ನವದೆಹಲಿ: ದೇಶದಲ್ಲಿನ 14 ಖಾರಿಫ್ ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್ಪಿ) 2022-23ನೇ ಸಾಲಿನ ಬೆಳೆ ವರ್ಷಕ್ಕೆ ಅನ್ವಯಿಸುವಂತೆ ಏರಿಕೆ ಮಾಡುವ ಪ್ರಸ್ತಾವನೆಯನ್ನು ಕೇಂದ್ರ ಸಚಿವ ಸಂಪುಟ ಬುಧವಾರ ಅಂಗೀಕರಿಸಿದೆ. ಕೃಷಿಕರ ಆದಾಯ ಉತ್ತೇಜಿಸುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆ ಎಂದು ಸರ್ಕಾರ ಹೇಳಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಕೇಂದ್ರ ಸರ್ಕಾರವು ಕೃಷಿಕರ ಆದಾಯ ಹೆಚ್ಚಿಸುವುದಕ್ಕಾಗಿ ಬೀಜ್ ಸೇ ಬಾಜಾರ್ ತಕ್ (ಬೀಜದಿಂದ ಮಾರುಕಟ್ಟೆ ತನಕ) ಹಲವಾರು ಉಪಕ್ರಮಗಳನ್ನು ಜಾರಿಗೊಳಿಸಿದೆ. ಇದರಂತೆ ಭತ್ತದ ಬೆಂಬಲ ಬೆಲೆ ಕ್ವಿಂಟಾಲ್ಗೆ 100 ರೂ. ಹೆಚ್ಚಿಸಿದ್ದು 2040 ರೂ. ಆಗಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಹೇಳಿದರು.
ಜೋಳ, ಮೆಕ್ಕೆ ಜೋಳ, ರಾಗಿ, ಹೆಸರು, ತೊಗರಿ, ಶೇಂಗಾ, ಹತ್ತಿ ಬೆಲೆಯನ್ನು ಹೆಚ್ಚಳ ಮಾಡಲಾಗಿದೆ. 14 ಖಾರಿಫ್ ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು ಕ್ವಿಂಟಾಲ್ಗೆ 92 ರೂಪಾಯಿಯಿಂದ 523 ರೂ. ತನಕ ಏರಿಕೆ ಮಾಡಲಾಗಿದೆ. ಎಳ್ಳು ಕ್ವಿಂಟಾಲ್ಗೆ ಗರಿಷ್ಠ 523 ರೂಪಾಯಿ, ಜೋಳಕ್ಕೆ ಕ್ವಿಂಟಾಲ್ಗೆ ಕನಿಷ್ಠ 92 ರೂ. ಎಂಎಸ್ಪಿ ಏರಿಕೆ ಆಗಿದೆ.
ರೈತರಿಗೆ ಹರ್ಷ: ಸಾಮಾನ್ಯವಾಗಿ ಬೆಳೆ ಮಾರುಕಟ್ಟೆಗೆ ಬಂದಾಗ ಮಾರುಕಟ್ಟೆ ಬೆಲೆಯನ್ನು ಆಧರಿಸಿ ಖರೀದಿ ಕೇಂದ್ರ ತೆರೆಯುವ, ಇಲ್ಲವೇ ಮಾರುಕಟ್ಟೆಯಲ್ಲಿರುವ ಬೆಲೆಯನ್ನು ಆಧರಿಸಿ ಬೆಂಬಲ ಬೆಲೆಯ ಪರಿಷ್ಕರಣೆ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಬಿತ್ತನೆ ಸಮಯದಲ್ಲೇ ಬೆಂಬಲ ಬೆಲೆಯನ್ನು ನಿಗದಿ ಮಾಡಿರುವುದು ರೈತರ ಸಂತಸಕ್ಕೆ ಕಾರಣವಾಗಿದೆ. ಜತೆಗೆ, ಕೃಷಿ ಕಾರ್ಯದಲ್ಲಿ ತೊಡಗುವ ಉತತ್ಸಾಹವನ್ನು ಹೆಚ್ಚಿಸಲಿದೆ ಎಂದು ಕೇಂದ್ರ ಸರ್ಕಾರ ಅಭಿಪ್ರಾಯ ವ್ಯಕ್ತಪಡಿಸಿದೆ.