ನ್ಯೂಸ್

ತಾಯಿಯ ಋಣ ತೀರಿಸುವ ಆಸೆಯೇ? ಹಾಗಿದ್ದರೆ ಈ ಕ್ಷೇತ್ರಕ್ಕೊಮ್ಮೆ ಭೇಟಿಕೊಡಿ...

kumarvrl

ಹಿಂದೂ ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಿದಂತೆ ಮಾತೃಗಯಾ ಎಂದು ಕರೆಯಲ್ಪಡುವ ಸಿದ್ಧಾಪುರ ಗುಜರಾತ್ ರಾಜ್ಯದ ಪಟಾನ್ ಜಿಲ್ಲೆಯಲ್ಲಿದೆ. ಕಾಶಿ, ಗಯಾ, ಇತರೆ ಎಲ್ಲ ಕ್ಷೇತ್ರಗಳಲ್ಲಿ ಇದು ಅತ್ಯುತ್ತಮವಾದದ್ದು. ಸಿದ್ದಾಪುರದ ಪುರಾತತ್ವ ಇಲಾಖೆಯಡಿ ಎರಡು ಸಂರಕ್ಷಿತ ರಾಷ್ಟ್ರೀಯ ಸ್ಮಾರಕಗಳಿವೆ. ಅವುಗಳೆಂದರೆ ರುದ್ರ ಮಹಾಲಯದ ದೇವಾಲಯದ ಅವಶೇಷಗಳು ಮತ್ತು ಬಿಂದು ಸರೋವರ.

ಹತ್ತನೇ ಶತಮಾನದಲ್ಲಿ ಚಾಲುಕ್ಯ ರಾಜವಂಶದ ಮುಲರಾಜನು ರುದ್ರ ಮಹಾಲಯ ದೇವಾಲಯವನ್ನು ಕಟ್ಟಿಸಿದ್ದನಂತೆ, ನಂತರ 12ನೇ ಶತಮಾನದಲ್ಲಿ ಜಯಸಿಂಹ ಸಿದ್ಧರಾಜ ಇದನ್ನು ಪವಿತ್ರಗೊಳಿಸಿ ಪಟ್ಟಣವನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡು ಇದರ ಹೆಸರನ್ನು ಸಿದ್ಧಾಪುರ ಎಂದು ಬದಲಾಯಿಸಿದನಂತೆ. 13ನೇ ಶತಮಾನದಲ್ಲಿ ಅಲ್ಲಾವುದ್ದೀನ್ ಖಿಲ್ಜಿಯು ಈ ದೇವಾಲಯವನ್ನು ನೆಲಸಮಗೊಳಿಸಿದರೆ, 15ನೇ ಶತಮಾನದಲ್ಲಿ ಮೊಘಲ್ ಆಳ್ವಿಕೆಯ ಅವಧಿಯಲ್ಲಿ ಪಟ್ಟಣವು ಮತ್ತಷ್ಟು ಹದಗೆಟ್ಟಿತು. ಈಗ ಅದರ ಅವಶೇಷಗಳು ಮಾತ್ರ ಇವೆ.

ಬಿಂದುಸರೋವರ ಒಂದು ಸಣ್ಣ ಕೊಳವಾಗಿದ್ದು, ಇದು ಹಿಂದೂ ಧರ್ಮಶಾಸ್ತ್ರದ ಪ್ರಕಾರ ಪಂಚ ಸರೋವರಗಳಲ್ಲಿ ಒಂದಾಗಿದೆ. ಶ್ರೀಮದ್ ಭಾಗವತ ಮತ್ತು ಪುರಾಣಗಳಲ್ಲಿ ಇದರ ಬಗ್ಗೆ ಉಲ್ಲೇಖಿಸಲಾಗಿದೆ. ತಾಯಂದಿರಿಗೆ ಶ್ರಾದ್ಧ ಮಾಡಲು ಅಂದರೆ ಮಾತೃಶ್ರಾದ್ಧ ಮಾಡಲು ಏಕೈಕ ಪವಿತ್ರ ಸ್ಥಳ ಇದಾಗಿದೆ. ಹೀಗಾಗಿ ಮಾತೃಋಣ ತೀರಿಸಲು ವಾರ್ಷಿಕ ಸಾವಿರಾರು ಜನ ಹಿಂದೂಗಳು ಇಲ್ಲಿಗೆ ಭೇಟಿ ನೀಡುತ್ತಾರೆ.

ತಾಯಿಯು ಸ್ವರ್ಗೀಯ ವಾಸಸ್ಥಾನಕ್ಕೆ ಹೊರಡುವವರೆಗೂ ಅವಳ ಮಹತ್ವವನ್ನು ನಾವು ಅರಿಯುವುದಿಲ್ಲ. ತನ್ನ ಮನೆ, ಗಂಡ ಮತ್ತು ಮಕ್ಕಳಿಗಾಗಿ ಸರ್ವಸ್ವವನ್ನೇ ತ್ಯಾಗ ಮಾಡಿದ ಜೀವ ಅದು. ಮಾತೃಗಯಾ ಎಂದು ಕರೆಯಲ್ಪಡುವ ಈ ಧಾರ್ವಿುಕ ಕ್ಷೇತ್ರವು ಪೂರ್ವಜರಿಗೆ ಮತ್ತು ಮಾತಾಪಿತೃಗಳಿಗೆ ಮೋಕ್ಷವನ್ನು ನೀಡಲು ಶಕ್ತವಾಗಿದೆ ಎನ್ನುತ್ತಾರೆ.

ಅಹಮದಾಬಾದ್​ನಿಂದ ಸಿದ್ಧಾಪುರಕ್ಕೆ ರಸ್ತೆಯ ಮೂಲಕ ಹೋಗಬಹುದು. ಸುಮಾರು ಎರಡೂವರೆ ತಾಸಿನ ಪ್ರಯಾಣ. ಇಲ್ಲಿಯ ಸ್ವಚ್ಛ ಧಾರ್ವಿುಕ ವಾತಾವರಣ ಪ್ರವಾಸಿಗರನ್ನು ನಿರಾಶೆಗೊಳಿಸುವುದಿಲ್ಲ.

ಹೆಚ್.ಎಸ್.ವಿ. ಮೂರ್ತಿ ಬೆಂಗಳೂರು