ಅನಿಲ್‌ಕುಮಾರ್ ಸೂಚನೆ

ಸರಗೂರು : ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಅರಣ್ಯ ವ್ಯಾಪ್ತಿಯಲ್ಲಿರುವ ಬೇಲದಕುಪ್ಪೆ ಮಹದೇಶ್ವರ ದೇವಸ್ಥಾನದಲ್ಲಿ ಕಡೆಯ ಕಾರ್ತಿಕ ಮಾಸದಂದು ನಡೆಯಲಿರುವ ಜಾತ್ರಾ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಯಿತು.

ತಾಲೂಕಿನ ಸಮೀಪದ ಹೆಡಿಯಾಲ ವಲಯ ಅರಣ್ಯ ಕಚೇರಿಯಲ್ಲಿ ಜಾತ್ರಾ ಮಹೋತ್ಸವ ಅಂಗವಾಗಿ ಶಾಸಕ ಅನಿಲ್‌ಕುಮಾರ್ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಪೂರ್ವಭಾವಿ ಸಭೆಯಲ್ಲಿ ನ.23ರಿಂದ 26 ರವರೆಗೆ ನಾಲ್ಕು ದಿನಗಳ ಕಾಲ ಗ್ರಾಮೀಣ ಹಾಗೂ ಧಾರ್ಮಿಕ ಸಂಪ್ರದಾಯದಂತೆ ಜಾತ್ರೆ ನಡೆಸಲು ತೀರ್ಮಾನಿಸಲಾಯಿತು.

ಶಾಸಕ ಅನಿಲ್‌ಕುಮಾರ್ ಮಾತನಾಡಿ, ಜಾನುವಾರು, ಭಕ್ತಾದಿಗಳಿಗೆ ಪ್ರಸಾದ ನೀಡಲು, ನಾಲ್ಕೈದು ಗ್ರಾಮಗಳಿಂದ ಹಾಲಹರವಿ, 10-20 ಬಸವಗಳು ಬರುತ್ತವೆ. ಅವರಿಗೆ ಕಂದಾಯ, ಅರಣ್ಯ ಇಲಾಖೆ ಅಧಿಕಾರಿಗಳು ಪಾಸ್ ನೀಡಿ ಪ್ರವೇಶ ನೀಡಬೇಕು. ಜತೆಗೆ ವಿವಿಧ ಮಠಗಳಿಂದ ಬರುವ ಸ್ವಾಮೀಜಿಗಳಿಗೆ ಪ್ರವೇಶ ನಿರಾಕರಣೆ ಮಾಡಬಾರದು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ದೇವಸ್ಥಾನದ ಸುತ್ತ ದೀಪಾಲಂಕಾರ ಹಾಗೂ ಬರುವ ಭಕ್ತರಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಕಳೆದ ಜಾತ್ರಾ ಮಹೋತ್ಸವಕ್ಕೆ ಬರುವ ಭಕ್ತರ ಅನುಕೂಲಕ್ಕಾಗಿ ಕೆಎಸ್‌ಆರ್‌ಟಿಸಿ ವತಿಯಿಂದ 100 ಬಸ್ ವ್ಯವಸ್ಥೆ ಕಲ್ಪಿಸಬೇಕೆಂದು ಸೂಚನೆ ನೀಡಲಾಗಿತ್ತು.ಆದರೆ ಕೇವಲ 45 ಬಸ್ ನಿಯೋಜನೆ ಮಾಡಲಾಗಿತ್ತು. ಈ ಬಾರಿ ಆ ಸಮಸ್ಯೆ ಮರುಕಳಿಸಬಾರದು. ನಾಲ್ಕು ದಿನಗಳ ಕಾಲ ಜಾತ್ರಾ ಮಹೋತ್ಸವದಲ್ಲಿ ಬಸ್ ವ್ಯವಸ್ಥೆಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ವಿಭಾಗೀಯ ವ್ಯವಸ್ಥಾಪಕರಿಗೆ ಕರೆ ಮಾಡಿ 100 ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಸೂಚನೆ ನೀಡಿದರು. ಎಚ್.ಡಿ.ಕೋಟೆ, ಸರಗೂರು, ನಂಜನಗೂಡು, ಗುಂಡ್ಲುಪೇಟೆ ಡಿಪೋಗಳಿಂದ ಬಸ್ ವ್ಯವಸ್ಥೆ ಮಾಡಬೇಕು ಎಂದರು.

ದೇವಸ್ಥಾನದ ಅರ್ಚಕರಿಗೆ ನಿತ್ಯ ದೇವರಿಗೆ ಪೂಜೆ ಮಾಡಲು, ಅವರು ಉಳಿದುಕೊಳ್ಳಲು ಅವಕಾಶ ನೀಡಬೇಕೆಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು. ಊಟ, ತಿಂಡಿ ವ್ಯವಸ್ಥೆಗೆ ಅವಕಾಶವಿಲ್ಲ. ಎತ್ತಿನಗಾಡಿ, ಖಾಸಗಿ ವಾಹನಗಳಿಗೆ ಪ್ರವೇಶ ನಿರಾಕರಿಸಲಾಗಿದೆ ಎಂದು ತಿಳಿಸಿದರು.

ಬೇಲದಕುಪ್ಪೆ ಮಹದೇಶ್ವರ ಸಮಿತಿ ಅಧ್ಯಕ್ಷ ನಿಂಗರಾಜು ಮಾತನಾಡಿ, ಮುಜರಾಯಿ ಇಲಾಖೆಗೆ ದೇವಸ್ಥಾನ ಸೇರ್ಪಡೆಯಾಗಿದೆ. ಆದ್ದರಿಂದ ವಿಜೃಂಭಣೆಯಿಂದ ಆಚರಿಸುವ ನಂಬಿಕೆ ಇದೆ. ಎಲ್ಲ ಇಲಾಖೆ ಸೇರಿಕೊಂಡು ಜಾತ್ರಾ ಮಹೋತ್ಸವ ಮಾಡಬೇಕು ಎಂದು ತಿಳಿಸಿದರು.

ಮುಖಂಡ ಶಂಭುಲಿಂಗನಾಯಕ ಮಾತನಾಡಿ, ನಮ್ಮ ಪರಂಪರೆಯಿಂದ ಜಾತ್ರಾ ಮಹೋತ್ಸವನ್ನು ಮಾಡಿಕೊಂಡು ಬರುತ್ತಿದ್ದೇವೆ. ಅರಣ್ಯ ಇಲಾಖೆ ಅಧಿಕಾರಿಗಳು ಜಾತ್ರೆ ಮಾಡಬೇಕು. ಕಾನೂನು ಚೌಕಟ್ಟಿನಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡುತ್ತೇವೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ತಾತ್ಕಾಲಿಕ ಆಸ್ಪತ್ರೆ ತೆರೆಯಬೇಕು. ಜಾತ್ರೆ ಮುಗಿಯುವ ತನಕ ಪೊಲೀಸ್ ಬಂದೋಬಸ್ತ್, ತಾತ್ಕಾಲಿಕ ಪೊಲೀಸ್ ಠಾಣೆ ತೆರೆಯಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಚಿಕ್ಕವೀರನಾಯಕ ಮಾತನಾಡಿ, ಈ ಬಾರಿ ಗ್ಯಾರಂಟಿ ವ್ಯವಸ್ಥೆ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಭಕ್ತರು ಆಗಮಿಸುತ್ತಾರೆ. ದೇವಸ್ಥಾನಕ್ಕೆ ಸುಣ್ಣ, ಬಣ್ಣ ಬಳಿಯುವುದು. ರಸ್ತೆ ಕಾಮಗಾರಿ ಕೆಲಸ, ದೇವಸ್ಥಾನಕ್ಕೆ ದೀಪಾಲಂಕಾರ, ಸೌಂಡ್ಸ್, ಶಾಮಿಯಾನ, ಪಲ್ಲಕ್ಕಿ ಬೋರ್ಡ್, ಜನರೇಟರ್ ವ್ಯವಸ್ಥೆ, ದೇವರ ಮಂಟಪ ಬಿಡುವುದು. ಪೂಜಾ ಸಾಮಗ್ರಿ ಮಾರಾಟಕ್ಕೆ ಅವಕಾಶ, ಹಾಲರವಿ ಸೇವೆ, ಕೊಂಡೋತ್ಸವ, ಕಲಾತಂಡ, ವಾದ್ಯಗೋಷ್ಠಿ, ಕೋಲಾಟ, ನಗಾರಿ ವೀರಗಾಸೆ ಪ್ರದರ್ಶನಕ್ಕೆ ಅವಕಾಶ ನೀಡುವಂತೆ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿತಿಸಿದ ಶಾಸಕ ಅನಿಲ್, ಜಾತ್ರೆ ನಡೆಸುವ ವಿಚಾರದಲ್ಲಿ ಅರಣ್ಯ ಇಲಾಖೆ, ಸ್ಥಳೀಯ ವಿಶ್ವಾಸ ಮುಖ್ಯ. ಈ ಬಗ್ಗೆ ಅರಣ್ಯ ಇಲಾಖೆ ಮೇಲಧಿಕಾರಿಗಳ ಜತೆ ಮಾತುಕತೆ ನಡೆಸಿ ಅವಕಾಶ ಕಲ್ಪಿಸಲಾಗುವುದು, ಜನರು ಅರಣ್ಯ ಇಲಾಖೆಯ ಕಾನೂನುಗಳನ್ನು ಗೌರವಿಸಬೇಕಿದೆ. ಅರಣ್ಯ ಇಲಾಖೆಯ ಅಧಿಕಾರಿಗಳೂ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಬಾರದು ಎಂದು ತಿಳಿಸಿದರು.

ತಹಸೀಲ್ದಾರ್ ಮೋಹನಕುಮಾರಿ ,ಇಒ ಪ್ರೇಮ್ ಕುಮಾರ್, ಎಸಿಎಫ್ ಸತೀಶ್, ಸರ್ಕಲ್ ಇನ್‌ಸ್ಪೆಕ್ಟರ್ ಲಕ್ಷ್ಮಿಕಾಂತ್, ಜಿಪಂ ಮಾಜಿ ಸದಸ್ಯ ಪಿ.ರವಿ, ಆರ್‌ಎಫ್‌ಒ ವಿವೇಕ್, ಅಮೃತಾ, ಮುಜರಾಯಿ ಇಲಾಖೆ ಕಾರ್ಯನಿರ್ವಾಹಕ ಅಧಿಕಾರಿ ರಘು, ರಾಕೇಶ್, ಸಮಿತಿ ಅಧ್ಯಕ್ಷ ನಿಂಗರಾಜು, ಮುಖಂಡರಾದ ಕ್ಯಾತನಹಳ್ಳಿ ನಾಗರಾಜು, ರಾಮೇಲಿಂಗೌಡ, ಲಿಂಗರಾಜು, ಮಹದೇವಸ್ವಾಮಿ, ಮಹಾದೇವಯ್ಯ, ಪುಟ್ಟಸ್ವಾಮಿ , ಶಿವಮೂರ್ತಿ, ರಾಜೇಶ್, ಶಿವರಾಜು, ಶಿವಕುಮಾರ್, ಕೆಂಡಗಣ್ಣಸ್ವಾಮಿ, ಪ್ರಕಾಶ್, ಲಿಂಗರಾಜು, ನಾಗರಾಜು, ಮಹದೇವಯ್ಯ, ಸಿದ್ದರಾಜು, ನಟರಾಜು, ಪಾರುಪತ್ತೇದಾರ ಮಹದೇವಸ್ವಾಮಿ, ನಾಗೇಂದ್ರ, ಸಂಜಯ್, ಶೇಖರ್, ಬಸವಣ್ಣ, ರವಿ ನಂಜುಂಡಿ ಪಾಪಣ್ಣ, ಭಕ್ತರು ಇದ್ದರು.