ನವದೆಹಲಿ: ಹಣದುಬ್ಬರವನ್ನು ನಿಯಂತ್ರಿಸಲು ಹೆಣಗುತ್ತಿರುವ ಭಾರತೀಯ ರಿಸರ್ವ್ ಬ್ಯಾಂಕ್ ತಾನೇ ನಿಗದಿ ಪಡಿಸಿಕೊಂಡಿರುವ ಮಿತಿಯನ್ನು ಉಲ್ಲಘಿಸಿದೆ. ಈ ಬಗ್ಗೆ ಕೇಂದ್ರಕ್ಕೆ ಮನವರಿಕೆ ಮಾಡಿಕೊಡಲು ವರದಿ ಸಲ್ಲಿಸಬೇಕಾದ ಅನಿವಾರ್ಯತೆ ಸಿಲುಕಿದೆ. ಜತೆಗೆ, ಸವಾಲುಗಳಿಗೆ ಅನುಗುಣವಾಗಿ ಅರ್ಥವ್ಯವಸ್ಥೆಯನ್ನು ಸಜ್ಜುಗೊಳಿಸುವ ಕೆಲಸಕ್ಕೆ ಮುಂದಾಗಿದ್ದು, ಇದಕ್ಕೆ ಪೂರಕವಾಗಿ 5 ವಾರಗಳ ಅವಧಿಯಲ್ಲಿ ಎರಡನೇ ಬಾರಿ ಪಾಲಿಸಿ ದರವನ್ನು 50 ಮೂಲಾಂಶ (0.50%) ಏರಿಕೆ ಮಾಡಿದೆ. ಇದರ ನೇರ ಪರಿಣಾಮ ಗೃಹ, ವಾಹನ ಮತ್ತಿತರ ಸಾಲಗಾರರ ಮೇಲೆ ಆಗಲಿದ್ದು, ಮಾಸಿಕ ಕಂತುಗಳು ಏರಿಕೆ ಆಗಲಿವೆ.
ಆರ್ಬಿಐನ ಆರು ಸದಸ್ಯರ ಮೂರು ದಿನಗಳ ಮಾನೆಟರಿ ಪಾಲಿಸಿ ಕಮಿಟಿ (ಎಂಪಿಸಿ) ಸಭೆ ಬುಧವಾರ ಕೊನೆಗೊಂಡಿದೆ. ಇದಾದ ಬಳಿಕ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಸುದ್ದಿಗೋಷ್ಠಿಯಲ್ಲಿ ಆರ್ಬಿಐ ನಿಲುವನ್ನು ಪ್ರಕಟಿಸಿದರು. ಹಣದುಬ್ಬರ ಪರಿಸ್ಥಿತಿಯಲ್ಲಿ ಆರ್ಥಿಕತೆಯನ್ನು ಸರಿದೂಗಿಸುವುದಕ್ಕಾಗಿ ಪಾಲಿಸಿ ದರ ಏರಿಸುವ ಪ್ರಸ್ತಾವನೆಯನ್ನು ಎಂಪಿಸಿ ಸದಸ್ಯರು ಒಮ್ಮತದಿಂದ ಅಂಗೀಕರಿಸಿದ್ದಾರೆ. ಇದೂ ಸೇರಿದಂತೆ ಎಂಪಿಸಿ ಸಭೆಯ ಆರು ಮುಖ್ಯಾಂಶಗಳು ಹೀಗಿವೆ.
- ರೆಪೋ ದರ ಹೆಚ್ಚಳ: ರೆಪೋ ದರವನ್ನು 50 ಮೂಲಾಂಶ (ಶೇಕಡ 0.5) ಏರಿಸಲಾಗಿದೆ. ಇದು ತತ್ಕ್ಷಣದಿಂದಲೇ ಜಾರಿಗೆ ಬಂದಿದ್ದು, ಸದ್ಯ ರೆಪೋ ದರ ಶೇಕಡ 4.9 ಆಗಿದೆ. ಇದರೊಂದಿಗೆ ಹಣದುಬ್ಬರ ಪ್ರಮಾಣವನ್ನು ಶೇಕಡ 6ರ ಚೌಕಟ್ಟಿನೊಳಗೆ ತರಲು ಗುರಿ ಹಾಕಿಕೊಂಡಿರುವುದಾಗಿ ಆರ್ಬಿಐ ಹೇಳಿದೆ.
- ಜಿಡಿಪಿ ಬೆಳವಣಿಗೆ ಸ್ಥಿರ: ಪ್ರಸಕ್ತ ಹಣಕಾಸು ವರ್ಷದ ಜಿಡಿಪಿ ಬೆಳವಣಿಗೆ ಮುನ್ನೋಟ ಶೇ.7.2ರಲ್ಲಿ ಸ್ಥಿರವಾಗಿದೆ. ಮೊದಲ ತ್ರೖೆಮಾಸಿಕದಲ್ಲಿ ಜಿಡಿಪಿ ಶೇಕಡ 16.2, ಎರಡನೇ ತ್ರೖೆಮಾಸಿಕದಲ್ಲಿ ಶೇ.6.2, ಮೂರನೇ ತ್ರೖೆಮಾಸಿಕದಲ್ಲಿ ಶೇ.4.1, ನಾಲ್ಕನೇ ತ್ರೖೆಮಾಸಿಕದಲ್ಲಿ ಶೇ.4.0 ಜಿಡಿಪಿ ಮುನ್ನೋಟವನ್ನು ಆರ್ಬಿಐ ಪ್ರಕಟಿಸಿದೆ.
- ಬದಲಾಗದ ಹಣದುಬ್ಬರದ ಹೊರೆ: ಪ್ರಸಕ್ತ ಹಣಕಾಸು ವರ್ಷ ಹಣದುಬ್ಬರದ ಮುನ್ನೋಟವನ್ನು ಈಗಿರುವ ಶೇಕಡ 5.7ರಿಂದ ಶೇಕಡ 6.7 ಕ್ಕೆ ಪರಿಷ್ಕರಿಸಲಾಗಿದೆ. ಮೊದಲ ತ್ರೖೆಮಾಸಿಕದಲ್ಲಿ ಶೇ.7.5, ಎರಡನೇ ತ್ರೖೆಮಾಸಿಕದಲ್ಲಿ ಶೇ.7.4, ಮೂರನೇ ತ್ರೖೆಮಾಸಿಕದಲ್ಲಿ ಶೇ. 6.2, ನಾಲ್ಕನೇ ತ್ರೖೆಮಾಸಿಕದಲ್ಲಿ ಶೇ.5.8 ಹಣದುಬ್ಬರ ಮುನ್ನೋಟವನ್ನು ಆರ್ಬಿಐ ಪ್ರಕಟಿಸಿದೆ. ಹಣದುಬ್ಬರದ ಗರಿಷ್ಠ ತಾಳುವಿಕೆಯ ಮಿತಿಯನ್ನು ಪ್ರಸಕ್ತ ಹಣಕಾಸು ವರ್ಷದ ಮೂರು ತ್ರೖೆಮಾಸಿಕದಲ್ಲಿ ಶೇಕಡ 6ಕ್ಕೆ ನಿಗದಿ ಮಾಡಲಾಗಿದೆ. ಹಣದುಬ್ಬರಕ್ಕೆ ಶೇ.75 ಕೊಡುಗೆ ಆಹಾರ ವಲಯದ್ದೇ ಇದೆ.
- ರಿಕರಿಂಗ್ ಪಾವತಿ ಮಿತಿ ಹೆಚ್ಚಳ: ಪ್ರಸ್ತುತ 5,000 ರೂ. ಇರುವ ರಿಕರಿಂಗ್ ಪಾವತಿ ಮೊತ್ತವನ್ನು 15,000 ರೂ.ಗೆ ಆರ್ಬಿಐ ಹೆಚ್ಚಿಸಿದೆ. ಚಂದಾದಾರಿಕೆ, ವಿಮೆ ಪ್ರೀಮಿಯಂ, ಶಿಕ್ಷಣ ಶುಲ್ಕ ಮುಂತಾದವುಗಳಿಗೆ ಪಾವತಿಸುವುದಕ್ಕೆ ಅನುಕೂಲ ವಾಗುವಂತೆ ರಿಕರಿಂಗ್ ಪಾವತಿ ಮೊತ್ತದ ಮಿತಿಯನ್ನು ಆರ್ಬಿಐ ಹೆಚ್ಚಿಸಿದೆ.
- ಯುಪಿಐಗೆ ಕ್ರೆಡಿಟ್ ಕಾರ್ಡ್ ಜೋಡಣೆ: ಯುಪಿಐ ಪ್ಲಾಟ್ಫಾಮರ್್ಗಳಿಗೆ ಕ್ರೆಡಿಟ್ ಕಾರ್ಡ್ ಲಿಂಕ್ ಮಾಡುವ ಪ್ರಸ್ತಾವನೆಯನ್ನು ಆರ್ಬಿಐ ಅಂಗೀಕರಿಸಿದೆ. ಇದರ ಅನುಷ್ಠಾನ ರುಪೇ ಕ್ರೆಡಿಟ್ ಕಾರ್ಡ್ ಮೂಲಕ ಆರಂಭವಾಗಲಿದೆ ಎಂದು ಆರ್ಬಿಐ ಹೇಳಿದೆ.
- ಹೌಸಿಂಗ್ ಲೋನ್ ಮಿತಿ ದುಪ್ಪಟ್ಟು: ಸಹಕಾರಿ ಬ್ಯಾಂಕ್ ಮತ್ತು ಗ್ರಾಮೀಣ ಸಹಕಾರಿ ಬ್ಯಾಂಕುಗಳಲ್ಲಿ ಹೌಸಿಂಗ್ ಲೋನ್ ಮಿತಿ ಯನ್ನು ದುಪ್ಪಟ್ಟುಗೊಳಿಸುವ ಪ್ರಸ್ತಾವನೆಯನ್ನೂ ಆರ್ಬಿಐ ಸಮಿತಿ ಅಂಗೀಕರಿಸಿದೆ. ಈ ಪ್ರಸ್ತಾವನೆಯು ಕೈಗೆಟಕುವ ದರದಲ್ಲಿ ವಸತಿ ಹೊಂದುವುದಕ್ಕೆ ಮತ್ತು ಒಳಗೊಂಡ ಬೆಳವಣಿಗೆಗೆ ಪೂರಕವಾಗಿದೆ. ನಗರ ಸಹಕಾರಿ ಬ್ಯಾಂಕುಗಳು ಮನೆಬಾಗಿಲಿಗೆ ಸೇವೆ ತಲುಪಿಸುವ ಉಪಕ್ರಮದ ಪ್ರಸ್ತಾವನೆಗೂ ಆರ್ಬಿಐ ಸಮಿತಿ ಒಪ್ಪಿಗೆ ನೀಡಿದೆ.
ಇಎಂಐ ತಗ್ಗಿಸಲು ದಾರಿಗಳು
- ಹಾಲಿ ಸಾಲಗಾರರು ಬಾಕಿ ಸಾಲವನ್ನು ಕಡಿಮೆ ಬಡ್ಡಿದರದ ಸಾಲ ನೀಡುವ ಬ್ಯಾಂಕ್ಗೆ ವರ್ಗಾವಣೆ (ಬ್ಯಾಲೆನ್ಸ್ ಟ್ರಾನ್ಸ್ಫರ್) ಮಾಡುವ ಆಯ್ಕೆಯನ್ನು ಪರಿಗಣಿಸಬಹುದು. ಸಾಲದ ಮೊತ್ತ ದೊಡ್ಡದಿದ್ದರೆ ಈ ಆಯ್ಕೆ ಉತ್ತಮ.
- ಭಾಗಶಃ ಅಥವಾ ಪೂರ್ತಿ ಸಾಲ ತೀರಿಸುವ ಆಯ್ಕೆ ಇನ್ನೊಂದು. ಈ ಮೂಲಕ ಸಾಲದ ಹೊರೆಯನ್ನು ತಗ್ಗಿಸಬಹುದು. ಹೆಚ್ಚುವರಿ ಹಣ ಇರುವಂಥವರು ಈ ಆಯ್ಕೆಯನ್ನು ಪರಿಗಣಿಸಬಹುದು. ಇದರಿಂದ ಕ್ರೆಡಿಟ್ ಸ್ಕೋರ್ ಮೇಲೆ ಏನೂ ವ್ಯತಿರಿಕ್ತ ಪರಿಣಾಮವಾಗದು.
- ಹೊಸದಾಗಿ ಸಾಲಕ್ಕೆ ಅರ್ಜಿ ಸಲ್ಲಿಸುವವರು ಹೆಚ್ಚಿನ ಡೌನ್ಪೇಮೆಂಟ್ ಪಾವತಿಸಿದರೆ ಇಎಂಐ ಹೊರೆ ತಗ್ಗಿಸಬಹುದು ಅಥವಾ ದೀರ್ಘಾವಧಿ ಮಾಸಿಕ ಕಂತುಗಳನ್ನು ಆಯ್ಕೆ ಮಾಡಿಕೊಂಡರೆ ಆಗಲೂ ಇಎಂಐ ಹೊರೆ ತಗ್ಗಿಸಬಹುದು.
- ಬ್ಯಾಂಕ್ ಜತೆಗೆ ಬಲವಾದ ವ್ಯವಹಾರಿಕ ಸಂಬಂಧ ಹೊಂದಿರುವಂಥವರು ಸಾಲದ ಬಡ್ಡಿದರ ಸಂಬಂಧಿಸಿ ನೆಗೋಷಿಯೇಟ್ ಮಾಡಬಹುದು. ಅಥವಾ ಆದ್ಯತೆ ಮೇರೆಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಒದಗಿಸುವ ಇತರೆ ಬ್ಯಾಂಕುಗಳನ್ನು ಸಂರ್ಪಸಬಹುದು.
ಇಎಂಐ ಮೇಲೇನು ಪರಿಣಾಮ?
- ರೆಪೋ ದರ ಈ ವರ್ಷ ಫೆಬ್ರವರಿ 10ರ ತನಕ ಶೇಕಡ 4ರ ಸ್ಥಿರವಾಗಿತ್ತು. ಇದಾಗಿ, ಆರ್ಬಿಐನ ಏಪ್ರಿಲ್ 8ರ ಎಂಪಿಸಿ ಸಭೆ ಬಳಿಕವೂ ಮುಂದುವರಿದಿತ್ತು. ಮೇ 4ರಂದು ತುರ್ತು ಎಂಪಿಸಿ ಸಭೆಯಲ್ಲಿ 40 ಮೂಲಾಂಶ ರೆಪೋ ದರ ಹೆಚ್ಚಿಸುವ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಹೀಗಾಗಿ, ರೆಪೋದರ ಶೇಕಡ 4.40ಕ್ಕೇರಿತು. ಬುಧವಾರದ ಸಭೆಯ ಬಳಿಕ 50 ಮೂಲಾಂಶ ಏರಿಸಿದ್ದರಿಂದ ರೆಪೋದರ ಶೇ.4.90ಕ್ಕೇರಿದೆ. ಇದರೊಂದಿಗೆ ಈ ಹಣಕಾಸು ವರ್ಷದಲ್ಲಿ ಮೊದಲ ಎರಡು ತಿಂಗಳಲ್ಲೇ ರೆಪೋ ದರ ಶೇ.0.9 ಏರಿದಂತಾಗಿದೆ. ಸಾಲದ ಕಂತುಗಳ ಮೇಲೆ ಇದರ ಪರಿಣಾಮವನ್ನು ಈ ಉದಾಹರಣೆ ಮೂಲಕ ಗಮನಿಸಬಹುದು.
- ಎಸ್ಬಿಐನಿಂದ 30 ವರ್ಷಗಳ ಅವಧಿಗೆ ನೀವು ತೆಗೆದುಕೊಂಡಿರುವ ಹೋಮ್ ಲೋನ್ 20 ಲಕ್ಷ ರೂಪಾಯಿ ಬಾಕಿ ಇದೆ ಎಂದಿಟ್ಟುಕೊಳ್ಳಿ. ಪ್ರಸಕ್ತ ಬಡ್ಡಿದರ ಶೇಕಡ 7.1. ಬದಲಾದ ಸನ್ನಿವೇಶದಲ್ಲಿ ಬಡ್ಡಿದರ ಶೇಕಡ 8 ಆಗಲಿದೆ. ಇಎಂಐ ಈಗ ಇರುವ 13,441 ರೂಪಾಯಿಯಿಂದ 14,675 ರೂಪಾಯಿ ಆಗಲಿದೆ. (1,234 ರೂ. ಹೆಚ್ಚಳ)
- ಇದೇ ರೀತಿ, ಎಸ್ಬಿಐನಿಂದ ನೀವು 20 ವರ್ಷದ ಅವಧಿಗೆ ತೆಗೆದುಕೊಂಡ ಕಾರ್ಲೋನ್ 10 ಲಕ್ಷ ರೂಪಾಯಿ ಇದೆ. ಬಡ್ಡಿದರ ಶೇಕಡ 7.45 ಇದೆ. ಈಗ ಬಡ್ಡಿದರ ಶೇಕಡ 8.35 ಆಗಲಿದ್ದು, ಇಎಂಐ 8,025 ರೂಪಾಯಿಯಿಂದ 8,584 ರೂಪಾಯಿ ಆಗಲಿದೆ. (559 ರೂ. ಏರಿಕೆ)
- ಅಂತೆಯೇ, ಎಸ್ಬಿಐನಿಂದ ಪರ್ಸನಲ್ ಲೋನ್ 10 ಲಕ್ಷ ರೂಪಾಯಿಯನ್ನು 10 ವರ್ಷದ ಅವಧಿಗೆ ತೆಗೆದುಕೊಂಡಿದ್ದು, ಬಡ್ಡಿದರ ಶೇಕಡ 7.05 ಇದ್ದಾಗ ಇಎಂಐ 11,637 ರೂಪಾಯಿ ಇತ್ತು. ಈಗ ಬಡ್ಡಿದರ ಶೇಕಡ 7.95 ಆಗಲಿದ್ದು, ಇಎಂಐ 12,106 ರೂ.ಗೆ ಏರಲಿದೆ. (469 ರೂಪಾಯಿ ಹೆಚ್ಚಳ).