ಮೈಸೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಕರ್ನಾಟಕಕ್ಕೆ ಬರುತ್ತಿದ್ದು, ಅವರು ಸಂಚರಿಸುವ ಮಾರ್ಗಗಳೆಲ್ಲ ಭದ್ರತಾ ದೃಷ್ಟಿಯಿಂದ ಬಂದ್ ಆಗಿರಲಿವೆ. ಅದಕ್ಕಾಗಿ ಸಾಂಸ್ಕೃತಿಕ ನಗರಿ ಮೈಸೂರಿನ ಸಂಚಾರ ವ್ಯವಸ್ಥೆಯಲ್ಲಿ ಭಾರಿ ಬದಲಾವಣೆಗಳನ್ನು ಮಾಡಲಾಗಿದೆ.
ಇಂದು ಪ್ರಧಾನಿ ಮೋದಿ ಮೈಸೂರಿಗೆ ಆಗಮನ ಹಿನ್ನೆಲೆಯಲ್ಲಿ ಮಧ್ಯಾಹ್ನ 3ಗೇ ಮೈಸೂರು-ನಂಜನಗೂಡು ರಸ್ತೆಯನ್ನು ಬಂದ್ ಮಾಡಲಾಗಿದ್ದು, ಅದು ರಾತ್ರಿ 10ರ ವರೆಗೂ ಬಂದ್ ಆಗಿರಲಿದೆ. ಇತ್ತ ಮೋದಿ ವಾಸ್ತವ್ಯ ಹೂಡುವ ರ್ಯಾಡಿಸನ್ ಬ್ಲೂ ಹೋಟೆಲ್ ಅಕ್ಕಪಕ್ಕದ ರಸ್ತೆಯನ್ನೂ ಬಂದ್ ಮಾಡಲಾಗಿದೆ. ಹುಣಸೂರು ಮಾರ್ಗದ ಅಟಲ್ ಬಿಹಾರಿ ವಾಜಪೇಯಿ ವೃತ್ತದಿಂದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದ ವರಗಿನ ರಸ್ತೆ ಮಾರ್ಗ ಬಂದ್ ಮಾಡಲಾಗಿದೆ.
ನಾಳೆ ಬೆಳಗ್ಗೆ 3ರಿಂದ 7ರ ವರೆಗೆ ನಂಜನಗೂರು ಏರ್ಪೋರ್ಟ್ ರಸ್ತೆ ಬಂದ್ ಇರಲಿದ್ದು, ಬೆಳಗ್ಗೆ 6ರಿಂದ ಮಧ್ಯಾಹ್ನ 1 ಗಂಟೆ ವರೆಗೆ ಹುಣಸೂರು ಮೈಸೂರು ರಸ್ತೆ ಬಂದ್ ಆಗಿರಲಿದೆ. ನಂಜನಗೂಡು ಮಾರ್ಗವಾಗಿ ಮೈಸೂರಿಗೆ ಆಗಮಿಸುವ ವಾಹನಗಳು ಕಡಕೋಳ ರಸ್ತೆಯ ಮೂಲಕ ರಿಂಗ್ ರಸ್ತೆ ತಲುಪಿ ಬಳಿಕ ರಾಮಬಾಯಿ ನಗರದ ಕಡೆಯಿಂದ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಹುಣಸೂರು ಮಾರ್ಗವಾಗಿ ಸಂಚರಿಸುವ ವಾಹನಗಳು ಅಟಲ್ ಬಿಹಾರಿ ವಾಜಪೇಯಿ ವೃತ್ತದಿಂದ ರಾಯಲ್ ಇನ್ ಜಂಕ್ಷನ್ ಮುಖಾಂತರ ಫೌಂಟೇನ್ ವೃತ್ತ ಮಾರ್ಗವಾಗಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಪ್ರವೇಶ ಕಲ್ಪಿಸಲಾಗಿದೆ. ಟಿ.ನರಸೀಪುರ ಮಾರ್ಗದ ವಾಹನಗಳು ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಎಡಕ್ಕೆ ತಿರುಗಿ ಮಾರ್ಗ ಬದಲಿಸಿ ಬಸ್ ನಿಲ್ದಾಣಕ್ಕೆ ಆಗಮಿಸಬಹುದು.