ನ್ಯೂಸ್

ನಗರದ ಹಲವು ಪ್ರದೇಶಗಳು ಸುರಕ್ಷಿತವಲ್ಲವೆಂದು ಟೆಕ್ಕಿ: ಪತ್ನಿಗೆ ಉಂಟಾದ ಕಿರುಕುಳದ ಕುರಿತಂತೆ ಎಕ್ಸ್ ಹಂಚಿಕೊಂಡ

ಬೆಂಗಳೂರು: ನಗರದ ಹಲವು ಪ್ರದೇಶಗಳು ಸುರಕ್ಷಿತವಲ್ಲವೆಂದು ಭಾಸವಾಗುತ್ತಿದೆಯೆಂದು ವ್ಯಕ್ತಿಯೊಬ್ಬರು ತಮ್ಮ ಎಕ್ಸೃ್ ಖಾತೆ ಮೂಲಕ ತನ್ನ ಪತ್ನಿಗೆ ಉಂಟಾದ ಕಿರುಕುಳದ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡು ಪೊಲೀಸ್ ಇಲಾಖೆಗೆ ಟ್ಯಾಗ್ ಮಾಡಿದ್ದಾರೆ.


ಟೆಕ್ಕಿಯಾಗಿರುವ ಸೃಜನ್ ಶೆಟ್ಟಿ ಎಂಬುವವರು ಎಕ್ಸ್‌ನಲ್ಲಿ ಅಪ್‌ಡೇಟ್ ಮಾಡಿರುವ ವಿಡಿಯೋದಲ್ಲಿ ಕಳೆದ ನ.೯ರಂದು ತಮ್ಮ ಪತ್ನಿ ಕೆಲಸ ಮುಗಿಸಿ ಕ್ಯಾಬ್ಗೆ ಕಾಯುತ್ತಿದ್ದರು. ಅದು ಬರಲು ತಡವಾದ ಕಾರಣ ಇಬ್ಬರೂ ಮಹಿಳಾ ಸಹೋದ್ಯೋಗಿ ಹಾಗೂ ಒಬ್ಬ ಪುರುಷರೊಂದಿಗೆ ಅವರ ಕಾರಿನಲ್ಲಿ ಹೊರಟಿದ್ದರು. ಸರ್ಜಾಪುರದ ಬಳಿ ರಾತ್ರಿ ೧೦ ಗಂಟೆ ಸುಮಾರಿನಲ್ಲಿ ಟೆಂಫೋಚಾಲಕರು ಪತ್ನಿ ಇದ್ದ ಕಾರಿಗೆ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದು ಅಪಘಾತವಾಗಿದೆಯೆಂದು ನಾಟಕವಾಡಿದ್ದಾರೆ.


ನಂತರ ಕಾರಿನಲ್ಲಿದ್ದವರನ್ನು ಕೆಳಗಿಳಿಯುವಂತೆ ಬೆದರಿಸಿದ್ದಾರೆ. ಆದರೆ ನನ್ನ ಪತ್ನಿ ಧೈರ್ಯ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ವೇಗವಾಗಿ ಕಾರನ್ನು ಚಲಾಯಿಸಿ ಆ ಪುಂಡರ ಗುಂಪಿನಿಂದ ತಪ್ಪಿಸಿಕೊಂಡು ಬಂದಿದ್ದಾರೆ. ಈ ಘಟನೆ ನಡೆಯುತ್ತಿದ್ದರೂ ಈ ರಸ್ತೆಯಲ್ಲಿ ಹೋಗುತ್ತಿದ್ದ ಯಾರೊಬ್ಬರೂ ಸಹಾಯಕ್ಕೆ ಬರಲಿಲ್ಲ. ಸಮಯಪ್ರಜ್ಞೆಯಿಂದ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಪೊಲೀಸರು ೧೫ ನಿಮಿಷದಲ್ಲಿ ಸ್ಥಳಕ್ಕೆ ಆಗಮಿಸಿದ್ದಾರೆ. ಆದರೆ ಅಲ್ಲೇ ಇದ್ದಿದ್ದರೆ ಅವರ ಪರಿಸ್ಥಿತಿಯೇನಾಗುತ್ತಿತ್ತೋ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.


ಈ ಭಾಗದಲ್ಲಿ ಹಲವಾರು ಐಟಿ ಕಂಪನಿಗಳಿದ್ದು, ಸಾವಿರಾರು ಮಂದಿ ಈ ಮಾರ್ಗವಾಗಿ ಸಂಚರಿಸುತ್ತಾರೆ. ಆದರೆ ಇಂತಹ ಘಟನೆಗಳು ಭೀತಿಯನ್ನು ಉಂಟು ಮಾಡುತ್ತದೆ. ಶಾಂತಿಪ್ರಿಯ ಬೆಂಗಳೂರು ಸುರಕ್ಷಿತವೇ ಎಂಬ ಭಾವನೆ ಮೂಡುತ್ತದೆಯೆಂದು ಹೇಳಿಕೊಂಡಿದ್ದಾರೆ. ಇದನ್ನು ಭದ್ರತಾ ಲೋಪವೆಂದು ಹೇಳಲು ಸಾಧ್ಯವಿಲ್ಲ, ಆದರೆ ಪೊಲೀಸರು ಇಂತಹ ಘಟನೆಗಳನ್ನು ತಡೆಯಲು ಕ್ರಮ ಕೈಗೊಳ್ಳಬೇಕು. ವಿಡಿಯೋದಲ್ಲಿರುವ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.


ಟ್ವಿಟ್‌ಗೆ ಪ್ರತಿಕ್ರಿಯಿಸಿರುವ ನಗರ ಪೊಲೀಸರು ಘಟನೆ ನಡೆದ ನಿರ್ದಿಷ್ಟ ಸ್ಥಳ ಮತ್ತು ತಮ್ಮ ವಿವರಗಳನ್ನು ನೀಡುವಂತೆ ಡಿಎಂನಲ್ಲಿ ಕಳಿಸುವಂತೆ ತಿಳಿಸಿದ್ದಾರೆ. ಸೃಜನ್ ಶೆಟ್ಟಿ ಅವರು, ಘಟನೆಯು ನಿರ್ದಿಷ್ಟವಾಗಿ ಯಾವ ಸ್ಥಳದಲ್ಲಿ ನಡೆದಿದೆ ಎಂದು ತಿಳಿಸಿಲ್ಲ. ಹೀಗಾಗಿ ಅವರು ಸಂಪರ್ಕಿಸಲು ಪ್ರಯತ್ನ ಮಾಡಲಾಯಿತು. ಆದರೆ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ಸರ್ಜಾಪುರ ಠಾಣೆ ಪೊಲೀಸರು ತಿಳಿಸಿದ್ದಾರೆ.