ರಯಾನ್ ಗೋಸ್ಲಿಂಗ್, ಡೇವಿಡ್ ಜಾನ್ಸನ್
- ಘೋಸ್ಟ್ ರೈಡರ್, ಬ್ಲ್ಯಾಕ್ ಪ್ಯಾಂಥರ್ 3 ಸಿನಿಮಾ ಘೋಷಿಸಿದ ನಿರ್ಮಾಣ ಸಂಸ್ಥೆ
- ಕಾಮಿಕ್ ಕಾನ್ ನಲ್ಲಿ ಭಾಗವಹಿಸಿದ್ದ ನಿರ್ಮಾಣ ಸಂಸ್ಥೆ
- ಇದೇ ಜುಲೈ 31ಕ್ಕೆ ತೆರೆ ಮೇಲೆ ಬರಲಿದ್ದಾನೆ ಸ್ಪೈಡರ್ ಮ್ಯಾನ್ : : ಬ್ರ್ಯಾಂಡ್ ನ್ಯೂ ಡೇ
ಹಾಲಿವುಡ್‌ನಲ್ಲಿ ಪ್ರಮುಖ ಸೂಪರ್ ಹೀರೋ ಸಿನಿಮಾಗಳನ್ನು ನಿರ್ಮಿಸಿದ ಖ್ಯಾತಿ ಮಾರ್ವೆಲ್ ಸ್ಟುಡಿಯೋಸ್‌ಗೆ ಸಲ್ಲುತ್ತದೆ. 2008ರಲ್ಲಿ ಆರಂಭವಾದ ಈ ಸ್ಟುಡಿಯೋಸ್ ‘ಮಾರ್ವೆಲ್ ಸಿನಿಮ್ಯಾಟಿಕ್ ಯೂನಿವರ್ಸ್’ ಮೂಲಕ ಹಲವು ಸೂಪರ್ ಹೀರೋಗಳ ಸಾಹಸವನ್ನು ತೆರೆ ಮೇಲೆ ತಂದು ರಂಜಿಸಿದೆ. ಈಗಾಗಲೇ ‘ಐರನ್ ಮ್ಯಾನ್’, ‘ಆ್ಯಂಟ್ ಮ್ಯಾನ್’, ‘ದ ಇನ್ಕ್ರಿಡಬಲ್ ಹಲ್ಕ್’, ‘ಥೋರ್, ‘ಕ್ಯಾಪ್ಟನ್ ಅಮೆರಿಕಾ: ದ ಫಸ್ಟ್ ಏವೆಂಜರ್’, ‘ಸ್ಪೈಡರ್ ಮ್ಯಾನ್’, ‘ಕ್ಯಾಪ್ಟನ್ ಮಾರ್ವೆಲ್’ ಮತ್ತು ‘ದ ಏವೆಂಜರ್ಸ್’ ಸೇರಿ ಹಲವು ಸಿನಿಮ್ಯಾಟಿಕ್ ಯೂನಿವರ್ಸ್‌ಗಳನ್ನು ಒಟ್ಟು ಆರು ಹಂತಗಳಲ್ಲಿ ಸೃಷ್ಟಿಸಿದೆ. ಹೀಗಿರುವಾಗಲೇ ಇತ್ತೀಚೆಗೆ ಸ್ಯಾನ್ ಡಿಯೋಗದಲ್ಲಿ ಆಯೋಜಿಸಿರುವ ‘ಕಾಮಿಕ್-ಕಾನ್’ನಲ್ಲಿ ಪಾಲ್ಗೊಂಡಿದ್ದ ಮಾರ್ವೆಲ್ ಸ್ಟುಡಿಯೋಸ್‌ನ ಪ್ರಮುಖರು ‘ಬ್ಲ್ಯಾಕ್ ಪ್ಯಾಂಥರ್ 3’ ಮತ್ತು ‘ಘೋಸ್ಟ್ ರೈಡರ್’ ಹೊಸ ಚಿತ್ರಗಳನ್ನು ಘೋಷಿಸಿದ್ದಾರೆ. ಈ ಎರಡು ಸಿನಿಮಾಗಳು 2028ಕ್ಕೆ ತೆರೆ ಮೇಲೆ ಬರಲಿವೆ. -ಏಜೆನ್ಸೀಸ್
ಡೇವಿಡ್ ಜಾನ್ಸನ್ ಹೊಸ ‘ಬ್ಲ್ಯಾಕ್ ಪ್ಯಾಂಥರ್
ಮಾರ್ವೆಲ್ ಸಿನಿಮ್ಯಾಟಿಕ್ ಯೂನಿವರ್ಸ್‌ನಲ್ಲಿ ‘ಬ್ಲ್ಯಾಕ್ ಪ್ಯಾಂಥರ್’(2018) ಮತ್ತು ‘ಬ್ಲ್ಯಾಕ್ ಪ್ಯಾಂಥರ್: ವಾಕಾಂಡ ಫಾರೆವರ್’ (2022) ತೆರೆ ಮೇಲೆ ಬಂದಿವೆ. ಇದೀಗ ಮೂರನೇ ಸಿನಿಮಾ ಘೋಷಣೆಯಾಗಿದ್ದು, ‘‘ಬ್ಲ್ಯಾಕ್ ಪ್ಯಾಂಥರ್ 3’ಗೆ ಹೊಸ ನಾಯಕನ ಆಗಮನವಾಗಿದೆ. ಹಾಲಿವುಡ್ ನಟ ಡೇವಿಡ್ ಜಾನ್ಸನ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಮೊದಲು ಎರಡು ಸಿನಿಮಾಗಳನ್ನು ನಿರ್ದೇಶಿಸಿದ್ದ ರಯಾನ್ ಕೂಗ್ಲರ್ ಅವರೇ ಈ ಚಿತ್ರಕ್ಕೂ ಆ್ಯಕ್ಷನ್-ಕಟ್ ಹೇಳಲಿದ್ದಾರೆ. ‘ಬ್ಲಾಕ್ ಪ್ಯಾಂಥರ್ 2’ನಲ್ಲಿ ಬಾಲಕನಾಗಿದ್ದ ಪ್ರಿನ್ಸ್ ಟಿ’ ಚಲ್ಲಾ ಮೂರನೇ ಭಾಗದಲ್ಲಿ ಯುವಕನಾಗಿ ಕಾಣಿಸಿಕೊಳ್ಳಲಿದ್ದು, ಆತನ ಮುಂದುವರಿದ ಕಥೆಯಾಗಿದೆ.
ಈಗಾಗಲೇ ಹಾಲಿವುಡ್‌ನಲ್ಲಿ ‘ಘೋಸ್ಟ್ ರೈಡರ್’ ಹೆಸರಿನಲ್ಲಿ ಎರಡು ಸಿನಿಮಾಗಳು ಮೂಡಿಬಂದಿವೆ. ಇದೀಗ ಮಾರ್ವೆಲ್ ಸಿನಿಮ್ಯಾಟಿಕ್ ಯೂನಿವರ್ಸ್‌ನಲ್ಲಿ ಹೊಸ ‘ಘೋಸ್ಟ್ ರೈಡರ್’ ಘೋಷಿಸಿದೆ. ಈ ಚಿತ್ರಕ್ಕೆ ‘ಸ್ಟಾರ್ ವಾರ್ಸ್: ಸ್ಟಾರ್‌ಫೈಟರ್’ ಖ್ಯಾತಿಯ ಶಾನ್ ಲೇವಿ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ‘ಲಾ ಲಾ ಲ್ಯಾಂಡ್’ ನಟ ರಯಾನ್ ಗೋಸ್ಲಿಂಗ್ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ.
ಎಂಸಿಯೂನ ಮುಂದಿನ ಸಿನಿಮಾಗಳು
ಮಾರ್ವೆಲ್ ಸಿನಿಮ್ಯಾಟಿಕ್ ಯೂನಿವರ್ಸ್‌ನ (ಎಂಸಿಯೂ) ಸಾಲು ಸಾಲು ಸಿನಿಮಾಗಳು ರಿಲೀಸ್‌ಗೆ ಸಿದ್ಧವಾಗಿವೆ. ಇದೇ 31ರಂದು ‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ರಿಲೀಸ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಮಾರ್ವೆಲ್ ನಿರ್ಮಾಣ ತಂಡ ಕಾಮಿಕ್-ಕಾನ್‌ನಲ್ಲಿ ಪ್ರಚಾರ ನಡೆಸಿದೆ. ಅದರ ಬಳಿಕ ‘ಏವೆಂಜರ್ಸ್: ಎಂಡ್ ಗೇಮ್’ (ಸೆ.25), ‘ಏವೆಂಜರ್ಸ್: ಡೂಮ್ಸ್ ಡೇ’ (ಡಿ. 18), ‘ಏವೆಂಜರ್ಸ್: ಸೀಕ್ರೆಟ್ ವಾರ್ಸ್’ (ಡಿ. 17, 2027) ರಿಲೀಸ್ ಆಗಲಿವೆ.