ಬೆಂಗಳೂರು: ಶ್ರೀ ಬನಶಂಕರಿ ಸಾಮೂಹಿಕ ವಿವಾಹ ವೇದಿಕೆಯು ಫೆ. 23ರಂದು ನಗರದ ಶ್ರೀ ಬನಶಂಕರಿ ದೇವಾಲಯದಲ್ಲಿ 26ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಮಹೋತ್ಸವ ಹಮ್ಮಿಕೊಂಡಿದೆ.
ಕಳೆದ 25 ವರ್ಷಗಳ ಕಾಲ ನಿರಂತರ ಹಾಗೂ ಆರ್ಥಪೂರ್ಣವಾಗಿ ಸಾಮೂಹಿಕ ವಿವಾಹ ಮಹೋತ್ಸವವನ್ನು ಆಚರಿಸಿಕೊಂಡು ಬಂದಿದ್ದು, ಈ ವೇದಿಕೆ ಮೂಲಕ ಇದುವರೆಗೂ ಸುಮಾರು 1,511ಕ್ಕೂ ಅಧಿಕ ಜೋಡಿಗಳು ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ.
ಬಡವರು, ಹಿಂದುಳಿದ ವರ್ಗಗಳ ಜನರಿಗೆ ವಿವಾಹ ದುಬಾರಿಯಾಗುತ್ತಿದ್ದನ್ನು ಮನಗೊಂಡ ವೇದಿಕೆ ಸರಳ ವಿವಾಹ ಪ್ರೋತ್ಸಾಹಿಸುವ ಸಲುವಾಗಿ 1999ರಲ್ಲಿ ವೇದಿಕೆಯು ಮೊದಲ ಬಾರಿಗೆ ಸಾಮೂಹಿಕ ವಿವಾಹ ಮಹೋತ್ಸವಕ್ಕೆ ಚಾಲನೆ ನೀಡಿತು. ಆರಂಭದಲ್ಲಿ 41 ಜೋಡಿಗಳು ವೈವಾಹಿಕ ಜೀವನ ಪ್ರವೇಶಿಸಿದವು. ಇದರಿಂದ ಪ್ರೇರಿತವಾಗಿ ವೇದಿಕೆಯು ಪ್ರತಿ ವರ್ಷ ನಿರಂತರವಾಗಿ ಸಾಮೂಹಿ ವಿವಾಹ ಆಯೋಜಿಸುತ್ತಿದ್ದು, ಈ ಬಾರಿ 26ನೇ ವರ್ಷದ ಆಚರಣೆಗೆ ಸಜ್ಜಾಗುತ್ತಿದೆ.
ಫೆ. 23ರಂದು ಬೆಳಗ್ಗೆ 2.46 ರಿಂದ 11.05ಕ್ಕೆ ಮೇಷ ಲಗ್ನದಲ್ಲಿ ವಿವಾಹ ಮಹೋತ್ಸವ ನಡೆಯಲಿದ್ದು, ಬೆಂಗಳೂರು ಸೇರಿ ರಾಜ್ಯದ ವಿವಿಧ ಭಾಗಗಳಲ್ಲಿ ವಾಸವಿರುವ ವಧು-ವರರ ಬಂಧುಗಳು ಹಾಗೂ ತಂದೆ ತಾಯಿಯರು ತಮ್ಮ ಮಕ್ಕಳ ವಿವಾಹಕ್ಕೆ ಹೆಸರು ನೋಂದಾಯಿಸಬಹುದು. ವಿವಾಹ ಮಹೋತ್ಸವದಲ್ಲಿ ಹಿಂದು ಸಂಪ್ರದಾಯದಂತೆ ವಧು - ವರರಿಗೆ ಸಮವಸ, ಬಾಸಿಂಗ, ಕಂಕಣದಾರ, ಹೂವಿನ ಹಾರ, ಮಾಂಗಲ್ಯ, ಕಾಲುಂಗುರ, ಪೇಟ ನೀಡಲಿದ್ದು, ಇಬ್ಬರು ಕಡೆ ಸಂಬಂಧಿಕರಿಗೂ ಊಟದ ವ್ಯವಸ್ಥೆ ಇಲಿದೆ ಎಂದು ವೇದಿಕೆ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ದೂ: 080-26712988, ಮೊ: 8971011527 ಸಂಪರ್ಕಿಸಬಹುದು.