ನ್ಯೂಸ್

ನಿವೇಶನದ ಸುತ್ತಲೂ 8 ಅಡಿ ಎತ್ತರದ ಕಾಂಪೌಂಡ್​ ನಿರ್ಮಿಸಿ ಗಾಂಜಾ ಬೆಳೆದರು!

arunakunigal

ಚಾಮರಾಜನಗರ: ಗಾಂಜಾ ಗಿಡಗಳನ್ನು ಬೆಳೆಯುವಂತಿಲ್ಲ, ಗಾಂಜಾ ಸೊಪ್ಪು ಮಾರಾಟ ಮಾಡುವಂತಿಲ್ಲ ಎಂಬ ಕಾನೂನು ನಮ್ಮ ದೇಶದಲ್ಲಿದೆ. ಆದರೂ ಕೆಲ ಕಿಡಿಗೇಡಿಗಳು ಮನೆಯ ಹಿತ್ತಲಿನ ಹೂ ಕುಂಡ, ಗಬ್ಬಿನ ಗದ್ದೆ, ಹೊಲ, ಮನೆಯ ಮಹಡಿ, ತಿಪ್ಪೆ... ಹೀಗೆ ಹಲವೆಡೆ ಅಕ್ರಮ ದಾರಿಯಲ್ಲಿ ಗಾಂಜಾ ಬೆಳೆದು ಸಿಕ್ಕಿಬಿದ್ದಿದ್ದಾರೆ. ಇವನ್ನೂ ಮೀರಿಸುಂತಿದೆ ಈ ಮೂವರು ಖತರ್ನಾಕ್​ ವಂಚಕರ ಮಾಸ್ಟರ್ ಪ್ಲಾನ್. ಯಾರಿಗೂ ಅನುಮಾನ ಬಾರದಂತೆ ಗಾಂಜಾ ಬೆಳೆದಿದ್ದನ್ನು ಕಂಡ ರಾಮಾಪುರ ಠಾಣೆಯ ಪೊಲೀಸರೇ ಅರೆಕ್ಷಣ ದಂಗಾದರು!

ಆ ಖತರ್ನಾಕ್​ ವಂಚಕರು ಗಾಂಜಾವನ್ನು ಹೇಗೆ ಬೆಳೆದಿದ್ದರು ಗೊತ್ತಾ? ನಿವೇಶನದ ಸುತ್ತಾ 8 ಅಡಿ ಎತ್ತರದ ಕಾಂಪೌಂಡ್ ನಿರ್ಮಿಸಿ ಆ ಜಾಗದಲ್ಲಿ ಗಾಂಜಾ ಗಿಡಗಳನ್ನು ಬೆಳೆದಿದ್ದರು. ಯಾರಿಗೂ ಕಾಂಪೌಂಡ್​ ಒಳಗೆ ಏನಿದೆ ಎಂದು ಗೊತ್ತೇ ಆಗುತ್ತಿರಲಿಲ್ಲ. ಅಂದಹಾಗೆ ಈ ಅಕ್ರಮ ಬಯಲಾಗಿದ್ದು ಹನೂರು ತಾಲೂಕಿನ ರಾಮಾಪುರದ ಹೊಸಳ್ಳಿ ಗ್ರಾಮದಲ್ಲಿ.

ರಾಮಾಪುರದ ಹೊಸಳ್ಳಿ ಗ್ರಾಮದಲ್ಲಿ ಗೋವಿಂದರಾಜು, ಚಿನ್ನ ವೆಂಕಟಾಬೋವಿ ಮತ್ತು ಕುಮಾರ ಎಂಬುವವರು 13*40 ಖಾಲಿ‌ ನಿವೇಶನದಲ್ಲಿ ಸುತ್ತಲೂ 8 ಅಡಿ ಎತ್ತರದ ಗೋಡೆ ನಿರ್ಮಿಸಿದ್ದರು. ಒಳಗೆ 150 ಗಾಂಜಾ ಗಿಡಗಳನ್ನು ಬೆಳೆದಿದ್ದರು. ಪಕ್ಕದ ಜಮೀನಿನಲ್ಲೂ 78 ಗಾಂಜಾ ಗಿಡಗಳನ್ನು ಬೆಳೆಯಲಾಗಿತ್ತು.

ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿದ್ದು, ಗಾಂಜಾ ಗಿಡ ಬೆಳೆಯಲು ಆರೋಪಿಗಳ ಪ್ಲಾನ್​ ಕಂಡ ಅವರು ಶಾಕ್​ ಆದರು. 8 ಅಡಿ ಎತ್ತರ ಕಾಂಪೌಂಡ್​ಗೆ ಎಲ್ಲಿಯೂ ಬಾಗಿಲು ಇರಲಿಲ್ಲ. ಆರೋಪಿಗಳು ಎಸ್ಕೇಪ್​ ಆಗಿದ್ದು ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಅಲ್ಲಿದ್ದ ಒಟ್ಟು 154 ಕೆಜಿ ತೂಕದ 228 ಗಾಂಜಾ ಗಿಡಗಳನ್ನ‌ ಜಪ್ತಿ ಮಾಡಲಾಗಿದೆ.