ಶಿವಮೊಗ್ಗ ರವೀಂದ್ರ ನಗರ ಗಣಪತಿ ದೇವಾಲಯದಲ್ಲಿ ಗುರುವಾರ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಸಾನ್ನಿಧ್ಯದಲ್ಲಿ ಕೊಲ್ಲೂರಿನ ವಾಸುದೇವ ಭಟ್ಟರು, ನಗರದ ಸುಬ್ರಹ್ಮಣ್ಯ ಅಡಿಗರು, ಶಿವಮೊಗ್ಗದ ಡಾ.ಪಿ.ನಾರಾಯಣ್ ಅವರಿಗೆ ಪ್ರಸನ್ನ ಗಣಪತಿ ಅನುಗ್ರಹ ಪ್ರಶಸ್ತಿ ಪ್ರದಾನ ಮಾಡಲಾಯಿತು.  
ನ್ಯೂಸ್

ಅನೇಕ ಸತ್ಕಾರ್ಯಗಳು ಸಹ ಯಜ್ಞ:ಸ್ವರ್ಣವಲ್ಲಿ ಶ್ರೀ

ಶಿವಮೊಗ್ಗ: ಯಜ್ಞದಲ್ಲಿ ಹಲವು ವಿಧಗಳಿವೆ. ಅನೇಕ ಸತ್ಕಾರ್ಯಗಳನ್ನು ಯಜ್ಞ ಎಂದೇ ಕರೆಯಲಾಗಿದೆ. ಅವುಗಳಲ್ಲಿ ದೇವರಿಗೆ ಹವಿಸ್ಸನ್ನು ಅರ್ಪಿಸುವ ಯಜ್ಞವು ವಿಶಿಷ್ಟವಾದುದು ಎಂದು ಸೋಂದಾ ಸ್ವರ್ಣವಲ್ಲಿ ಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ತಿಳಿಸಿದರು.

ರವೀಂದ್ರ ನಗರ ಪ್ರಸನ್ನ ಗಣಪತಿ (ಬಲಮುರಿ) ದೇವಸ್ಥಾನದಲ್ಲಿ ಗುರುವಾರ ಏರ್ಪಡಿಸಿದ್ದ ಶಾಕಲ ಋಕ್ಸಂಹಿತಾ ಯಾಗದ ಪೂರ್ಣಾಹುತಿಯ ಸಾನ್ನಿಧ್ಯವಹಿಸಿ, ಮೂವರು ಸಾಧಕರಿಗೆ ಪ್ರಸನ್ನ ಗಣಪತಿ ಅನುಗ್ರಹ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ವೇದಗಳು ಭಗವಂತನ ಶಬ್ದ ಸ್ವರೂಪ. ಹೀಗಾಗಿ ದೇವಾಲಯಗಳಲ್ಲಿ ವೇದಗಳ ಪಾರಾಯಣ ನಡೆಯಬೇಕು ಎಂದು ಹೇಳಿದರು.

ವೇದಗಳ ಪಾರಾಯಣದಿಂದ ದೇವತಾ ಸಾನ್ನಿಧ್ಯ ಹೆಚ್ಚುತ್ತದೆ. ದೇವರಿಗೆ ಮಂತ್ರಗಳೇ ಶರೀರದಂತೆ. ದೇವತೆಗಳು ಮಂತ್ರಗಳಿಗೆ ಅಧೀನ. ಮಂತ್ರಗಳ ಅನುಸಂಧಾನ ಆಗುವಲ್ಲಿ ದೇವರು ಬರುತ್ತಾನೆಂಬ ನಂಬಿಕೆಯಿದೆ. ಇದು ವೇದಗಳ ಪಾರಾಯಣದ ದೊಡ್ಡ ಪ್ರಯೋಜನ. ಇದೇ ಕಾರಣಕ್ಕೆ ತಿರುಪತಿ ದೇವಸ್ಥಾನದಲ್ಲಿ ವೇದ ಪಾರಾಯಣ ನಿರಂತರವಾಗಿರುತ್ತದೆ ಎಂದು ತಿಳಿಸಿದರು.

ಯಜ್ಞಗಳು ವೇದಗಳ ಮುಖ್ಯ ಭಾಗ. ಯಜ್ಞಗಳ ಅನುಷ್ಟಾನ ಮುಖ್ಯವಾದುದು. ಸ್ವತಃ ಅಗ್ನಿಹೋತ್ರ ಮಾಡಿದಾಗ ವೇದಗಳ ಪ್ರಯೋಜನ ಹೆಚ್ಚಾಗಿ ಸಿಗುತ್ತದೆ. ಯಜ್ಞಕ್ಕೂ ವೇದಕ್ಕೂ ಅವಿನಾಭಾವ ಸಂಬಂಧವಿದೆ. ಯಜ್ಞ ಮಾಡದವನಿಗೆ ಐಹಿಕ್ಯ ಬದುಕನ್ನೇ ಸರಿಯಾಗಿ ಬದಕನ್ನು ಸಾಧ್ಯವಾಗುವುದಿಲ್ಲ ಎಂದರು.

ದೇವಸ್ಥಾನದ ಪ್ರಧಾನ ಅರ್ಚಕ ಶಂಕರನಾರಾಯನ ಭಟ್, ಸುದರ್ಶನ್ ಭಟ್, ಆಡಳಿತ ಮಂಡಳಿ ಅಧ್ಯಕ್ಷ ಎಂ.ಉಮಾಶಂಕರ ಉಪಾದ್ಯ, ಎನ್.ಉಮಾಪತಿ, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಜಿಪಂ ಮಾಜಿ ಸದಸ್ಯ ಕೆ.ಈ. ಕಾಂತೇಶ್ ಮುಂತಾದವರಿದ್ದರು.

ಕೀರ್ತಿಶೇಷ ವೇ.ಬ್ರ.ಶ್ರೀ ಅ.ಪ.ರಾಮಭಟ್ಟರು 34 ವರ್ಷಗಳಿಂದ ಲೋಕಕಲ್ಯಾಣಾರ್ಥವಾಗಿ ಸಂಹಿತಾಯಾಗದ ಮುಂದುವರಿದ ಭಾಗವಾಗಿ ಗುರುವಾರ ಶಾಕಲಾ ಋಕ್ಸಂಹಿತಾಯಾಗದ ಪೂರ್ಣಾಹುತಿ ಬಳಿಕ ನಡೆದ ಧರ್ಮಸಭೆಯಲ್ಲಿ ಕೊಲ್ಲೂರಿನ ವೇ.ಬ್ರ.ಶ್ರೀ ವಾಸುದೇವ ಭಟ್ಟರು, ಹೊಸನಗರ ತಾಲೂಕು ನಗರದ ವೇ.ಬ್ರ.ಶ್ರೀ ಸುಬ್ರಹ್ಮಣ್ಯ ಅಡಿಗರು, ಶಿವಮೊಗ್ಗ ಶೃಂಗೇರಿ ಶಂಕರ ಮಠದ ಧರ್ಮದರ್ಶಿ ಡಾ. ಪಿ.ನಾರಾಯಣ್ ಅವರಿಗೆ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಪ್ರಸನ್ನ ಗಣಪತಿ ಅನುಗ್ರಹ ಪ್ರಶಸ್ತಿ ಪ್ರದಾನ ಮಾಡಿ ಆಶೀರ್ವದಿಸಿದರು.