ನವದೆಹಲಿ: ದೆಹಲಿಯ ಲಜಪತ್ ನಗರದ ನೇತ್ರ ಚಿಕಿತ್ಸಾಲಯವೊಂದರಲ್ಲಿ ಬುಧವಾರ ಭಾರಿ ಅಗ್ನಿ ಅವಘಡ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಣ್ಣಿನ ಆಸ್ಪತ್ರೆಯ ನೆಲಮಹಡಿಯಲ್ಲಿ ಅಳವಡಿಸಿದ್ದ ಹವಾ ನಿಯಂತ್ರಿತ ಉಪಕರಣದಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ನೇತ್ರಾಲಯದ ಪಕ್ಕದ ಕಟ್ಟಡದ 3ನೇ ಮಹಡಿಯಲ್ಲಿದ್ದ ಹೋಟೆಲ್ಗೂ ಬೆಂಕಿ ಆವರಿಸಿದೆ. ಘಟನೆಯಲ್ಲಿ ಯಾವುದೇ ಅಪಾಯಗಳು ಸಂಭವಿಸಿಲ್ಲ ಎಂದು ದೆಹಲಿ ಅಗ್ನಿಶಾಮಕ ಸೇವೆ (ಡಿಎಫ್‌ಎಸ್) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೆಳಿಗ್ಗೆ 11.30ರ ವೇಳೆ ರಿಂಗ್ ರೋಡ್‌ನಲ್ಲಿರುವ ಚೌಧರಿ ಐ7 ಸೆಂಟರ್‌ನಲ್ಲಿ ಅಗ್ನಿ ಅನಾಹುತ ಸಂಭವಿಸಿರುವ ಬಗ್ಗೆ ಅಗ್ನಿಶಾಮಕ ದಳಕ್ಕೆ ಕರೆ ಬಂದಿತ್ತು. ತಕ್ಷಣವೇ ಅಗ್ನಿಶಾಮಕ ದಳದ 12 ತುಕಡಿಗಳು ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ಆರಂಭಿಸಿದ್ದರು. ಮಧ್ಯಾಹ್ನ 1.10 ರ ವೇಳೆಗೆ ಬೆಂಕಿಯನ್ನು ನಂದಿಸಲಾಗಿದೆ ಎಂದು ಉಪ ಮುಖ್ಯ ಅಗ್ನಿಶಾಮಕ ಅಧಿಕಾರಿ ಎಸ್‌ಕೆ ದುವಾ ತಿಳಿಸಿದ್ದಾರೆ.
ಆಸ್ಪತ್ರೆಯ ಎರಡೂ ಮಹಡಿಗಳಲ್ಲಿದ್ದ ಎಲ್ಲಾ ಯಂತ್ರಗಳು ಮತ್ತು ಪೀಠೋಪಕರಣಗಳು ಬೆಂಕಿಯಲ್ಲಿ ಸುಟ್ಟುಹೋಗಿವೆ ಎಂದು ಅವರು ಹೇಳಿದರು. ನೇತ್ರಾಲಯಲ್ಲಿದ್ದ ಎಲ್ಲ ಪೀಠೋಪಕರಣ ಹಾಗೂ ಯಂತ್ರೋಪಕರಣ ಸುಟ್ಟು ಕರಕಲಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ತಿಂಗಳು, ವಿವೇಕ್ ವಿಹಾರ್‌ನ ಆಸ್ಪತ್ರೆಯೊಂದರಲ್ಲಿ ಸಂಭವಿಸಿದ ಭಾರೀ ಬೆಂಕಿಯಲ್ಲಿ ಆರು ನವಜಾತ ಶಿಶುಗಳು ಸಾವಿಗೀಡಾದ್ದವು. ವಿವೇಕ್ ವಿಹಾರ್‌ನಲ್ಲಿರುವ ಐದು ಹಾಸಿಗೆಗಳ ನವಜಾತ ಶಿಶು ಕೇಂದ್ರದಲ್ಲಿ ಹಲವಾರು ಸುರಕ್ಷತಾ ಲೋಪಗಳು ಬೆಳಕಿಗೆ ಬಂದಿದ್ದರೂ ಸಹ, 27 ಆಮ್ಲಜನಕ ಸಿಲಿಂಡರ್‌ಗಳನ್ನು ಏಕೆ ಇರಿಸಲಾಗಿದೆ ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದೆ. ದೆಹಲಿ ಸರ್ಕಾರವು ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಸಂಸ್ಥೆಗಳಿಗೆ ಅಗ್ನಿಶಾಮಕ ಲೆಕ್ಕಪರಿಶೋಧನೆ ನಡೆಸಲು ನಿರ್ದೇಶಿಸಿದೆ.