ನ್ಯೂಸ್

ನಿಲ್ಲದ ಬಾಣಂತಿಯರ ಸಾವು: ರಾಜ್ಯವ್ಯಾಪಿ ಚಳವಳಿಗೆ ಬಿಜೆಪಿ ತಯಾರಿ | Maternal deaths cause concern

ಬೆಂಗಳೂರು: ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಒಂದಿಲ್ಲೊಂದು ಕಡೆ ಬಾಣಂತಿ, ನವಜಾತಶಿಶುಗಳು ಸಾವು ವರದಿಯಾಗುತ್ತಿದ್ದು, ಪ್ರತಿಪಕ್ಷ ಬಿಜೆಪಿ ವ್ಯಗ್ರವಾಗಿದೆ. ಸದನದ ಹೊರಗೆ ಪ್ರಜಾತ್ತಾತ್ಮಕ ರೀತಿಯಲ್ಲಿ ಚಳವಳಿಗೆ ಸಿದ್ಧತೆ ನಡೆಸಿದೆ.

ವಿಧಾನಮಂಡಲದ ಅಧಿವೇಶನದಲ್ಲಿ ಬಾಣಂತಿಯರ ಸಾವಿನ ಪ್ರಕರಣ ನ್ಯಾಯಾಂಗ ತನಿಖೆಗೆ ಒಪ್ಪಿಸಲು ಸಿದ್ಧ, ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಸರ್ಕಾರ ಹೇಳಿತ್ತು.

ನಂತರವೂ ಬೆಳಗಾವಿಯಲ್ಲಿ ಮತ್ತೊಬ್ಬ ಬಾಣಂತಿ ಮೃತಪಟ್ಟಿದ್ದಾರೆ. ಸರ್ಕಾರದ ನೀಡಿದ ಉತ್ತರಕ್ಕೆ ತೃಪ್ತವಾಗುವ ಬದಲು ಒತ್ತಡ ಹೇರಲು ಕಮಲಪಡೆ ಮುಂದಾಗಿದೆ.

ಬಾಣಂತಿಯರ ಸಾವಿನ ಪ್ರಕರಣದ ಹಿನ್ನೆಲೆಯಲ್ಲಿ ಪಶ್ಚಿಮ್ ಬಂಗಾ ಕಂಪನಿಯ ಉತ್ಪಾದನೆಗೆ ನಿಷೇಧ ಹೇರಲಾಗಿದೆ. ಆ ಕಂಪನಿಯ ವಿರುದ್ಧ ರಾಜ್ಯದ ವಿವಿಧೆಡೆ ಒಂಭತ್ತು ಪ್ರಕರಣಗಳನ್ನು ದಾಖಲಿಸಲಾಗಿದೆ.ಅಮಾಯಕ ಜೀವನ ಸಾವಿಗೆ ಕಾರಣವಾದ ಕಂಪನಿಯು ಹೊಣೆಗಾರರಾಗಬೇಕು. ತಾಯಂದಿರನ್ನು ಕಳೆದುಕೊಂಡ ಮಕ್ಕಳಿಗೆ ಪರಿಹಾರ ನೀಡಲೇಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಅದೇ ಉಸಿರಿನಲ್ಲಿ ತಪ್ಪಿತಸ್ಥ ಕಂಪನಿಗಳಿಗೆ ಶಿಕ್ಷೆ ವಿಧಿಸುವಷ್ಟು ಕಾನೂನು ಬಲವಾಗಿಲ್ಲ ಎಂದು ಒಪ್ಪಿದ್ದಾರೆ. ಹೀಗಾಗಿ ನೊಂದವರಿಗೆ ಪರಿಹಾರ, ಕಾನೂನು ತಿದ್ದುಪಡಿಗೆ ಸರ್ಕಾರದ ಮೇಲೆ ಒತ್ತಡ ಹೇರಲು ಹೋರಾಟ ಅನಿವಾರ್ಯವೆಂಬ ನಿಲುವು ಬಿಜೆಪಿ ತಳೆದಿದೆ.

ಜನ ಜಾಗೃತಿಗೆ ಪ್ರಯತ್ನ

ಸರ್ಕಾರಿ ಆಸ್ಪತ್ರೆಗಳಿಗೆ ಐವಿ ದ್ರಾವಣ ಪೂರೈಕೆ, ಸರ್ಕಾರದ ನಡೆ ವಿರುದ್ಧ ತೊಡೆತಟ್ಟಲು ಪ್ರತಿಪಕ್ಷ ಪಾಳೆಯ ಮುಂದಾಗಿದ್ದು, ಜಿಲ್ಲಾ ಮತ್ತು ತಾಲೂಕುಮಟ್ಟದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲು ಯೋಚಿಸಿದೆ.

ಸಾರ್ವಜನಿಕ ಅರೋಗ್ಯ ವ್ಯವಸ್ಥೆ ಹುಳುಕು ಜನರ ಮುಂದಿಟ್ಟು, ಜಾಗೃತಿ ಮೂಡಿಸುವುದು ಹಾಗೂ ಸರ್ಕಾರದ ಮೇಲೆ ಒತ್ತಡ ಹೇರುವುದು ಹೋರಾಟದ ಗುರಿಯಾಗಿದೆ. ಪಕ್ಷದ ರಾಜ್ಯ ಕಚೇರಿಯಲ್ಲಿ ಶುಕ್ರವಾರ ಔಪಚಾರಿಕವಾಗಿ ಚರ್ಚೆಯಾಗಿದೆ. ಆದಷ್ಟು ಬೇಗ ಚಳವಳಿ ರೂಪರೇಷೆ, ದಿನಾಂಕ ಅಂತಿಮವಾಗಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.