ಶಿವಮೊಗ್ಗದ ಸಿ.ಭೀಮಸೇನರಾವ್ ಕಾನೂನು ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ಓರಿಯೆಂಟೇಷನ್ ಕಾರ್ಯಕ್ರಮದಲ್ಲಿ ಎಸ್.ಎನ್.ನಾಗರಾಜ, ಡಾ. ಎ.ಅನಲಾ, ಎಂ.ಎಸ್.ಸಂತೋಷ್, ಡಾ. ಕಾಂತರಾಜ್, ಬಿ.ಸಿ.ಬಸಪ್ಪ ಭಾಗವಹಿಸಿದ್ದರು.  
ನ್ಯೂಸ್

ಭಾಷೆ ಮೇಲೆ ಪ್ರಬುದ್ಧತೆ ಅವಶ್ಯ:ಎಸ್.ಎನ್.ನಾಗರಾಜ್

ಶಿವಮೊಗ್ಗ: ಕಾನೂನು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮಾತೃಭಾಷೆ ಮತ್ತು ಇಂಗ್ಲಿಷ್ ಭಾಷೆ ಮೇಲೆ ಪ್ರಬುದ್ಧತೆ ಮುಖ್ಯ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ ಅಭಿಪ್ರಾಯಪಟ್ಟರು.

ನಗರದ ಸಿ.ಭೀಮಸೇನರಾವ್ ಕಾನೂನು ಮಹಾವಿದ್ಯಾಲಯದಲ್ಲಿ ನೂತನವಾಗಿ ಪ್ರವೇಶಾತಿ ಪಡೆದಿರುವ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಓರಿಯೆಂಟೇಷನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದು ಕನ್ನಡದಲ್ಲಿ ವಾದ ಮಾಡಲು ಹಾಗೂ ಕಾನೂನು ಅಧ್ಯಯನ ನಡೆಸಲು ಅನೇಕ ಅವಕಾಶಗಳು ಲಭ್ಯವಾಗುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ತಿಳಿಸಿದರು.

ಭಾರತೀಯ ಸಂವಿಧಾನದ ಮೂಲ ಪ್ರತಿಗಳನ್ನು ಅಧ್ಯಯನ ನಡೆಸಿ ಪರಿಪಕ್ವವಾಗಲು ಇಂಗ್ಲಿಷ್ ಅವಶ್ಯಕ. ಕನ್ನಡ ಮತ್ತು ಇಂಗ್ಲಿಷ್ ಎರಡನ್ನೂ ಸುಲಲಿತವಾಗಿ ಗ್ರಹಿಸುವ ಮತ್ತು ಗ್ರಹಿಸಿದ ವಿಚಾರಗಳನ್ನು ಬರವಣಿಗೆ ರೂಪಕ್ಕೆ ತರುವ ಕೌಶಲ ವಿದ್ಯಾರ್ಥಿಗಳದ್ದಾಗಬೇಕು. ವಕೀಲ ವೃತ್ತಿಯಲ್ಲಿ ಓದು ಎಂಬುದು ನಿರಂತರ ಹಾಗೂ ಅನಿವಾರ್ಯ ಎಂದರು.

ಕರಡು ಪ್ರತಿ ತಯಾರಿಸುವಾಗ ಬಳಸುವ ಕೆಲ ಶಬ್ಧಗಳಿಂದ ಇಡೀ ಪ್ರಕರಣ ಏರಿಳಿತವಾಗುವ ಸಾಧ್ಯತೆ ಇರುತ್ತದೆ. ಅನುಭವಾತ್ಮಕ ಕಲಿಕೆಯೇ ನಿಜವಾದ ಕಲಿಕೆ. ಅದಕ್ಕಾಗಿ ತರಗತಿಗಳನ್ನು ಚರ್ಚಾ ವೇದಿಕೆಗಳಾಗಿ ಬದಲಾಯಿಸಿಕೊಳ್ಳಬೇಕು. ಹಿಂಜರಿಕೆ, ವಿಶ್ವಾಸರಹಿತ ನಡವಳಿಕೆಯಿಂದ ಹೊರಬರಲು ಚರ್ಚಾ ವೇದಿಕೆಗಳನ್ನು ಬಳಸಿಕೊಂಡರೆ ಕಾನೂನು ಅಧ್ಯಯನಕ್ಕೆ ತೆರೆದುಕೊಳ್ಳಲು ಸಾಧ್ಯ ಎಂದು ಹೇಳಿದರು.

ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಎಸ್.ಸಂತೋಷ್ ಮಾತನಾಡಿ, ಕಾಲೇಜು ಜ್ಞಾನ ನೀಡುವ ಪ್ರಯತ್ನ ಮಾಡುತ್ತದೆ. ಆದರೆ ಒಳ್ಳೆಯ ವಿಷಯಗಳನ್ನು, ಜ್ಞಾನವನ್ನು ಗ್ರಹಿಸುವ ಶಕ್ತಿಯನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು. ಜಾಗತೀಕರಣದ ಈ ಕಾಲಘಟ್ಟದಲ್ಲಿ ಕಾನೂನು ತಜ್ಞರಿಗೆ ಅನೇಕ ಉದ್ಯೋಗವಕಾಶಗಳು ದೊರೆಯುತ್ತಿವೆ. ಕಾನೂನು ಅಧ್ಯಯನದಲ್ಲಿ ಆಯ್ದುಕೊಳ್ಳುವ ವಿಶೇಷ ವಿಷಯಗಳ ಕುರಿತು ಸ್ಪಷ್ಟತೆ ಇರಬೇಕು. ಭಾಷಾ ಕಲಿಕೆ, ಬರವಣಿಗೆ ಕೌಶಲವು ವಕೀಲ ವೃತ್ತಿಯಲ್ಲಿ ಉನ್ನತಿಗೆ ತೆಗೆದುಕೊಂಡು ಹೋಗಲಿದೆ ಎಂದರು.

ಪ್ರಾಚಾರ್ಯೆ ಡಾ. ಎ.ಅನಲಾ, ಸಹಪ್ರಾಧ್ಯಾಪಕರಾದ ಬಿ.ಸಿ.ಬಸಪ್ಪ, ಐಕ್ಯೂಎಸಿ ಸಂಯೋಜಕ ಡಾ. ಕಾಂತರಾಜ್ ಉಪಸ್ಥಿತರಿದ್ದರು.