ಭದ್ರಾವತಿ: ನಗರದೆಲ್ಲೆಡೆ ಕ್ರೈಸ್ತರು ಬುಧವಾರ ಸಡಗರ ಸಂಭ್ರಮದಿಂದ ಕ್ರಿಸ್‌ಮಸ್ ಹಬ್ಬವನ್ನು ಆಚರಿಸಿದರು. ನ್ಯೂಟೌನ್ ಅಮಲೋಧ್ಬವಿ ಮಾತಾ ದೇವಾಲಯ, ಗಾಂಧಿನಗರ, ಕಾಗದನಗರ. ಉಜ್ಜನೀಪುರ, ಕಾರೇಹಳ್ಳಿ ಮತ್ತಿತರ ಕಡೆ ಚರ್ಚ್‌ಗಳು ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದವು.
ಮಂಗಳವಾರ ರಾತ್ರಿಯೇ ಚರ್ಚ್‌ಗಳಿಗೆ ತೆರಳಿದ ಕ್ರೈಸ್ತರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಬುಧವಾರ ಮತ್ತೊಮ್ಮೆ ಕುಟುಂಬ ಸಮೇತರಾಗಿ ತೆರಳಿ ಪ್ರಾರ್ಥನೆ ಸಲ್ಲಿಸಿ ಶುಭಾಶಯ ವಿನಿಮಯ ಮಾಡಿಕೊಂಡರು. ವಿವಿಧ ಚರ್ಚ್ ಆವರಣಗಳಲ್ಲಿ ಬಾಲಯೇಸುವಿನ ಜನನ ವೃತ್ತಾಂತ ತಿಳಿಸುವ ಗೋದಲಿ ನಿರ್ಮಿಸಲಾಗಿತ್ತು. ಕಾರೇಹಳ್ಳಿಯ ಸಂತ ಅಂತೋಣಿ ಅವರ ಪುಣ್ಯಕ್ಷೇತ್ರದಲ್ಲಿ ನಿರ್ಮಿಸಿದ್ದ ಗೋದಲಿ ವಿಶೇಷವಾಗಿತ್ತು. ಅಡಕೆ ಮರದ ದಬ್ಬೆಗಳು ಹಾಗೂ ಒಣ ಹುಲ್ಲು ಸೇರಿ ವಿವಿಧ ಕಲಾಕೃತಿಗಳಿಂದ ಬೆಥೆಲ್‌ಹ್ಯಾಮ್ ಗ್ರಾಮವನ್ನೇ ನಿರ್ಮಿಸಿರುವುದು ಕಣ್ಮನ ಸೆಳೆಯಿತು.