ಪ್ರಧಾನಿ ನರೇಂದ್ರ ಮೋದಿ ಅವರು ಮನ್ ಕೀ ಬಾತ್ (ಎಂಬಿಕೆ) ರೇಡಿಯೊ ಕಾರ್ಯಕ್ರಮದಲ್ಲಿ ಅನೇಕ ಸಲ ಕರ್ನಾಟಕ ಮತ್ತು ಇಲ್ಲಿನ ವಿಶೇಷತೆಗಳನ್ನು ತೆರೆದಿಟ್ಟಿರುವುದು ಗಮನಾರ್ಹ. ಇಲ್ಲಿನ ಸಂಸ್ಕೃತಿ, ನವೀನ ಮನಸ್ಥಿತಿ ಮತ್ತು ಪ್ರಶಂಸನೀಯ ಕಾರ್ಯಗಳನ್ನು ಉಲ್ಲೇಖಿಸಿದ್ದಾರೆ. ಈ ಬಾನುಲಿ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯ ಉಲ್ಲೇಖಗಳೊಂದಿಗೆ ಎಲ್ಲ ರಾಜ್ಯಗಳ ಪೈಕಿ ಕರ್ನಾಟಕವು ಅಗ್ರಸ್ಥಾನ ಪಡೆದಿರುವುದು ವಿಶೇಷ.
= ಬೀದರ್ ಜಿಲ್ಲೆಯ ಹುಲ್ಸೂರು ರಾಗಿ ಉತ್ಪಾದಕ ಕಂಪನಿಯ ಮಹಿಳೆಯರನ್ನು ಮನ್ ಕೀ ಬಾತ್ನಲ್ಲಿ ಪ್ರಸ್ತಾಪಿಸಿ ಪ್ರಶಂಸಿಸಿದ್ದಾರೆ. ಈ ಮಹಿಳೆಯರು ರಾಗಿ ಬೆಳೆಯುವ ಮತ್ತು ಸಂಸ್ಕರಣೆಯಲ್ಲಿ ವಿನೂತನ ಪ್ರಯತ್ನಗಳ ಮೂಲಕ ಹೆಚ್ಚಿನ ಆದಾಯ ಗಳಿಸುತ್ತಿದ್ದಾರೆ.
= ಆಳಂದ ಭೂತಾಯಿ ಸಿರಿಧಾನ್ಯ ರೀತಿಯ ಕೃಷಿ ಉತ್ಪಾದಕ ಕಂಪನಿಗಳ (ಎಫ್ಪಿಸಿ) ಪ್ರಯತ್ನಗಳನ್ನು ಪ್ರಧಾನಿ ಶ್ಲಾಘಿಸಿದರು. ಇವರು ರೊಟ್ಟಿ, ಬಿಸ್ಕತ್ತು, ಮತ್ತು ಉಂಡೆಯಂತಹ ಜನಪ್ರಿಯ ಉತ್ಪನ್ನಗಳನ್ನು ತಯಾರಿಸುತ್ತಾರೆ.
= ಕರ್ನಾಟಕದಲ್ಲಿ ಅಮೃತ ಸರೋವರ ಅಭಿಯಾನದಡಿ, ಬಾಗಲಕೋಟೆ ಜಿಲ್ಲೆಯ ಬಿಲ್ಕೇರೂರ ಗ್ರಾಮದಲ್ಲಿ ಸುಂದರ ಅಮೃತ ಸರೋವರವನ್ನು ನಿರ್ವಿುಸಲಾಗಿದೆ. ಇದು ಪ್ರವಾಹದ ಸಮಸ್ಯೆ ಮತ್ತು ಪರ್ವತಗಳಿಂದ ಹರಿಯುವ ನೀರಿನಿಂದ ರೈತರಿಗೆ ಆಗುತ್ತಿದ್ದ ನಷ್ಟವನ್ನು ತಪ್ಪಿಸಿದೆ.
= ಅಮೃತ ಭಾರತಿ ಕನ್ನಡಾರತಿ ಅಭಿಯಾನದಡಿಯಲ್ಲಿ ರಾಜ್ಯದ 75 ಸ್ಥಳಗಳಲ್ಲಿ ಆಜಾದಿ ಕಾ ಅಮೃತ್ ಮಹೋತ್ಸವಕ್ಕೆ ಸಂಬಂಧಿಸಿದ ಭವ್ಯ ಕಾರ್ಯಕ್ರಮಗಳನ್ನು ಆಯೋಜಿಸಿದ್ದನ್ನು ಪ್ರಧಾನ ಮಂತ್ರಿ ಶ್ಲಾಘಿಸಿದರು.
= ಕರ್ನಾಟಕದ ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ, ಕೋವಿಡ್ ಸಾಂಕ್ರಾಮಿಕ ಹರಡಿದ ಸಮಯದಲ್ಲಿ ಮಹಿಳೆಯರು ಬಾಳೆ ಹಿಟ್ಟಿನಿಂದ ದೋಸೆ, ಗುಲಾಬ್ ಜಾಮೂನ್ ಮತ್ತು ಇತರ ಆಹಾರ ಪದಾರ್ಥಗಳನ್ನು ತಯಾರಿಸುವ ವಿಶಿಷ್ಟ ವ್ಯವಹಾರವನ್ನು ಪ್ರಾರಂಭಿಸಿದರು. ಇದು ಅವರ ಆದಾಯದಲ್ಲಿ ಹೆಚ್ಚಳಕ್ಕೆ ಕಾರಣವಾಯಿತು ಎಂದು ಮೋದಿ ಪ್ರಸ್ತಾಪಿಸಿದ್ದರು.
= ಯುವಾ ಬ್ರಿಗೇಡ್ನ ಸ್ವಚ್ಛತಾ ಅಭಿಯಾನಕ್ಕಾಗಿ ಮತ್ತು ಕರ್ನಾಟಕದ ಶ್ರೀರಂಗಪಟ್ಟಣದಲ್ಲಿರುವ ವೀರಭದ್ರಸ್ವಾಮಿ ದೇವಾಲಯವನ್ನು ಜೀಣೋದ್ಧಾರ ಮಾಡಿದ್ದಕ್ಕಾಗಿ ಶ್ಲಾಘಿಸಿದರು. ಇದೇ ರೀತಿ, ಸೋಮೇಶ್ವರ ಬೀಚ್ ಸ್ವಚ್ಛಗೊಳಿಸಿದ ಅನುದೀಪ್ ಮತ್ತು ಮಿನುಷಾ ದಂಪತಿ ಕುರಿತು ಪ್ರಸ್ತಾಪಿಸಿದರು.
= ಬಾಬಾಸಾಹೇಬ್ ಮತ್ತು ರಾಮಾನುಜಾಚಾರ್ಯರ ಬಗ್ಗೆ ಮಾತನಾಡುವಾಗ, ಪ್ರಧಾನಿಯವರು ಬಸವೇಶ್ವರರ ಬೋಧನೆಗಳನ್ನು ನೆನಪಿಸಿಕೊಂಡರು. ಕಾಯಕವೇ ಕೈಲಾಸ ಅಂದರೆ ಕರ್ತವ್ಯಗಳನ್ನು ಸರಿಯಾದ ಶ್ರದ್ಧೆ ಮತ್ತು ಪರಿಶ್ರಮದಿಂದ ನಿರ್ವಹಿಸುವುದು ಶಿವನ ನಿವಾಸದಲ್ಲಿ ಅಂದರೆ ಕೈಲಾಸ ಧಾಮದಲ್ಲಿರುವುದಕ್ಕೆ ಸಮಾನವಾಗಿದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಶ್ರಮವೇ ಶಿವ.
= ಇ-ತ್ಯಾಜ್ಯ ನಿರ್ವಹಣೆಯಲ್ಲಿ ಸ್ಟಾರ್ಟಪ್ಗಳನ್ನು ಉತ್ತೇಜಿಸುವ ಪ್ರಯತ್ನದಲ್ಲಿ ತೊಡಗಿರುವ ಬೆಂಗಳೂರಿನ ಇ-ಪರಿಸರದ ಬಗ್ಗೆ ಪ್ರಧಾನಿ ಪ್ರಸ್ತಾಪಿಸಿದರು. ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್ಗಳಿಂದ ಅಮೂಲ್ಯ ಲೋಹಗಳನ್ನು ಹೊರತೆಗೆಯಲು ಇದು ಸ್ಥಳೀಯ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ.
= ಪದ್ಮ ಪ್ರಶಸ್ತಿ ಪುರಸ್ಕೃತರ ಸ್ಪೂರ್ತಿದಾಯಕ ಕೃತಿಗಳನ್ನು ಹಂಚಿಕೊಳ್ಳುವಾಗ, ದೇವದಾಸಿಯರ ಕಲ್ಯಾಣಕ್ಕಾಗಿ ಶ್ರಮಿಸಿದ ಸೀತವ್ವ ಜೋಡಟ್ಟಿ, ಟನಲ್ ಮ್ಯಾನ್ ಅವೈ ಮಹಾಲಿಂಗ ನಾಯ್ಕ ಸೇರಿದಂತೆ ಕರ್ನಾಟಕದ ಕೆಲವು ಉದಾಹರಣೆಗಳನ್ನು ಮೋದಿ ಪ್ರಸ್ತಾಪಿಸಿದರು.