ಮೈಸೂರು: ಐತಿಹಾಸಿಕ ಮಹತ್ವ ಹೊಂದಿರುವ ಹುಣಸೂರು ತಾಲೂಕಿನ ಧರ್ಮಾಪುರ ಸಮೀಪದ ಕೆಂಡಗಣ್ಣಸ್ವಾಮಿ ಗದ್ದಿಗೆ ಶ್ರೀ ಕ್ಷೇತ್ರದಲ್ಲಿ ಬುಧವಾರ ವಿಶ್ವ ಹಿಂದು ಪರಿಷತ್ ಹಾಗೂ ಎಸ್.ಎಸ್. ಫೌಂಡೇಶನ್ ಸಹಯೋಗದಲ್ಲಿ ನಡೆದ ಸಾಮೂಹಿಕ ವಿವಾಹದಲ್ಲಿ ಹುಣಸೂರು, ಪಿರಿಯಾಪಟ್ಟಣ,ಎಚ್.ಡಿ.ಕೋಟೆ, ಸರಗೂರು ತಾಲೂಕುಗಳ ಆದಿವಾಸಿ ಸಮುದಾಯದ 59 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.
ತಾಲೂಕಿನ ಗದ್ದಿಗೆಯ ಕೆಂಡಗಣ್ಣೇಶ್ವರ, ಮಹದೇಶ್ವರ ಕಲ್ಯಾಣ ಮಂಟಪದಲ್ಲಿ ದಾನಿಗಳ ನೆರವಿನೊಂದಿಗೆ ಸಾಮೂಹಿಕ ವಿವಾಹ ಆಯೋಜಿಸಲಾಗಿತ್ತು. ನಂತರ ನಡೆದ ಧಾರ್ಮಿಕ ಸಮಾರಂಭದಲ್ಲಿ ಶ್ರೀ ಸಾಂಬ ಸದಾಶಿವ ಸ್ವಾಮೀಜಿ ಮಾತನಾಡಿ, ವಿಶ್ವ ಹಿಂದು ಪರಿಷತ್ ಆದಿವಾಸಿಗಳ ಮನವೊಲಿಸಿ ಸಾಮೂಹಿಕ ವಿವಾಹ ನೆರವೇರಿಸಿರುವುದು ಅಭಿನಂದನೀಯ. ಆದಿವಾಸಿಗಳು ಕಾಡಿನಿಂದ ನಾಡಿಗೆ ಬಂದು, ಧಾರ್ಮಿಕ ಸಂಪ್ರದಾಯಗಳನ್ನು ಆಚರಿಸಿ, ಬಾಲ್ಯವಿವಾಹ ಮಾಡದೆ ಸಾಂಪ್ರದಾಯಿಕವಾಗಿ ಮದುವೆಯಾಗಿ ಎಂದು ಸಲಹೆ ನೀಡಿದರು.
ಬಜರಂಗದಳದ ರಾಷ್ಟ್ರೀಯ ಸಹ ಸಂಚಾಲಕ ಸೂರ್ಯನಾರಾಯಣ್ ಮಾತನಾಡಿ, ದುಂದು ವೆಚ್ಚದ ಮದುವೆಗಳನ್ನು ಮಾಡದೆ ಸರಳ, ಸಾಮೂಹಿಕ ವಿವಾಹಗಳಿಗೆ ಹೆಚ್ಚು ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಬೆಂಗಳೂರಿನ ಉದ್ಯಮಿಗಳಾದ ಕಿಶನ್‌ಜೀ, ಬಾಬುಲಾಲ್ ಜೀ, ಶಕಿಲಾ ಶೆಟ್ಟಿ, ಮೈಸೂರಿನ ವಕೀಲ ಜಿ.ವಿ.ಕೇಶವಮೂರ್ತಿ ಸೇರಿದಂತೆ ಅನೇಕ ದಾನಿಗಳು ನೆರವು ಕಲ್ಪಿಸಿದರು. ಪ್ರತಿ ಕುಟುಂಬಕ್ಕೆ ಕನಿಷ್ಠ 15 ಸಾವಿರ ರೂ. ಬೆಲೆ ಬಾಳುವ ಗೃಹಪಯೋಗಿ ವಸ್ತುಗಳನ್ನು ವಿತರಿಸಲಾಗಿದೆ ಎಂದು ಬಜರಂಗದಳ ತಾಲೂಕು ಸಂಯೋಜಕ ಮಧುಗೌಡ, ವಿ.ಎಚ್.ಪಿ. ಜಿಲ್ಲಾ ಕಾರ್ಯದರ್ಶಿ ಮಹದೇವಪ್ಪ ತಿಳಿಸಿದರು.
ವಿಶ್ವ ಹಿಂದು ಪರಿಷತ್‌ನ ಜಿಲ್ಲಾ ಸೇವಾ ಪ್ರಮುಖ್ ಕುಂಟೇಗೌಡ, ಪ್ರಾಂತ ಕಾರ್ಯದರ್ಶಿ ಜಗನ್ನಾಥಶಾಸ್ತ್ರಿ , ಬೈಲಕುಪ್ಪೆ ಸೋಮಣ್ಣ ಮತ್ತಿತರರು ವಿವಾಹ ಕಾರ್ಯಕ್ರಮ ನಿರ್ವಹಿಸಿದರು. ಬಿಜೆಪಿ ಮಹಿಳಾ ಜಿಲ್ಲಾ ಘಟಕದ ಅಧ್ಯಕ್ಷೆ ಮಂಗಳಾ ಸೋಮಶೇಖರ್, ಪರಿಶಿಷ್ಟ ವರ್ಗಗಳ ಕಲ್ಯಾಣಾ ಇಲಾಖೆ ಅಧಿಕಾರಿ ಬಸವರಾಜು, ಸಿಬಂದಿ ಇದ್ದರು.