| ಪಂಕಜ ಕೆ.ಎಂ. ಬೆಂಗಳೂರು
ರಾಜ್ಯದಲ್ಲಿ 60 ವರ್ಷ ಮೇಲ್ಪಟ್ಟ ಸುಮಾರು 58 ಲಕ್ಷ ಹಿರಿಯ ನಾಗರಿಕರನ್ನು ಗುರುತಿಸಲಾಗಿದ್ದು, ವೃದ್ಧಾಪ್ಯದಲ್ಲಿ ಇವರ ನೆಮ್ಮದಿ ಜೀವನಕ್ಕಾಗಿ ಪಿಂಚಣಿ, ಆರೋಗ್ಯ, ಸಾರಿಗೆ ಸೌಲಭ್ಯ ಸೇರಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಹಲವಾರು ಯೋಜನೆಗಳನ್ನು ಜಾರಿಗೊಳಿಸಿವೆ. ಅರ್ಹ ಫಲಾನುಭವಿಗಳಿಗೆ ಸರ್ಕಾರಿ ಸೌಲಭ್ಯ ಪಡೆಯಲು ಹಾಗೂ ವಯೋದಾಖಲಾತಿಗಾಗಿ ಹಿರಿಯ ನಾಗರಿಕರ ಗುರುತಿನ ಚೀಟಿ ನೀಡಲಾಗುತ್ತದೆ. ಅರ್ಹರು ಸೇವಾ ಸಿಂಧು(ಠಛಿಡಚಠಜ್ಞಿಛಜ್ಠ.kಚ್ಟ್ಞಠಿಚkಚ.ಜಟಡ.ಜ್ಞಿ) ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಗುರುತಿನ ಚೀಟಿ ಪಡೆಯಬಹುದಾಗಿದ್ದು, ಇದಕ್ಕೆ ಯಾವುದೇ ಆದಾಯ ಮಿತಿ ಇರುವುದಿಲ್ಲ.
ಹಗಲು ಯೋಗಕ್ಷೇಮ ಕೇಂದ್ರಗಳು: ಹಗಲು ವೇಳೆ ಕುಟುಂಬಸ್ಥರು ನೋಡಿಕೊಳ್ಳಲು ಸಾಧ್ಯವಾಗದಂತಹ ಹಿರಿಯ ನಾಗರಿಕರು ತಮ್ಮ ಸಮಯವನ್ನು ಉತ್ತಮ ರೀತಿ ಸದುಪಯೋಗಪಡಿಸಿಕೊಳ್ಳಲು ಹಗಲು ಯೋಗಕ್ಷೇಮ ಕೇಂದ್ರಗಳಲ್ಲಿ ಸೌಲಭ್ಯ ಕಲ್ಪಿಸಲಾಗಿದೆ. ಇಲ್ಲಿ ಸಾಮಾಜಿಕವಾಗಿ ವಯೋಮಾನದವರೊಂದಿಗೆ ಬೆರೆತು ಓದು, ಆಟೋಟ ಮುಂತಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಂತೋಷವಾಗಿ ಕಾಲಕಳೆಯಬಹುದು. ರಾಜ್ಯದ ಎಲ್ಲ 30 ಜಿಲ್ಲೆಗಳಲ್ಲೂ ಈ ಕೇಂದ್ರಗಳ ಸ್ಥಾಪನೆಗೆ ಸರ್ಕಾರ ಅನುಮತಿ ನೀಡಿದ್ದು, ಪ್ರತಿ ಕೇಂದ್ರದಲ್ಲಿ 50 -150 ಫಲಾನುಭವಿಗಳಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಇದಕ್ಕಾಗಿ ಸರ್ಕಾರ ವಾರ್ಷಿಕ 11.20 ಲಕ್ಷ ರೂ. ಅನುದಾನ ಮಂಜೂರು ಮಾಡುತ್ತದೆ.
ವೃದ್ಧಾಪ್ಯ ವೇತನ: ರಾಜ್ಯದಲ್ಲಿನ ಬಡ ಹಿರಿಯ ನಾಗರಿಕರಿಗೆ (ಕುಟುಂಬದ ವಾರ್ಷಿಕ ಆದಾಯ 32 ಸಾವಿರ ರೂ. ಮೀರದಂತೆ) ತಮ್ಮ ಅಗತ್ಯತೆಗಳಿಗಾಗಿ ಸಂಧ್ಯಾಸುರಕ್ಷಾ ಮತ್ತು ರಾಷ್ಟ್ರೀಯ ವೃದ್ಧಾಪ್ಯ ವೇತನ ಯೋಜನೆಗಳಲ್ಲಿ ಮಾಸಾಶನ ನೀಡಲಾಗುತ್ತಿದೆ. 60 ರಿಂದ 64 ವರ್ಷ ವಯೋಮಾನದ ವೃದ್ಧರಿಗೆ ತಿಂಗಳಿಗೆ 600 ರೂ. ಹಾಗೂ 65 ವರ್ಷ ಮೇಲ್ಪಟ್ಟವರಿಗೆ 1,200 ರೂ. ನೀಡಲಾಗುತ್ತಿದೆ. ರಾಜ್ಯದಲ್ಲಿ 41.69 ಲಕ್ಷ ಹಿರಿಯ ನಾಗರಿಕರು ಈ ಸೌಲಭ್ಯ ಪಡೆಯುತ್ತಿದ್ದಾರೆ.
ವೃದ್ದಾಶ್ರಮ: ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಹಿರಿಯ ನಾಗರಿಕರಿಗಾಗಿ ನಡೆಸುತ್ತಿರುವ ವೃದ್ಧಾಶ್ರಮಗಳಲ್ಲಿ ಪ್ರತಿ ಜಿಲ್ಲೆಗಳಲ್ಲಿ 25 ನಿರ್ಗತಿಕ ಹಿರಿಯ ನಾಗರಿಕರ ದಾಖಲಾತಿಗೆ ಅವಕಾಶ ಕಲ್ಪಿಸಲಾಗಿದೆ. ಇವರ ಆರೈಕೆಗೆ ರಾಜ್ಯ ಸರ್ಕಾರದಿಂದ ಅನುದಾನ ನೀಡಲಾಗುತ್ತದೆ. ರಾಜ್ಯದ ಪ್ರತಿ ಕಂದಾಯ ಉಪ ವಿಭಾಗದಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ವೃದ್ಧಾಶ್ರಮ ಪ್ರಾರಂಭಿಸಲು ಅವಕಾಶವಿದ್ದು, ಪ್ರಸ್ತುತ 9 ಕಂದಾಯ ಉಪ ವಿಭಾಗಗಳಲ್ಲಿ ವೃದ್ಧಾಶ್ರಮ ಕಾರ್ಯಾರಂಭ ಮಾಡಿದೆ. ರಾಜ್ಯ ಅನುದಾನಿತ 35 ವೃದ್ಧಾಶ್ರಮಗಳು ಹಾಗೂ ಕೇಂದ್ರ ಸರ್ಕಾರದ ಅನುದಾನದಡಿ 49 ವೃದ್ಧಾಶ್ರಮಗಳು ಕಾರ್ಯನಿರ್ವಹಿಸುತ್ತಿವೆ.
ರಿಯಾಯಿತಿ ಬಸ್ ಪಾಸ್: ಬಿಎಂಟಿಸಿ ಹಾಗೂ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಹಿರಿಯ ನಾಗರಿಕರ ಗುರುತಿನ ಚೀಟಿ ಹೊಂದಿರುವವರಿಗೆ ಪ್ರಯಾಣ ದರದಲ್ಲಿ ಶೇ.25 ರಿಯಾಯಿತಿ ನೀಡಲಾಗುವುದು. ಇದಲ್ಲದೆ ಕೇಂದ್ರ ಸರ್ಕಾರದಿಂದಲೂ ಈ ಸೌಲಭ್ಯವಿದ್ದು, ಎಕ್ಸ್ಪ್ರೆಸ್ ರೈಲುಗಳಲ್ಲಿ ಹಾಗೂ ವಿಮಾನ ಪ್ರಯಾಣದಲ್ಲಿ ಮುಂಗಡವಾಗಿ ಟಿಕೆಟ್ ಕಾಯ್ದಿರಿಸುವವರಿಗೂ ರಿಯಾಯಿತಿ ದರದಲ್ಲಿ ಪ್ರಯಾಣ ಮಾಡಬಹುದಾಗಿದೆ.
ಸಂಚಾರಿ ಆರೋಗ್ಯ ಘಟಕ: ಕೇಂದ್ರ ಸರ್ಕಾರದಿಂದ ಹಿರಿಯ ನಾಗರಿಕರಿಗೆ ವಾಸಿಸುವ ಸ್ಥಳದಲ್ಲಿಯೇ ಆರೋಗ್ಯ ಸೇವೆ ಒದಗಿಸಲು ಸಂಚಾರಿ ಆರೋಗ್ಯ ಘಟಕದ ಸೌಲಭ್ಯ ಕಲ್ಪಿಸಲಾಗಿದ್ದು, ಸದ್ಯ ಕೋಲಾರ ಜಿಲ್ಲೆಯಲ್ಲಿ ಅನುಷ್ಠಾನಗೊಳುತ್ತಿದೆ.
ಡಿಮೆನ್ಷಿಯಾ ಹಗಲು ಯೋಗಕ್ಷೇಮ ಕೇಂದ್ರ: ಮರೆಗುಳಿತನದಿಂದ ಬಳಲುತ್ತಿರುವ ಹಿರಿಯ ನಾಗರಿಕರಿಗೆ ಚಿಕಿತ್ಸೆಗಾಗಿ ಕೇಂದ್ರ ಸರ್ಕಾರದಿಂದ ದಾವಣಗೆರೆ ಮತ್ತು ಬೆಂಗಳೂರು ನಗರ ಜಿಲ್ಲೆಯಲ್ಲಿ ಡಿಮೆನ್ಷಿಯಾ ಹಗಲು ಯೋಗಕ್ಷೇಮ ಕೇಂದ್ರಗಳನ್ನು ಸ್ವಯಂಸೇವಾ ಸಂಸ್ಥೆ ಮೂಲಕ ನಡೆಸಲಾಗುತ್ತಿದೆ.
ಜಿಲ್ಲೆಗಳಲ್ಲಿ ತುರ್ತು ನೆರವು ಕೇಂದ್ರ: ಕಿರುಕುಳ, ಹಣಕಾಸಿನ ಶೋಷಣೆ, ಮಾನಸಿಕ ತುಮುಲ ಮತ್ತು ದುರ್ಬಲರಾಗಿ ಅನೇಕ ಸಮಸ್ಯೆಗಳನ್ನು ಹಿರಿಯ ನಾಗರಿಕರು ಎದುರಿಸುತ್ತಿದ್ದು, ಇಂತಹ ಸಮಸ್ಯೆಗಳ ನಿವಾರಣೆ ಹಾಗೂ ತುರ್ತು ಸಹಾಯಕ್ಕಾಗಿ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರಗಳನ್ನು ಜಿಲ್ಲೆಗಳಲ್ಲಿ ಆಯಾ ಜಿಲ್ಲೆಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೆೇರಿ ಆವರಣದಲ್ಲಿ, ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಿಂದ ನಡೆಸಲಾಗುತ್ತಿದೆ.
ಉಚಿತ ಸಹಾಯವಾಣಿ: ಸರ್ಕಾರದ ಹಲವು ಯೋಜನೆಗಳಲ್ಲಿ ಪಿಂಚಣಿ, ಆರೋಗ್ಯ ಸೇವೆ ಸೇರಿ ಬಹಳಷ್ಟು ಮಂದಿಗೆ ಯೋಜನೆಗಳು ಸಮರ್ಪಕವಾಗಿ ದೊರೆಯುತ್ತಿಲ್ಲ. ಈ ಬಗ್ಗೆ ಮಾಹಿತಿ ಪಡೆಯಲು ರಾಜ್ಯ ಸರ್ಕಾರ - 1090 ಹಾಗೂ ಕೇಂದ್ರ ಸರ್ಕಾರ- 14567 ಉಚಿತ ಸಹಾಯವಾಣಿ ಸಂಪರ್ಕಿಸಬಹುದು ಅಥವಾ ಹತ್ತಿರದ ತಹಸೀಲ್ದಾರ್ ಕಚೇರಿ, ಅಟಲ್ಜಿ ಜನಸ್ನೇಹಿ ಕೇಂದ್ರ, ನಾಗರಿಕ ಸೇವಾ ಕೇಂದ್ರಗಳಲ್ಲಿ ಮಾಹಿತಿ ಪಡೆಯಬಹುದು.