ನ್ಯೂಸ್

ಎತ್ತು ಏರಿಗೆ-ಕೋಣ ನೀರಿಗೆ ಎಂಬ ಸ್ಥಿತಿಯಲ್ಲಿ ಕಾಂಗ್ರೆಸ್!: ಕೆಪಿಸಿಸಿ ಕರೆದ ಸಭೆಗೆ ಸಿದ್ದು ಆಪ್ತರ ನಿರಾಸಕ್ತಿ..

ಬೆಂಗಳೂರು: ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿರುವ ಕಾಂಗ್ರೆಸ್ ಸಾಕಷ್ಟು ಪೂರ್ವಭಾವಿಯಾಗಿ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸುವ ತರಾತುರಿಯಲ್ಲಿದೆ. ಈ ನಡುವೆಯೇ ಪಕ್ಷದಲ್ಲಿ ಒಂದಷ್ಟು ವ್ಯತ್ಯಾಸ ಕಾಣಿಸಿದೆ. ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿರುವ ಆಕಾಂಕ್ಷಿಗಳೆಲ್ಲರೂ ನಿಗದಿತ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಬೇಕೆಂದು ಪಕ್ಷ ಸೂಚಿಸಿತ್ತು. ಆ ಪ್ರಕಾರ 1300ಕ್ಕೂ ಅಧಿಕ ಮಂದಿ ಅರ್ಜಿ ಸಲ್ಲಿಸಿದ್ದರು. ಈ ರೀತಿ ಅರ್ಜಿ ಸಲ್ಲಿಸಿದವರ ಪೈಕಿ 224 ಮಂದಿಗೆ ಮಾತ್ರ ಟಿಕೆಟ್ ಕೊಡಲು ಅವಕಾಶ ಸಿಗುವ ಕಾರಣ ಉಳಿದವರನ್ನು ಸಕ್ರಿಯರಾಗಿ ತೊಡಗಿಸಲು ಹಾಗೂ ಬಂಡಾಯ ಉಂಟಾಗದಂತೆ ನೋಡಿಕೊಳ್ಳಲು ಕೆಪಿಸಿಸಿ ಭಾನುವಾರ ಆಲ್​ಲೈನ್ ಮೂಲಕ ಸಭೆ ಕರೆದಿತ್ತು. ಈ ಸಭೆಗೆ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಷ್ಟಾಗಿ ಆಸಕ್ತಿ ತೋರಿಸಲಿಲ್ಲ ಎನ್ನಲಾಗಿದೆ. ಜತೆಗೆ ಅವರ ಆಪ್ತ ಶಾಸಕರು ಹಾಗೂ ಟಿಕೆಟ್ ಆಕಾಂಕ್ಷಿಗಳು ಸಭೆಯಿಂದ ದೂರ ಉಳಿದಿದ್ದರು ಎಂದು ಮೂಲಗಳು ತಿಳಿಸಿವೆ.

1300 ಟಿಕೆಟ್ ಆಕಾಂಕ್ಷಿಗಳ ಪೈಕಿ 910 ಮಂದಿ ಪಾಲ್ಗೊಂಡಿದ್ದು ಒಂದಂಶವಾದರೆ ಕೆಲವು ಹಾಲಿ ಶಾಸಕರು ತಮ್ಮೊಂದಿಗೆ ಆಕಾಂಕ್ಷಿಗಳನ್ನೂ ಸಭೆಗೆ ಕರೆದಿದ್ದರ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಈ ರೀತಿಯ ಸಭೆಯಿಂದ ಚುನಾವಣೆ ಮೇಲೆ ಪರಿಣಾಮ ಬೀರಲಿದೆ, ಜಾತಿ ಲೆಕ್ಕಾಚಾರದಲ್ಲಿ ಮತಗಳು ಕೈ ತಪ್ಪಬಹುದೆಂಬ ಅಭಿಪ್ರಾಯ ವ್ಯಕ್ತವಾಗಿದೆ.

ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಕೂಡ ಸಭೆಯಿಂದ ದೂರ ಉಳಿದಿದ್ದರು. ಇನ್ನು ಸಭೆ ಆರಂಭದಲ್ಲಿಯೇ ಸಿದ್ದರಾಮಯ್ಯ, ತಾವು ಬೇರೆ ಸಭೆಗೆ ಹೋಗುವುದಿದೆ ಎಂದು ಹಠಕ್ಕೆ ಬಿದ್ದು ಎರಡು ನಿಮಿಷ ಮಾತನಾಡಿ ಹೊರಟಿದ್ದಾರೆ. ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮತದಾರರ ಪಟ್ಟಿ ಬಗ್ಗೆ ಜಾಗೃತಿ ವಹಿಸುವುದು, ಬಿಎಲ್​ಒಗಳ ಕುರಿತು ಸಭೆಯಲ್ಲಿ ಹೆಚ್ಚು ಮಾತನಾಡಿದ್ದಾರೆ.

ಇನ್ನು ಮೂರು ದಿನಗಳ ಹಿಂದೆ ವರ್ತರಿನಲ್ಲಿ ಆಯೋಜನೆಗೊಂಡು ಕೊನೆಯಲ್ಲಿ ರದ್ದಾಗಿದ್ದ ಸಭೆಯ ಔಚಿತ್ಯದ ಬಗ್ಗೆ ಕೆಲವು ಶಾಸಕರು ಆಕ್ಷೇಪ ಎತ್ತಿದ್ದರು. ಈ ರೀತಿಯ ಸಭೆಯಿಂದ ವೈಯಕ್ತಿಕವಾಗಿ ಆಗುವ ನಷ್ಟದ ಬಗ್ಗೆ ಬೇಸರ ತೋಡಿಕೊಂಡಿದ್ದರು.

ಟಿಕೆಟ್ ನಿರ್ಧಾರ ಪಕ್ಷದ್ದು: ಒಬ್ಬರಿಗೆ ಒಂದೇ ಟಿಕೆಟ್ ಎಂದು ಡಿ.ಕೆ.ಶಿವಕುಮಾರ್ ಕಳೆದ ವಾರ ನೀಡಿದ್ದ ಹೇಳಿಕೆಯು ಸಿದ್ದರಾಮಯ್ಯ ಆಪ್ತರನ್ನು ಕೆರಳಿಸಿದೆ. ಈ ಬೆಳವಣಿಗೆಗೆ ಪೂರಕವಾಗಿ ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ಪ್ರತಿಕ್ರಿಯೆ ನೀಡಿದ್ದು, ಟಿಕೆಟ್ ಎಷ್ಟು ಜನಕ್ಕೆ ಕೊಡಬೇಕು ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ. ಎಐಸಿಸಿ ಅಧ್ಯಕ್ಷರ ನೇತೃತ್ವದಲ್ಲಿ ಕೇಂದ್ರ ಚುನಾವಣಾ ಸಮಿತಿ ನಿರ್ಧಾರ ಮಾಡುತ್ತದೆ ಎಂದಿದ್ದಾರೆ. ಯಾರಿಗೆ ಯಾವ ಕ್ಷೇತ್ರದಲ್ಲಿ ಟಿಕೆಟ್ ಕೊಡಬೇಕು? ಒಬ್ಬರಿಗೆ ಎಷ್ಟು ಟಿಕೆಟ್ ಕೊಡಬೇಕು? ಎಂಬುದನ್ನು ಪಕ್ಷ ನಿರ್ಧರಿಸುತ್ತದೆ ಎಂದ ಅವರು ಕಾಂಗ್ರೆಸ್​ನಲ್ಲಿ ಮೊದಲಿಂದಲೂ ಈ ಸಂಪ್ರದಾಯವಿದೆ ಎಂದು ಹೇಳಿದ್ದಾರೆ.

ಕೈ ಪಾಳಯದಲ್ಲಿ ಸಿಎಂ ಗಾದಿ ಜಟಾಪಟಿ: ಬೆಂಗಳೂರು: ವಿಧಾನಸಭೆ ಚುನಾವಣೆಗೆ ನಿಧಾನವಾಗಿ ಕಾವು ಏರುತ್ತಿರುವಾಗಲೇ ಕಾಂಗ್ರೆಸ್​ನಲ್ಲಿ ಭಾವಿ ಮುಖ್ಯಮಂತ್ರಿ ಗಾದಿ ವಿಚಾರದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಪೈಪೋಟಿಗೆ ಇಳಿದಂತಿದೆ. ಇಬ್ಬರೂ ನಾಯಕರು ಭಾನುವಾರ ತಮ್ಮ ಸಮುದಾಯಗಳ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಸಿಎಂ ಹುದ್ದೆಗೇರಲು ಜನಾಂಗದ ಆಶೀರ್ವಾದ ಕೋರಿದರು. ಇದು ಕಾಂಗ್ರೆಸ್​ನಲ್ಲಿ ಚುನಾವಣೆಗೆ ಮುನ್ನವೇ ಕೂಸು ಹುಟ್ಟುವ ಮುನ್ನ ಕುಲಾವಿ ಹೊಲಿಸಿದಂತಾಗಿದೆ.

ಒಕ್ಕಲಿಗರ ಸಂಘ ಆಯೋಜಿಸಿದ್ದ ಮೀಸಲಾತಿ ಚರ್ಚೆಯ ಪೂರ್ವಭಾವಿ ಸಭೆಯಲ್ಲಿ ಡಿ.ಕೆ.ಶಿವಕುಮಾರ್ ಮಾತನಾಡಿ, ಒಕ್ಕಲಿಗ ಸಮುದಾಯದವರು ಮತ್ತೊಮ್ಮೆ ಸಿಎಂ ಆಗಲು ಅವಕಾಶ ಬಂದಿದೆ. ಪೆನ್, ಪೇಪರ್ ನೀಡಿದರೆ ಮೀಸಲು ಸಹಿತ ಇತರ ಸೌಲಭ್ಯವನ್ನು ಅನುಷ್ಠಾನಕ್ಕೆ ತರಲು ಸಿದ್ಧ. ಈ ಅವಕಾಶವನ್ನು ಸಮುದಾಯವು ಸದ್ಬಳಕೆ ಮಾಡಿಕೊಳ್ಳಲು ನನ್ನನ್ನು ಆ ಗಾದಿಗೆ ಏರಿಸಲು ಒಟ್ಟಾಗಿ ಶ್ರಮಿಸಬೇಕು ಎಂದು ಪರೋಕ್ಷವಾಗಿ ಕರೆ ನೀಡಿದರು.

ನನಗೆ ಸಾಮರ್ಥ್ಯ ಇದೆಯೇ, ಇಲ್ಲವೆ ಎಂಬುದನ್ನು ನೋಡಿ ಬೆಂಬಲಿಸಿ. ಹಿಂದೆ ಸಿಎಂ ಆಗಿದ್ದಾಗ ಜಾತ್ಯತೀತವಾಗಿ ನಡೆದುಕೊಂಡಿದ್ದೇನೆ. ಕಳೆದ ಬಾರಿ ನಾನು ಧರ್ಮ ವಿರೋಧಿ ಎಂದು ಅಪಪ್ರಚಾರ ಮಾಡಿದ್ದರು. ಈ ಬಾರಿ ಹಾಗಾಗಬಾರದು. | ಸಿದ್ದರಾಮಯ್ಯ ಮಾಜಿ ಸಿಎಂ ಎಸ್.ಎಂ.ಕೃಷ್ಣ ನಂತರ ಸಿಎಂ ಹುದ್ದೆಗೇರುವ ಅವಕಾಶ ಒಕ್ಕಲಿಗರಿಗೆ ಲಭಿಸಿದೆ. ಈ ಅವಕಾಶವನ್ನು ಜನಾಂಗದವರು ಸದ್ಬಳಕೆ ಮಾಡಿಕೊಳ್ಳಬೇಕು. ನನ್ನ ಕೈಗೆ ಪೆನ್ನು, ಪೇಪರ್ ನೀಡಿ, ಈ ಸಮಾಜಕ್ಕೆ ಮೀಸಲಾತಿ ಜತೆಗೆ ಇತರ ಸೌಲಭ್ಯ ಕೊಡಿಸಲು ಸಿದ್ಧ. | ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ

ಸಿದ್ದುರಿಂದಲೂ ಹೇಳಿಕೆ: ಇನ್ನು ಹೆಬ್ಬಾಳದಲ್ಲಿ ಆಯೋಜನೆಯಾಗಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಿದ್ದರಾಮಯ್ಯ, ಎರಡನೇ ಬಾರಿಗೆ ಸಿಎಂ ಆಗುವ ಇಂಗಿತ ವ್ಯಕ್ತಪಡಿಸಿದರು. ಇದನ್ನು ಸ್ಥಳೀಯ ಶಾಸಕ ಭೈರತಿ ಸುರೇಶ್ ಬಹಿರಂಗವಾಗಿ ಹೇಳಿದ ಬಳಿಕ ಸಭೆಯಲ್ಲಿ ಸಿದ್ದರಾಮಯ್ಯ ಪರ ಘೋಷಣೆ ಮೊಳಗಿದವು. ಇದೇ ವೇಳೆ ಕೆಲ ಕಾರ್ಯಕರ್ತರು ಡಿಕೆಶಿ ಹೆಸರು ಕೂಡ ಪ್ರಸ್ತಾಪಿಸಿದರು. ಈ ಘಟನೆ ಕುರಿತು ಸಭೆಯಲ್ಲಿದ್ದ ಸಿದ್ದರಾಮಯ್ಯ ತುಟಿ ಎರಡು ಮಾಡಲಿಲ್ಲ. ಈ ಕಾರ್ಯಕ್ರಮದ ಬಳಿಕ ಸಂಜೆ ವಸಂತನಗರದಲ್ಲಿ ಆಯೋಜಿಸಿದ್ದ ಕನಕದಾಸ ಜಯಂತಿಯಲ್ಲಿ ಸಿದ್ದರಾಮಯ್ಯ ಪಾಲ್ಗೊಂಡು ಸಿಎಂ ಏಕೆ ಆಗಬಾರದು ಎಂದು ವಿವರಣೆ ನೀಡಿದರು. ಕುರುಬರ ಸಂಘವನ್ನು ಉಳಿಸಿದ್ದೇ ನಾನು. ಇದನ್ನು ನಮ್ಮವರು ಅರ್ಥಮಾಡಿಕೊಂಡು ಜಾಗ್ರತೆ ವಹಿಸುವ ಜತೆಗೆ ಒಟ್ಟಾಗಿ ಇರಬೇಕು ಎಂದು ಕರೆ ನೀಡಿದರು.