Oscars Dashavatar - ಬಾಲಿವುಡ್ ಸಿನಿಮಾ "ಹೋಮ್ಬೌಂಡ್' ಅಧಿಕೃತವಾಗಿ ಭಾರತದಿಂದ 98ನೇ ಆಸ್ಕರ್ಗೆ ಆಯ್ಕೆಯಾಗಿರುವುದು ಗೊತ್ತಿದೆ. ಸದ್ಯ ಟಾಪ್ 15ರಲ್ಲಿ ಸ್ಥಾನ ಪಡೆದಿರುವ ಈ ಸಿನಿಮಾ ಆಸ್ಕರ್ ಪ್ರಶಸ್ತಿಯತ್ತ ಒಂದೊಂದೇ ಹೆಜ್ಜೆಯಿಟ್ಟಿದೆ. ಅದರ ನಡುವೆಯೇ ಮರಾಠಿ ಸಿನಿಮಾ "ದಶಾವತಾರ್' ಆಸ್ಕರ್ನಲ್ಲಿ ಸ್ವತಂತ್ರವಾಗಿ ಸ್ಪರ್ಧೆಗಿಳಿಯುವ ಮೂಲಕ, ಎಲ್ಲರ ಹುಬ್ಬೇರುವಂತೆ ಮಾಡಿದೆ. ಹೌದು, ಸುಬೋಧ್ ಖಾನೋಲ್ಕರ್ ನಿರ್ದೇಶನದ ಈ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ "ಕಂಟೆನ್ಷನ್ ಲಿಸ್ಟ್'ನಲ್ಲಿ ಸ್ಪರ್ಧೆಗಿಳಿದಿದೆ. ಈ ಹಿಂದೆ 2023ರಲ್ಲಿ "ಆರ್ಆರ್ಆರ್' ಕೂಡ ಇದೇ ರೀತಿ ಸ್ವತಂತ್ರವಾಗಿ ಸ್ಪರ್ಧಿಸಿ, "ಅತ್ಯುತ್ತಮ ಹಾಡು' ವಿಭಾಗಲ್ಲಿ ಆಸ್ಕರ್ ಮುಡಿಗೇರಿಸಿಕೊಂಡಿತ್ತು. ಇದೀಗ ಅದೇ ನಿರೀಕ್ಷೆಯೊಂದಿಗೆ "ದಶಾವತಾರ್' ತಂಡ ಕೂಡ ಆಸ್ಕರ್ ಅಂಗಳಕ್ಕೆ ಎಂಟ್ರಿ ಕೊಟ್ಟಿದೆ. ಆ ಮೂಲಕ ಆಸ್ಕರ್ ಸ್ಪರ್ಧೆಗಿಳಿದ ಮೊದಲ ಮರಾಠಿ ಸಿನಿಮಾ ಎಂಬ ದಾಖಲೆ ಬರೆದಿದೆ.
ದಶಾವತಾರ ವೇಷಗಳಲ್ಲಿ ಪ್ರದರ್ಶನ ನೀಡುವ ಬಾಬುಲಿ ಮೇಸ್ತ್ರಿಗೆ (ದಿಲೀಪ್) ವಯಸ್ಸಾದ ಕಾರಣ ದೃಷ್ಟಿ ಣಿಸುತ್ತಿರುತ್ತದೆ. ಅದರಿಂದಾಗ ಜಾನಪದ ಕಲೆಯಿಂದ ದೂರ ಸರಿಯುವಂತಾಗುತ್ತದೆ. ಮತ್ತೊಂದೆಡೆ ಆತನ ಮಗನೂ ಆಧುನಿಕ ಬದುಕಿನತ್ತ ಸೆಳೆತಕ್ಕೊಳಗಾಗಿ, ಕಲೆಯಿಂದ ದೂರ ಸಾಗುತ್ತಾನೆ. ಅದರ ನಡುವೆ ಮಹಾಶಿವರಾತ್ರಿಯ ದಿನ ಕೊನೆಯ ಪ್ರದರ್ಶನ ನೀಡಿ ಬಳಿಕ ನಿಲ್ಲಿಸುವುದಾಗಿ ಬಾಬುಲಿ ಹೇಳುತ್ತಾನೆ. ಆ ಕೊನೆಯ ಪ್ರದರ್ಶನ ಹೇಗಿರುತ್ತದೆ ಎಂಬುದರ ಸುತ್ತ "ದಶಾವತಾರ್' ಕಥೆ ಸಾಗುತ್ತದೆ. ದಿಲೀಪ್ ಪ್ರಭಾವಲ್ಕರ್, ಮಹೇಶ್ ಮಂಜ್ರೇಕರ್, ಸಿದ್ಧಾರ್ಥ್ ಮೆನನ್, ಅಭಿನಯ್ ಬೇರ್ಡೆ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಸಿನಿಮಾ 2025ರ ಸೆ. 12ರಂದು ರಿಲೀಸ್ ಆಗಿತ್ತು. ಕಮರ್ಷಿಯಲ್ ಆಗಿ ಉತ್ತಮ ಗಳಿಕೆ ಕೂಡ ಮಾಡಿಕೊಂಡಿತ್ತು. &ಏಜೆನ್ಸೀಸ್
ಹೇಗಿರಲಿದೆ ಕಂಟೆನ್ಷನ್ ಲಿಸ್ಟ್ ಆಯ್ಕೆ?
ಆಯಾ ದೇಶಗಳಿಂದ ಅಧಿಕೃತವಾಗಿ ಆಯ್ಕೆ ಮಾಡುವ ಸಿನಿಮಾಗಳನ್ನು ಹೊರತುಪಡಿಸಿ, ಚಿತ್ರತಂಡಗಳು ಅರ್ಹತೆ ಖಚಿತಪಡಿಸಿಕೊಂಡು ಸ್ವತಂತ್ರವಾಗಿ ಕೂಡ ಆಸ್ಕರ್ನಲ್ಲಿ ಸ್ಪರ್ಧಿಸಲು ಅವಕಾಶವಿದೆ. ಅಮೆರಿಕದ ಯಾವುದಾದರೂ ಒಂದು ಮಹಾನಗರದಲ್ಲಿ ಸಿನಿಮಾ ಬಿಡುಗಡೆಯಾಗಿ, ಒಂದೇ ಸ್ಕ್ರೀನ್ನಲ್ಲಿ ಸತತ ಏಳು ದಿನಗಳ ಪ್ರದರ್ಶನ ಪೂರ್ಣಗೊಳಿಸಬೇಕು. 40 ನಿಮಿಷ ಮೀರಿದ ಅಂತಹ ಚಿತ್ರಗಳು ಕಂಟೆನ್ಷನ್ ಲಿಸ್ಟ್ ಮೂಲಕ ಆಸ್ಕರ್ನಲ್ಲಿ ಸ್ಪರ್ಧಿಸಲು ಅರ್ಹತೆ ಇರುತ್ತದೆ. ಪ್ರತಿ ವರ್ಷ ವಿಶ್ವಾದ್ಯಂತ ಸುಮಾರು 2000 ಸಿನಿಮಾಗಳು ಈ ರೀತಿ ಆಸ್ಕರ್ ಬಾಗಿಲು ತಟ್ಟುತ್ತವೆ. ಆದರೆ, ಅವುಗಳಲ್ಲಿ 150ರಿಂದ 200 ಚಿತ್ರಗಳನ್ನು ಮಾತ್ರ ಆಯ್ಕೆಯಾಗುತ್ತವೆ. ಈ ಬಾರಿ "ದಶಾವತಾರ್' ಈ ಸಾಲಿನಲ್ಲಿ ಆಯ್ಕೆಯಾಗಿದೆ. ಮುಂದೆ ವೋಟಿಂಗ್ ಪ್ರಕ್ರಿಯೆಗಳ ಮೂಲಕ ಚಿತ್ರದ ಭವಿಷ್ಯ ರ್ನಿಣಯವಾಗಲಿದೆ.