ಬೆಂಗಳೂರು: ಪ್ರೀತಿ, ಮದುವೆ ಆಮಿಷವೊಡ್ಡಿ ಅಪ್ರಾಪ್ತೆಯನ್ನು ತಮಿಳುನಾಡಿಗೆ ಕರೆದೊಯ್ದು ಖಾಸಗಿ ಕ್ಷಣಗಳನ್ನು ಕಳೆದಿದ್ದ ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿ ಎಫ್ ಟಿಎಸ್ ಸಿ 3ನೇ ನ್ಯಾಯಾಲಯ ತೀರ್ಪು ನೀಡಿದೆ.
ಹೊಸ ರಸ್ತೆ ದೊಡ್ಡನಾಗಮಂಗಲ ಬಳಿಯ ವಿನಾಯಕನಗರ ನಿವಾಸಿ ಇಮ್ರಾನ್ ಅಲಿಯಾಸ್ ಇಮ್ಮು (24) ಅಪರಾಧಿ. ದಲಿತ ಅಪ್ರಾಪ್ತೆಗೆ ಪ್ರೀತಿಸುತ್ತಿರುವುದಾಗಿ ಇಮ್ರಾನ್ ಹಿಂದೆ ಬಿದ್ದು, ಮದುವೆ ಆಗುವುದಾಗಿ ಪುಸಲಾಯಿಸಿದ್ದ. ನಂತರ ಇಲ್ಲೇ ಇದ್ದರೆ ನಾವಿಬ್ಬರೂ ಮದುವೆ ಆಗಲು ಬಿಡುವುದಿಲ್ಲ ಎಂದು ಹೇಳಿ ವಿವಾಹಕ್ಕೆ ಸಂಚು ರೂಪಿಸಿದ್ದ. 2017ರಂದು ಇಮ್ರಾನ್, ಸ್ನೇಹಿತೆಯೊಬ್ಬಳು ತನ್ನ ಮನೆ ಬಳಿಗೆ ಸಂತ್ರಸ್ತೆಯನ್ನು ಕರೆಸಿಕೊಂಡು ಬಾಡಿಗೆ ಆಟೋದಲ್ಲಿ ಕರೆದೊಯ್ದು ಮಡಿವಾಳ ಬಸ್ ನಿಲ್ದಾಣದಲ್ಲಿ ತಮಿಳುನಾಡಿಗೆ ಬಸ್ ಹತ್ತಿಸಿದ್ದಳು.
ಬಸ್‌ನಲ್ಲಿ ಸಂತ್ರಸ್ತೆ ಬರುತ್ತಿರುವ ಮಾಹಿತಿಯನ್ನು ಇಮ್ರಾನ್‌ಗೆ ತಿಳಿಸಿದ್ದಳು. ಕೃಷ್ಣಗಿರಿಗೆ ಬಂದ ಸಂತ್ರಸ್ತೆಯನ್ನು ಅಪರಾಧಿ ಇಮ್ರಾನ್ ಕರೆದುಕೊಂಡು ಹೋಗಿ ಬಾಡಿಗೆ ಮನೆ ಮಾಡಿಕೊಂಡು ಮದುವೆ ಆಗಿರುವುದಾಗಿ ಹೇಳಿಕೊಂಡು ಜೀವನ ಸಾಗಿಸುತ್ತಿದ್ದ. ಈ ಬಗ್ಗೆ ಸಂತ್ರಸ್ತೆ ಪಾಲಕರು ಕೊಟ್ಟ ದೂರಿನ ಮೇರೆಗೆ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ಕೈಗೊಂಡ ಎಲೆಕ್ಟ್ರಾನಿಕ್ಸ್ ಸಿಟಿ ಉಪ ವಿಭಾಗ ಎಸಿಪಿ ಸೂರ್ಯನಾರಾಯಣ ರಾವ್ ನೇತೃತ್ವದ ತಂಡ ಇಮ್ರಾನ್‌ನನ್ನು ಬಂಧಿಸಿ ಅಪ್ರಾಪ್ತೆಯನ್ನು ರಕ್ಷಣೆ ಮಾಡಿದ್ದರು. ತನಿಖೆ ನಡೆಸಿ ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿದ್ದರು. ಪಬ್ಲಿಕ್ ಪ್ರಾಸಿಕ್ಯೂಟರ್ ಗೀತಾ ರಾಮಕೃಷ್ಣ ಗೊರವರ, ಸಂತ್ರಸ್ತೆ ಪರವಾಗಿ ವಾದ ಮಂಡಿಸಿದ್ದರು. ನ್ಯಾಯಾಧೀಶರಾದ ಇಷ್ರತ್ ಜಹಾನ್ ಅರ ಅವರು, ವಾದ-ಪ್ರತಿವಾದ ಆಲಿಸಿ ಇಮ್ರಾನ್ ಅಪರಾಧಿ ಎಂದು ಘೋಷಣೆ ಮಾಡಿ 20 ವರ್ಷ ಜೈಲು ಶಿಕ್ಷೆ, 25 ಸಾವಿರ ರೂ. ದಂಡ ವಿಧಿಸಿದ್ದಾರೆ. ಸಂತ್ರಸ್ತೆಗೆ 2 ಲಕ್ಷ ರೂ. ಪರಿಹಾರ ಮತ್ತು ದಂಡದ ಮೊತ್ತವನ್ನು ಈಕೆಗೆ ಕೊಡುವಂತೆ ನ್ಯಾಯಾಲಯ ತೀರ್ಪು ನೀಡಿದೆ.