ನ್ಯೂಸ್

ಮೇ ಒಳಗೆ ಮಾಸಾಶನ ಬಿಡುಗಡೆ; ಸಚಿವ ಸಿ.ಟಿ.ರವಿ ಭರವಸೆ

lakshmihegde

ಬೆಂಗಳೂರು: ಮಾಸಿಕ ಗೌರವಧನ ಪಡೆಯಲು ಎಲ್ಲ ಕಲಾವಿದರು ಸಲ್ಲಿಸಿರುವ ಅರ್ಜಿಗಳನ್ನು ಮೇ ಒಳಗಾಗಿ ವಿಲೇವಾರಿ ಮಾಡಿ ಮಾಸಾಶನ ಬಿಡುಗಡೆ ಮಾಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ ಭರವಸೆ ನೀಡಿದ್ದಾರೆ.

ಕರ್ನಾಟಕ ಜಾನಪದ ಪರಿಷತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಭಾನುವಾರ ಏರ್ಪಡಿಸಿದ್ದ ಜಾನಪದ ಲೋಕ ಬೆಳ್ಳಿಹಬ್ಬ ಉದ್ಘಾಟಿಸಿ ಮಾತನಾಡಿದರು. ಜಾನಪದ ಯಾರನ್ನೂ ಮೆಚ್ಚಿಸಲು ರಚನೆಯಾಗಿರದೇ, ಯಾರ ರಾಜಾಶ್ರಯವಿರದೇ ಬೆಳೆದುಬಂದ ಗಂಡು ಕಲೆ. ಹಾಗಾಗಿ ನಾನು ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಕೂಡಲೆ ಕಲಾವಿದರಿಗೆ ನೀಡಲಾಗುತ್ತಿದ್ದ ಮಾಸಾಶನ 1,500 ರೂ.ನಿಂದ 2 ಸಾವಿರ ರೂ.ಗೆ ಹೆಚ್ಚಿಸಿದ್ದೇನೆ. ಈಗ ಎಲ್ಲ ಕಲಾವಿದರ ರಕ್ಷಣೆ ಮಾಡುವ ಜವಾಬ್ದಾರಿ ಸರ್ಕಾರದ್ದಾಗಿದೆ. ರಾಜ್ಯ ಬಜೆಟ್ ಅಧಿವೇಶನ ಪೂರ್ಣಗೊಂಡ ನಂತರ ಮೇ ಒಳಗಾಗಿ ಎಲ್ಲ ಕಲಾವಿದರ ಅರ್ಜಿ ವಿಲೇವಾರಿ ಮಾಡಲಾಗುವುದು ಎಂದು ಹೇಳಿದರು.

ವಿಶ್ವಮಟ್ಟದ ಕಲಾಕೇಂದ್ರ: ಜಾನಪದ ಲೋಕವನ್ನು ರಾಜಸ್ಥಾನದ ಚೌಕಿದಾನಿ ಮಾದರಿಯಲ್ಲಿ ವಿಶ್ವಮಟ್ಟದ ಕಲಾಕೇಂದ್ರವನ್ನಾಗಿ 10 ಕೋಟಿ ರೂ. ಅನುದಾನಕ್ಕೆ ಮನವಿ ಮಾಡಲಾಗಿದೆ. ಸಿಎಂ ಬಳಿ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಿ ಬಜೆಟ್​ನಲ್ಲಿ ಅನುದಾನ ನೀಡುವಂತೆ ಮನವಿ ಮಾಡುತ್ತೇನೆ. ಜತೆಗೆ ಇಲಾಖೆ ವತಿಯಿಂದ ದೊರೆಯಬಹುದಾದ ಎಲ್ಲ ಅನುದಾನವನ್ನು ಜಾನಪದ ಕ್ಷೇತ್ರಕ್ಕೆ ನೀಡುತ್ತೇನೆ ಎಂದರು.

ಕರ್ನಾಟಕ ಜಾನಪದ ಪರಿಷತ್ತು ಅಧ್ಯಕ್ಷ ಟಿ. ತಿಮ್ಮೇಗೌಡ, ನಾಡೋಜ ಗೊ.ರು. ಚನ್ನಬಸಪ್ಪ, ಹಿರಿಯ ಸಾಹಿತಿ ಡಾ. ಸಿದ್ದಲಿಂಗಯ್ಯ, ರಂಗನಿರ್ದೇಶಕ ಸಿ. ಬಸವಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎಸ್. ರಂಗಪ್ಪ, ಜಾನಪದ ಪರಿಷತ್ತಿನ ಮ್ಯಾನೇಜಿಂಗ್ ಟ್ರಸ್ಟಿ ಆದಿತ್ಯ ನಂಜರಾಜ್ ಮತ್ತಿತರರಿದ್ದರು.

ವಿದ್ವಾಂಸರು, ಕಲಾವಿದರಿಗೆ ಗೌರವ

ವೇದಿಕೆಯಲ್ಲಿ 12 ಜನ ಜಾನಪದ ವಿದ್ವಾಂಸರು ಹಾಗೂ 15 ಜನ ಜಾನಪದ ಕಲಾವಿದರನ್ನು ಗೌರವಿಸಲಾಯಿತು. ಜಾನಪದ ಕಲಾವಿದ ಬಂಡಲಹಳ್ಳಿ ವಿಜಯಕುಮಾರ್ ನೇತೃತ್ವದಲ್ಲಿ 120 ಮಹಿಳೆಯರು ಜಾನಪದ ಗೀತೆ ಹಾಡಿ ವಿಶೇಷ ದಾಖಲೆ ನಿರ್ವಿುಸಿದರು. ಬೆಳಗ್ಗೆಯಿಂದ ಡೊಳ್ಳು ಕುಣಿತ, ತಮಟೆ ವಾದನ, ವೀರಗಾಸೆ, ಜೋಗತಿ ನೃತ್ಯ, ಪೂಜಾ ಕುಣಿತ, ನಗಾರಿ, ಚಿಟ್ಟಿಮೇಳ, ಚೌಡಿಕೆ, ಬೀಸು ಕಂಸಾಳೆ ಮತ್ತು ಹೊರ ರಾಜ್ಯಗಳ ಭಾಂಗ್ರಾ, ತಾಂಗ್ಟ, ಗರ್ಭ, ಕರಗ, ಕಾವಡಿ, ಕೈಕೊಟ್ಟಿ ಕಳಿ, ಸುವಾ ಜಾನಪದ ನೃತ್ಯಗಳಳು ಪ್ರದರ್ಶನಗೊಂಡವು.

ದೇಶದ ವಿವಿಧ ರಾಜ್ಯಗಳಲ್ಲಿ ವಿಲೇಜ್ ಟೂರಿಸಂ ಪ್ರಸಿದ್ಧಿಯಾಗುತ್ತಿದೆ. ಅದರಿಂದ ಸಾಂಸ್ಥಿಕ ಹಾಗೂ ಖಾಸಗಿಯಾಗಿ ಆದಾಯ ಗಳಿಸಲಾಗುತ್ತಿದೆ. ಅದೇ ರೀತಿ ನಮ್ಮ ರಾಜ್ಯದಲ್ಲೂ 48 ಗ್ರಾಮಗಳಲ್ಲಿ ‘ವಿಲೇಜ್ ಟೂರಿಸಂ’(ಗ್ರಾಮೀಣ ಪ್ರವಾಸ) ಆರಂಭಿಸಲಾಗುವುದು. ಈ ಮೂಲಕ ಗ್ರಾಮೀಣ ಜೀವನಶೈಲಿ, ಸಂಸ್ಕೃತಿ ಹಾಗೂ ಬದುಕಿನ ಚಿತ್ರಣವನ್ನು ಕಟ್ಟಿಕೊಡಲಾಗುವುದು. | ಸಿ.ಟಿ. ರವಿ ಕನ್ನಡ ಮತ್ತು ಸಂಸ್ಕೃತಿ ಸಚಿವ
ಕಲಾವಿದರ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪನೆಗೆ ಮನವಿ

ಜಾನಪದ ಕಲೆ ರಕ್ಷಣೆಗೆ ಸರ್ಕಾರ ನೀಡುತ್ತಿರುವ ಪೋ›ತ್ಸಾಹ ಸಾಲುತ್ತಿಲ್ಲ. ಮೂಲ ಜಾನಪದ ಕಲಾವಿದರು ಪ್ರಶಸ್ತಿ, ಗೌರವಧನಕ್ಕಾಗಿ ಭಿಕ್ಷೆ ಬೇಡುವುದಿಲ್ಲ. ಅವರನ್ನು ಗುರುತಿಸಿ ಗೌರವಧನಕೊಟ್ಟು ರಕ್ಷಿಸಬೇಕು. ಕಲಾವಿದರ ಮಾಸಾಶನ ಬಾಕಿ ಅರ್ಜಿಗಳನ್ನು ವಿಲೇವಾರಿ ಮಾಡಬೇಕು. ಕಲಾವಿದರ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಬೇಕು ಎಂದು ಕರ್ನಾಟಕ ಜಾನಪದ ಪರಿಷತ್ತು ಅಧ್ಯಕ್ಷ ಟಿ. ತಿಮ್ಮೇಗೌಡ ಮನವಿ ಮಾಡಿದರು. ಶಾಲೆ ಕಾಲೇಜು ಪಠ್ಯದಲ್ಲಿ ಜಾನಪದ ಕಲೆ ವಿಷಯ ಅಳವಡಿಸಬೇಕು. ಕನ್ನಡ ಸಾಹಿತ್ಯ ಪರಿಷತ್ತಿನಂತೆ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಮತ್ತು ರಾಜ್ಯಮಟ್ಟದ ಕಾರ್ಯಕ್ರಮಗಳಿಗೆ ಸರ್ಕಾರ ನೆರವು ನೀಡಬೇಕು ಎಂದು ಕೋರಿದರು.