ರಾಮಕೃಷ್ಣ ಮಿಷನ್ ನೇತೃತ್ವದಲ್ಲಿ ಜೂನ್ ತಿಂಗಳ ಸ್ವಚ್ಛ ಮಂಗಳೂರು ಅಭಿಯಾನದ ಅಂಗವಾಗಿ ನಗರದ ಪ್ರಮುಖ ಸಾರಿಗೆ ಕೇಂದ್ರವಾದ ಸ್ಟೇಟ್ ಬ್ಯಾಂಕ್ ಸರ್ವಿಸ್ ಬಸ್ ನಿಲ್ದಾಣದ ಆವರಣದಲ್ಲಿ ಭಾನುವಾರ ಬೃಹತ್ ಸ್ವಚ್ಛತಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. 
ನ್ಯೂಸ್

ಸ್ಟೇಟ್ ಬ್ಯಾಂಕ್ ಬಸ್ ನಿಲ್ದಾಣದಲ್ಲಿ ರಾಮಕೃಷ್ಣ ಮಿಷನ್‌ನಿಂದ ಬೃಹತ್ ಶ್ರಮದಾನ

ಮಂಗಳೂರು: ರಾಮಕೃಷ್ಣ ಮಿಷನ್ ನೇತೃತ್ವದಲ್ಲಿ ಜೂನ್ ತಿಂಗಳ ಸ್ವಚ್ಛ ಮಂಗಳೂರು ಅಭಿಯಾನದ ಅಂಗವಾಗಿ ನಗರದ ಪ್ರಮುಖ ಸಾರಿಗೆ ಕೇಂದ್ರವಾದ ಸ್ಟೇಟ್ ಬ್ಯಾಂಕ್ ಸರ್ವಿಸ್ ಬಸ್ ನಿಲ್ದಾಣದ ಆವರಣದಲ್ಲಿ ಭಾನುವಾರ ಬೃಹತ್ ಸ್ವಚ್ಛತಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಸಿ.ಎಸ್.ಐ ಸೇಂಟ್ ಪಾಲ್ಸ್ ಇಂಗ್ಲಿಷ್ ಚರ್ಚ್‌ನ ಪಾಸ್ಟರ್ ಅಬ್ರಹಾಂ ವಿನಯಲಾಲ್ ಬಂಗೇರಾ ಹಾಗೂ ನಿವೃತ್ತ ಯೋಧ ಗೋಪಿನಾಥ್ ರಾವ್ ಅವರು ಜಂಟಿಯಾಗಿ ಅಭಿಯಾನಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಅಬ್ರಹಾಂ ಬಂಗೇರಾ, ಸ್ವಚ್ಛ ಪರಿಸರ ಆರೋಗ್ಯಕರ ವಾತಾವರಣಕ್ಕೆ ಪೂರಕವಾದರೆ, ಆಂತರಿಕ ಸ್ವಚ್ಛತೆ ಉತ್ತಮ ಚಾರಿತ್ರ್ಯವನ್ನು ನಿರ್ಮಿಸುತ್ತದೆ. ಮಂಗಳೂರನ್ನು ಸ್ವಚ್ಛವಾಗಿಡಲು ನಿರಂತರವಾಗಿ ಶ್ರಮಿಸುತ್ತಿರುವ ರಾಮಕೃಷ್ಣ ಮಿಷನ್ ಕಾರ್ಯ ಶ್ಲಾಘನೀಯ ಎಂದರು.
ಹಿರಿಯ ಸ್ವಯಂಸೇವಕರ ತಂಡವು ಬಸ್ ನಿಲ್ದಾಣದ ಫುಟ್‌ಪಾತ್ ಹಾಗೂ ಪ್ರಯಾಣಿಕರ ವಿಶ್ರಮಿಸುವ ಸ್ಥಳಗಳಲ್ಲಿ ತೀವ್ರ ಸ್ವಚ್ಛತೆ ನಡೆಸಿತು. ಸಾರ್ವಜನಿಕ ಮೂತ್ರ ವಿಸರ್ಜನೆಯಿಂದ ಗಲೀಜಾಗಿದ್ದ ಗೋಡೆಗಳನ್ನು ನೀರು ಮತ್ತು ಅತ್ಯಾಧುನಿಕ ಕ್ಲೀನಿಂಗ್ ಉಪಕರಣಗಳನ್ನು ಬಳಸಿ ಸಂಪೂರ್ಣವಾಗಿ ತೊಳೆದು ಶುಚಿಗೊಳಿಸಲಾಯಿತು. ನಿಟ್ಟೆ ಫಿಸಿಯೋಥೆರಪಿ ಸಂಸ್ಥೆಯ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಇಡೀ ಬಸ್ ನಿಲ್ದಾಣದಲ್ಲಿದ್ದ ಟನ್ ಗಟ್ಟಲೆ ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಕಸವನ್ನು ಸಂಗ್ರಹಿಸಿದರು. ಮುಂಗಾರು ಮಳೆ ಆರಂಭವಾಗುತ್ತಿರುವುದರಿಂದ, ಮತ್ತೊಂದು ಹಿರಿಯ ಸ್ವಯಂಸೇವಕರ ತಂಡವು ಬಸ್ ನಿಲ್ದಾಣದ ಸುತ್ತಮುತ್ತಲಿನ ಚರಂಡಿಗಳಲ್ಲಿ ತುಂಬಿದ್ದ ಹೂಳು, ಪ್ಲಾಸ್ಟಿಕ್ ಹಾಗೂ ಕಸವನ್ನು ತೆರವುಗೊಳಿಸಿ, ಮಳೆನೀರು ಸುಲಭವಾಗಿ ಹರಿದುಹೋಗಲು ದಾರಿ ಮಾಡಿಕೊಟ್ಟಿತು.