ನಿರೀಕ್ಷಿಸಿದ್ದ ಹುರಿಯಾಳುಗಳನ್ನು, ನಿರೀಕ್ಷೆಗೂ ಮೀರಿ ಸೇರಿದ್ದ ಪ್ರೇಕ್ಷಕರು ಹುರಿದುಂಬಿಸುತ್ತಿದ್ದರು. ಅಷ್ಟೇ ಅಲ್ಲ! ಮಟ್ಟಿ ಮೇಲೆ ಜಟ್ಟಿತನ ಮೆರೆದ ಪೈಲ್ವಾನರಿಗೆ ಶಿಳ್ಳೆ, ಚಪ್ಪಾಳೆಯ ಪ್ರೋತ್ಸಾಹ ನೀಡಿದರು.
ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದ ಕುಸ್ತಿ ಅಖಾಡದಲ್ಲಿ ಸೋಮವಾರ ಕಂಡು ಬಂದ ದೃಶ್ಯ ಇದು. ದಸರಾ ನಾಡ ಕುಸ್ತಿಯ 5ನೇ ದಿನವೂ ಎರಡು ದೊಡ್ಡ ಕುಸ್ತಿ ಸೇರಿದಂತೆ 36ಕ್ಕೂ ಹೆಚ್ಚು ಕುಸ್ತಿ ನಡೆದವು. ಈ ಪೈಕಿ ಮಹಿಳಾ ಕುಸ್ತಿ ಪಂದ್ಯಗಳು ರೋಚಕವಾಗಿದ್ದವು. ಬೆಳಗಾವಿ, ದಾವಣಗೆರೆ, ಕನಕಪುರ, ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಬಂದಿದ್ದ 70ಕ್ಕೂ ಹೆಚ್ಚು ಪೈಲ್ವಾನರು ಮಟ್ಟಿ ಏರಿ ವಿಭಿನ್ನ ಪಟ್ಟು ಪ್ರದರ್ಶಿಸಿದರು. ಮದಗಜಗಳ ರೀತಿ ಪೈಲ್ವಾನರು ಸೆಣೆಸುತ್ತಿದ್ದಂತೆ ಕ್ರೀಡಾಂಗಣದ ಮೂಲೆ-ಮೂಲೆಯಲ್ಲಿ ಆಸೀನರಾಗಿದ್ದ ಪ್ರೇಕ್ಷಕರಲ್ಲಿನ ಸಂಭ್ರಮ ಮುಗಿಲು ಮುಟ್ಟಿತು. ನೆಚ್ಚಿನ ಜಟ್ಟಿಗಳು ಪರಾಕ್ರಮ ಮೆರೆದು ಎದುರಾಳಿಯನ್ನು ಚಿತ್ ಮಾಡಿದಾಗ ಶಿಳ್ಳೆ, ಚಪ್ಪಾಳೆಗಳಿಂದ ಅಭಿನಂದನೆ ಸಲ್ಲಿಸುತ್ತಿದ್ದರು. ಪ್ರೇಕ್ಷಕರು ಮೊದಲ ಕುಸ್ತಿಯಲ್ಲಿ ತೋರಿಸಿದ ಹುಮ್ಮಸ್ಸನ್ನು ಕಡೆವರೆಗೂ ಉಳಿಸಿಕೊಂಡರು. ಸ್ಟಾರ್ ಪೈಲ್ವಾನರ ಕುಸ್ತಿ ಪಂದ್ಯಾವಳಿಗಳನ್ನು ಬಿಟ್ಟಕಣ್ಣು ಬಿಟ್ಟಂತೆ ನೋಡಿ ಮೈಮರೆತರು.
ಸಮಬಲಗೊಂಡ ದೊಡ್ಡ ಕುಸ್ತಿ:
ದಾವಣಗೆರೆ ಕ್ರೀಡಾ ನಿಲಯದ ಡಾ.ವಿನೋದ್‌ಕುಮಾರ್ ಶಿಷ್ಯ ಪೈ.ರಾಘವೇಂದ್ರ ಮತ್ತು ಬೆಳಗಾವಿ ಪೈ.ಮುಬಾರಕ್ ಅಲಿ ನಡುವೆ ಒಂದು ಗಂಟೆ ನಿಗದಿಯಾಗಿದ್ದ ಕುಸ್ತಿ ರೋಚಕತೆಯಿಂದ ಕೂಡಿತ್ತು. ಸದರಿ ಕುಸ್ತಿಯನ್ನು ಪ್ರೇಕ್ಷಕರು ಕೂಡ ಕೂತುಹಲದಿಂದ ವೀಕ್ಷಿಸಿದರು. ಪಂದ್ಯದ ಪ್ರತಿ ಕ್ಷಣದಲ್ಲೂ ಚೆಪ್ಪಾಳೆ, ಸಿಳ್ಳೆ ಮೂಲಕ ಇವರಿಬ್ಬರನ್ನು ಪ್ರೋತಾಹಿಸಿದರು. 10 ನಿಮಿಷದಲ್ಲಿ ಪೈ.ರಾಘವೇಂದ್ರ ಮೇಲೆ ಸವಾರಿ ಮಾಡಿದ ಪೈ.ಮುಬಾರಕ್ ಅಲಿ ಮೇಲುಗೈ ಸಾಧಿಸಿದ್ದರು. ತಕ್ಷಣ ತಪ್ಪಿಸಿಕೊಂಡ ರಾಘವೇಂದ್ರ, ಮುಬಾರಕ್ ಮೇಲೆ ಮೇಲೆ ಸವಾರಿ ಮಾಡಿದರು. ಆರಂಭದಿಂದಲೂ ಅಖಾಡದಲ್ಲಿ ಇಬ್ಬರು ಪೈಲ್ವಾನರು ಪಟ್ಟಿಗೆ- ಪ್ರತಿಪಟ್ಟು ಹಾಕುತ್ತಾ ಮದಗಜಗಳ ರೀತಿ ಹೋರಾಡಿದ ಪರಿಣಾಮ ಡ್ರಾನಲ್ಲಿ ಅಂತ್ಯಗೊಂಡಿತು. ಪಾಲಹಳ್ಳಿ ಪೈ.ರವಿಕುಮಾರ್ ಮತ್ತು ಕ್ಯಾತನಹಳ್ಳಿ ಪೈ.ಬಸವರಾಜು ನಡುವೆ ನಡೆದ ದಿನದ ಮತ್ತೊಂದು ದೊಡ್ಡ ಕುಸ್ತಿ ಹಾಗೂ ಕನಕಪುರ ಪೈ.ದರ್ಶನ್ ಮತ್ತು ಹೊಸಳ್ಳಿ ಪೈ.ಮನೋಜ್ ನಡುವಿನ ಕುಸ್ತಿಯೂ ಸಮಬಲಗೊಂಡು ನಿರಾಸೆ ಮೂಡಿಸಿತು.
ಪೈ.ಮಮೋಹನ್ ಕುಮಾರ್ ವಿರುದ್ಧ ಪೈ.ದೀಪಕ್ ನಿಂಗಪ್ಪ 3 ನಿಮಿಷದಲ್ಲಿ ಜಯ ಸಾಧಿಸಿದರೆ, ಪೈ.ಪ್ರೀತಂ 3.50 ನಿಮಿಷದಲ್ಲಿ ತನ್ನ ಎದುರಾಳಿ ಪೈ.ವಸಂತ್ ಅವರನ್ನು ಸೋಲಿಸಿದರು. ಪೈ.ಸೈಯದ್ ಮೊಹಮ್ಮದ್ ಸಾಕೀಬ್ ತನ್ನ ಎದುರಾಳಿ ಪೈ.ಎಂ.ಎಂ.ವೆಂಟೇಶ್ ಅವರನ್ನು 2 ನಿಮಿಷಲ್ಲಿ ಚಿತ್ ಮಾಡಿದರು.
ಉಳಿದಂತೆ ಪೈ.ಪಿ.ರಾಘವ ವಿರುದ್ಧ ಪೈ.ಫಾಜಿಲ್ ಪಾಷ, ಪೈ.ಎಂ.ವಿನಯ್ ವಿರುದ್ಧ ಪೈ.ಯಶವಂತ್, ಪೈ.ಅಭಿ ವಿರುದ್ಧ ಪೈ.ಜಿ.ಭುವನ್, ಪೈ.ಬಿ.ಎಸ್.ಲಿಖಿತ ವಿರುದ್ಧ ಪೈ.ಸಂಜಯ್ ನಾಯಕ್, ಪೈ.ಚೇತನ್ ನಾಯಕ ವಿರುದ್ಧ ಪೈ.ಕೆ.ಭರತ್, ಪೈ.ಧನುಷ್ ವಿರುದ್ಧ ಪೈ.ಗಗನ್, ಪೈ.ಪಿ.ಋತಿಕ್ ವಿರುದ್ಧ ಪೈ.ಎಸ್.ಮೋಹನ್‌ಕುಮಾರ್ ಜಯ ಸಾಧಿಸಿದರು.
ಉಳಿದಂತೆ ಪೈ.ವಿಷ್ಣುಗೋಪಾಲ್ ಮತ್ತು ಪೈ.ತೇಜಸ್ ಗೌಡ ನಡುವೆ, ಪೈ.ಶಿವರಾಜು ಮತ್ತು ಪೈ.ಮಧುಸೂದನ್ ನಡುವೆ, ಪೈ.ಪ್ರೀತಂ ಮತ್ತು ಪೈ.ಪವನ್ ನಡುವೆ, ಪೈ.ಪ್ರೀತಂ ಮತ್ತು ಪೈ.ಪಿ.ಶಶಾಂಕ್ ನಡುವೆ ನಡೆದ ಕುಸ್ತಿಗಳು ಸಮಬಲದಲ್ಲಿ ಅಂತ್ಯಗೊಂಡವು.
‘ಸ್ಫೂರ್ತಿ’ದಾಯಕ ಚಿತ್!:
ರೋಚಕತೆಯಿಂದ ಕೂಡಿದ 5ನೇ ದಿನದ ಮಹಿಳಾ ಕುಸ್ತಿಯಲ್ಲಿ ಬೆಂಗಳೂರಿನ ಪೈ.ಸ್ಪೂರ್ತಿ ಗೆಲುವಿನ ನಗೆ ಬೀರಿದರು. ತನ್ನ ಎದುರಾಳಿ ಮಹಾಲಕ್ಷ್ಮೀ ಲೇಔಟ್‌ನ ಪೈ.ಶಾಂಭವಿ ಅವರನ್ನು 3 ನಿಮಿಷದಲ್ಲಿ ಚಿತ್ ಮಾಡಿ ಮಟ್ಟಿ ಮೇಲೆ ಮೆರೆದಾಡಿದರು. ಸ್ಪೂರ್ತಿ ಚಿತ್ ಮಾಡಿದ ಶೈಲಿ ಮಹಿಳಾ ಕುಸ್ತಿಪಟುಗಳಿಗೆ ಸ್ಫೂರ್ತಿದಾಯಕವಾಗಿತ್ತು. ಪೈ.ಐಶ್ವರ್ಯ ಮತ್ತು ಪೈ.ಚೈತನ್ಯ ನಡುವೆ ನಿಗದಿಯಾಗಿದ್ದ ಮತ್ತೊಂದು ಮಹಿಳಾ ಕುಸ್ತಿ, ನಿಗದಿತ ಸಮಯದಲ್ಲಿ ಕುಸ್ತಿಪಟುಗಳು ಬಾರದ ಕಾರಣ ರದ್ದಾಯಿತು.
40 ಸೆಕೆಂಡ್‌ಗೆ ಚಿತ್:ಮೈಸೂರಿನ ಕುಂಬಾರಕೊಪ್ಪಲು ಪೈ.ಸಾಗರ್ ಕೇವಲ 40 ಸೆಕೆಂಡ್‌ನಲ್ಲೇ ಎದುರಾಳಿಯನ್ನು ಚಿತ್ ಮಾಡಿ ಜಟ್ಟಿ ತನ ಪ್ರದರ್ಶಿಸಿದರು. ಪೈ.ಸಾಗರ್ ತನ್ನ ಎದುರಾಳಿ ಕನಕಪುರ ಪೈ.ಕಿರಣ್‌ಗೌಡ ಅವರನ್ನು ಕ್ಷಣಾರ್ಧದಲ್ಲೇ ಚಿತ್ ಮಾಡಿ ವಿಜೃಂಭಿಸಿದರು. ಪೈ.ಪ್ರಜ್ವಲ್ ತನ್ನ ಎದುರಾಳಿ ಪೈ.ಅಬ್ದುಲ್ ರೆಹಮಾನ್ ಅವರನ್ನು 50 ಸೆಕೆಂಡ್‌ಗಳಲ್ಲಿ ಚಿತ್ ಮಾಡಿ ಗಮನ ಸೆಳೆದರು. ಪೈ.ಅಬೂಬಕರ್ 1 ನಿಮಿಷದಲ್ಲಿ ಪೈ.ಮೊಹಮ್ಮದ್ ಹುಸೇನ್‌ರನ್ನು ಸೋಲಿಸಿದರು.