ಒಂದು ನಿಲ್ದಾಣ-ಒಂದು ಉತ್ಪನ್ನ ಯೋಜನೆಯಡಿ ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಇಳಕಲ್ ಸೀರೆ ಮಳಿಗೆಗೆ ಬಿ.ವೈ.ರಾಘವೇಂದ್ರ ಚಾಲನೆ ನೀಡಿದರು. ಡಿ.ಎಸ್.ಅರುಣ್, ಎಸ್.ರುದ್ರೇಗೌಡ, ಭಾರತಿ ಶೆಟ್ಟಿ, ಎಸ್.ದತ್ತಾತ್ರಿ ಇತರರಿದ್ದರು. 
ನ್ಯೂಸ್

ಸ್ಥಳೀಯ ವಸ್ತುಗಳಿಗೆ ಮಾರುಕಟ್ಟೆ ವಿಸ್ತರಣೆ: ಬಿವೈಆರ್

ಶಿವಮೊಗ್ಗ: ಒಂದು ನಿಲ್ದಾಣ-ಒಂದು ಉತ್ಪನ್ನ ಯೋಜನೆಯಿಂದ ರೈತರಿಗೆ ಅನುಕೂಲವಾಗಲಿದೆ. ಆರ್ಥಿಕ ಪ್ರಗತಿಗೂ ಇದು ಸಹಕಾರಿಯಾಗಲಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

ಒಂದು ನಿಲ್ದಾಣ-ಒಂದು ಉತ್ಪನ್ನ ಯೋಜನೆಗೆ ಅಹಮದಾಬಾದ್‌ನಿಂದ ವರ್ಚುವಲ್ ಮೂಲಕ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ ಹಿನ್ನೆಲೆಯಲ್ಲಿ ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲೂ ಇಳಕಲ್ ಸೀರೆ ವ್ಯಾಪಾರ ಮಳಿಗೆ ಉದ್ಘಾಟಿಸಿ ಮಾತನಾಡಿದ ಅವರು, ಈ ಯೋಜನೆಯಿಂದ ರಾಜ್ಯದ ಉತ್ಪನ್ನಗಳನ್ನು ಜನಪ್ರಿಯಗೊಳಿಸಲು ಅನುಕೂಲವಾಗಲಿದೆ ಎಂದರು.
ಈ ಯೋಜನೆಯಡಿ ನೋಂದಣಿ ಮಾಡಿಕೊಂಡಿದ್ದ ನಮ್ಮ ರಾಜ್ಯದ ಪರಂಪರೆಯಾದ ಇಳಕಲ್ ಸೀರೆ ವ್ಯಾಪಾರಕ್ಕೆ ಚಾಲನೆ ನೀಡಲಾಗಿದೆ. ದೇಶಾದ್ಯಂತ ಸ್ಥಳೀಯ ಉತ್ಪನ್ನಗಳು, ಕರಕುಶಲ ವಸ್ತುಗಳು, ಕೈಮಗ್ಗದ ಉತ್ಪನ್ನಗಳು, ಸಂಸ್ಕರಿಸಿದ ಆಹಾರ ಪದಾರ್ಥಗಳಿಗೆ ಮಾರುಕಟ್ಟೆ ವಿಸ್ತರಣೆಯಾಗಲಿದೆ ಎಂದು ಹೇಳಿದರು.
ಲಕ್ಷಾಂತರ ಕಿ.ಮೀ. ವಿಸ್ತಾರವಾಗಿರುವ ರೈಲ್ವೆ ಮಾರ್ಗವನ್ನು ಡಿಜಿಟಲ್ ಹಾಗೂ ಕೇಂದ್ರೀಕೃತ ವ್ಯವಸ್ಥೆಯ ನಿಯಂತ್ರಣವನ್ನು ಗುಜರಾತ್‌ನಲ್ಲಿ ರೂಪಿಸಲಾಗಿದೆ. ಇದು ಆಧುನೀಕರಣದ ಪ್ರತೀಕ ಎಂದು ಅಭಿಪ್ರಾಯಪಟ್ಟರು. ವಿಧಾನ ಪರಿಷತ್ ಸದಸ್ಯರಾದ ಎಸ್.ರುದ್ರೇಗೌಡ, ಡಿ.ಎಸ್.ಅರುಣ್, ಭಾರತಿ ಶೆಟ್ಟಿ, ಎಸ್.ದತ್ತಾತ್ರಿ ಇತರರಿದ್ದರು.
ಇಳಕಲ್ ಸೀರೆ-ಖಾದಿ ಉತ್ಪನ್ನ: ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಒಂದು ನಿಲ್ದಾಣ-ಒಂದು ಉತ್ಪನ್ನ ಯೋಜನೆಯಡಿ ಧಾರವಾಡದ ಇಳಕಲ್ ಸೀರೆ ಹಾಗೂ ಖಾದಿ ಉತ್ಪನ್ನಗಳ ಮಾರಾಟ ಮಳಿಗೆ ತೆರೆಯಲಾಗಿದೆ. ಇನ್ನೂ 15 ದಿನಗಳ ಕಾಲ ಮಳಿಗೆ ನಿಲ್ದಾಣದ ಆವರಣದಲ್ಲಿ ಇರಲಿದೆ. 700 ರೂ.ನಿಂದ ಆರಂಭಗೊಂಡು 2500 ರೂ.ವರೆಗಿನ ಸೀರೆಗಳು, ಕಾಟನ್ ಡ್ರೆಸ್ ಮೆಟೀರಿಯಲ್ಸ್, ಖಾದಿ ಕಾಟನ್ ಅಂಗಿಗಳು ಮತ್ತು ಜುಬ್ಬಾ, ಟವೆಲ್, ಲುಂಗಿ ಖರೀದಿಸಬಹುದು. ಉದ್ಘಾಟನೆ ಬಳಿಕ ಸಾಕಷ್ಟು ಮಂದಿ ಮಳಿಗೆಗೆ ಭೇಟಿ ನೀಡುತ್ತಿದ್ದಾರೆ ಎಂದು ಮಳಿಗೆ ನಿರ್ವಹಿಸುತ್ತಿರುವ ದರ್ಶನ್ ತಿಳಿಸಿದ್ದಾರೆ.