ನ್ಯೂಸ್

ಕಳೆದ 7 ತಿಂಗಳಲ್ಲಿ 25 ಪುರುಷರನ್ನು ಮದುವೆಯಾದ ಅನುರಾಧಾ: ಈಕೆಯ ಗುರಿ ಅದೊಂದೆ ಆಗಿತ್ತು! Marriage

Marriage : ಕಳೆದ ಏಳು ತಿಂಗಳಲ್ಲಿ ಭಾರತದ ವಿವಿಧ ರಾಜ್ಯಗಳ 25 ಪುರುಷರನ್ನು ಮದುವೆಯಾದ ಚಾಲಾಕಿ ಮಹಿಳೆಯನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ.

ಬಂಧಿತಳನ್ನು ಮಹಿಳೆಯನ್ನು ಮಧ್ಯಪ್ರದೇಶದ ಭೋಪಾಲ್‌ ಮೂಲದ ಅನುರಾಧಾ ಎಂದು ಗುರುತಿಸಲಾಗಿದೆ. ವಿವಾಹ ವಂಚನೆಗೆ ಸಂಬಂಧಿಸಿದಂತೆ ಬಂದ ದೂರಿನ ಆಧಾರದ ಮೇಲೆ ಪೊಲೀಸರು ಅನುರಾಧಾಳನ್ನು ಬಂಧಿಸಿದ್ದಾರೆ. ಮದುವೆ ಮಾಡಿಕೊಂಡ ಬಳಿಕ ವರನ ಮನೆಯಿಂದ ಹಣ ಮತ್ತು ಚಿನ್ನವನ್ನು ಕದ್ದು ಓಡಿಹೋಗುವುದೇ ಈಕೆಯ ವಂಚನೆ ವಿಧಾನವಾಗಿದೆ. ಮದುವೆಯಾಗಿ ದೋಚುವುದೇ ಅನುರಾಧಾಳ ಏಕೈಕ ಗುರಿಯಾಗಿತ್ತು.

ಪೊಲೀಸರು ಹೇಳುವ ಪ್ರಕಾರ, ಆರೋಪಿ ಅನುರಾಧಾ ದೊಡ್ಡ ಮಟ್ಟದ ವಿವಾಹ ವಂಚನೆ ಜಾಲದ ಭಾಗವಾಗಿದ್ದಾಳೆ. ಮದುವೆಯಾಗಲು ವಧು ಸಿಗದೇ ತುಂಬಾ ಹತಾಶಾರಾದ ಯುವಕರನ್ನೇ ಆಕೆ ಗುರಿಯಾಗಿಸಿಕೊಳ್ಳುತ್ತಿದ್ದಳು. ಬಳಿಕ, ಅವರನ್ನು ನಂಬಿಸಿ, ಮದುವೆಯಾಗುತ್ತಿದ್ದಳು. ನಂತರ ಬೆಲೆಬಾಳುವ ವಸ್ತುಗಳೊಂದಿಗೆ ಆಕೆ ಪರಾರಿಯಾಗುತ್ತಿದ್ದಳು. ಅನುರಾಧಾ ತನ್ನ ಕಾರ್ಯಾವಿಧಾನದಲ್ಲಿ ಪರಿಣತಿ ಹೊಂದಿದ್ದಳು ಎಂದು ರಾಜಸ್ಥಾನದ ಮಾನ್ಪುರ್​ ಪೊಲೀಸ್ ಠಾಣೆಯ ತನಿಖಾಧಿಕಾರಿ ಮೀಥಾ ಲಾಲ್ ಹೇಳಿದ್ದಾರೆ.

ಆರೋಪಿ ಅನುರಾಧಾ, ಕಾನೂನುಬದ್ಧವಾಗಿ ಅನೇಕ ಜನರನ್ನು ಮದುವೆಯಾಗುತ್ತಿದ್ದಳು. ಕೆಲವು ದಿನಗಳ ಕಾಲ ವರನ ಮನೆಯಲ್ಲಿ ಉಳಿದುಕೊಂಡ ನಂತರ, ರಾತ್ರಿಯ ವೇಳೆ ಚಿನ್ನ, ಹಣ ಮತ್ತು ಇತರ ಬೆಲೆಬಾಳುವ ವಸ್ತುಗಳೊಂದಿಗೆ ಪರಾರಿಯಾಗುತ್ತಿದ್ದಳು ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ರಾಜಸ್ಥಾನದ ಸವಾಯಿ ಮಾಧೋಪುರ್ ಮೂಲದ ವಿಷ್ಣು ಶರ್ಮ ಎಂಬ ಯುವಕ ಅನುರಾಧಾ ವಿರುದ್ಧ ದೂರು ನೀಡಿದ ನಂತರ ಈ ಮಾಹಿತಿ ಬೆಳಕಿಗೆ ಬಂದಿದೆ. ಶರ್ಮ ಅವರು ಸುನೀತಾ ಮತ್ತು ಪಪ್ಪು ಮೀನಾ ಎಂಬ ಇಬ್ಬರು ಏಜೆಂಟರಿಗೆ 2 ಲಕ್ಷ ರೂ.ಗಳನ್ನು ನೀಡಿದ್ದು, ತನಗೆ ಸೂಕ್ತ ಸಂಗಾತಿಯನ್ನು ಹುಡುಕಿ ಕೊಡುವುದಾಗಿ ಭರವಸೆ ನೀಡಿದ್ದರು. ಬಳಿಕ ಅನುರಾಧಾಳನ್ನು ವಧುವನ್ನಾಗಿ ನನ್ನ ಬಳಿ ಕರೆತಂದವರು. ನಮ್ಮಿಬ್ಬರ ನಡುವೆ ಏಪ್ರಿಲ್ 20ರಂದು ವಿವಾಹ ನಡೆಯಿತು. ಇದಾದ ಎರಡು ದಿನಗಳ ಬಳಿಕ ಅನುರಾಧಾಮ, ನಮ್ಮ ಮನೆಯಿಂದ ಬೆಲೆಬಾಳುವ ವಸ್ತುಗಳನ್ನು ಕದ್ದು ಓಡಿಹೋಗಿದ್ದಾಳೆ ಎಂದು ಸಂತ್ರಸ್ತ ವಿಷ್ಣು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಅನುರಾಧಾ ಉತ್ತರ ಪ್ರದೇಶದ ಮಹಾರಾಜ್‌ಗಂಜ್‌ನಲ್ಲಿರುವ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಕೌಟುಂಬಿಕ ಕಲಹದಿಂದಾಗಿ ತನ್ನ ಪತಿಯಿಂದ ಬೇರ್ಪಟ್ಟು ಭೋಪಾಲ್‌ಗೆ ತೆರಳಿದರು. ಬಳಿ ಅಲ್ಲಿ ಮದುವೆ ವಂಚನೆ ಗ್ಯಾಂಗ್‌ಗೆ ಅನುರಾಧಾ ಸೇರಿದರು. ಗ್ಯಾಂಗ್​ನ ಏಜೆಂಟರು ಅನುರಾಧಾ ಅವರಂತಹ ಯುವತಿಯರನ್ನು 2 ರಿಂದ 5 ಲಕ್ಷ ರೂ.ಗಳ ಬ್ರೋಕರ್ ಶುಲ್ಕಕ್ಕೆ ಮದುವೆ ಮಾಡಿಸುತ್ತಾರೆ. ಈ ಮದುವೆಯ ನಂತರ, ವಧು ಒಂದು ವಾರದೊಳಗೆ ಮನೆಯಲ್ಲಿರುವ ಬೆಲೆ ಬಾಳುವ ವಸ್ತುಗಳನ್ನು ಕದ್ದು ಸ್ಥಳ ಖಾಲಿ ಮಾಡುತ್ತಾರೆ. ರೋಶ್ನಿ, ರಘುಬೀರ್, ಗೋಲು, ಮಜ್‌ಬೂತ್ ಸಿಂಗ್ ಯಾದವ್ ಮತ್ತು ಅರ್ಜನ್ ಸೇರಿದಂತೆ ಭೋಪಾಲ್‌ನ ವಿವಿಧ ಪ್ರದೇಶಗಳಿಂದ ಹಲವಾರು ಆರೋಪಿಗಳನ್ನು ಪೊಲೀಸರು ಗುರುತಿಸಿ, ಬಂಧಿಸಿದ್ದಾರೆ. (ಏಜೆನ್ಸೀಸ್​)