ನ್ಯೂಸ್

ಬೆಂಗಳೂರು ನಗರ ವಿ.ವಿ.ಗೆ ಮನಮೋಹನ್ ಸಿಂಗ್ ಹೆಸರು: ಜೆಡಿಎಸ್ ವಿರೋಧ|JDS Oposes

ಬೆಂಗಳೂರು: ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕು ಸಾಣಾಪುರದ ಬಳಿ ಇಸ್ರೇಲ್ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ, ಬಜೆಟ್‌ನಲ್ಲಿ 100 ಹೈಟೆಕ್ ಉರ್ದು ಶಾಲೆಯ ಘೋಷಣೆ, ಬೆಂಗಳೂರು ನಗರ ವಿ.ವಿ.ಗೆ ಮನಮೋಹನ್ ಸಿಂಗ್ ಹೆಸರು ಇಡುವದನ್ನು ಜೆಡಿಎಸ್ ತೀವ್ರವಾಗಿ ಖಂಡಿಸಿದೆ(Manmohan Singh's name for Bangalore City University: JDS opposes).

ಒಂದೆಡೆ ಮಹಿಳಾ ದಿನಾಚರಣೆ, ಇನ್ನೊಂದೆಡೆ ಮಹಿಳೆಯರ ಮೇಲೆ ಅತ್ಯಾಚಾರ! ಇಸ್ರೇಲ್ ಮಹಿಳೆ ಮತ್ತು ಸ್ಥಳೀಯ ಹೋಮ್ ಸ್ಟೇ ಮಾಲಕಿಯ ಮೇಲೆ ಕಾಮಪಿಶಾಚಿಗಳು ಸಾಮೂಹಿಕ ಅತ್ಯಾಚಾರ ಎಸಗಿರುವ ಹೀನಕೃತ್ಯ ರಾಜ್ಯಕ್ಕೆ ಕಪ್ಪು ಚುಕ್ಕೆ. ಸಿದ್ದರಾಮಯ್ಯ ಸರ್ಕಾರದ ಅಸಮರ್ಥ, ಅದಕ್ಷ ಹಾಗೂ ಅಪ್ರಯೋಜಕ ಗೃಹ ಸಚಿವರಿಂದ ಕರ್ನಾಟಕದಲ್ಲಿ ಕಾಮಪಿಶಾಚಿಗಳ ಅಟ್ಟಹಾಸ ಮಿತಿಮೀರಿದೆ. ಕಾನೂನು ಸುವ್ಯವಸ್ಥೆ ಮಣ್ಣುಪಾಲಾಗಿದ್ದು, ಮಹಿಳೆಯರಿಗೆ ರಕ್ಷಣೆ ಇಲ್ಲದಾಗಿದೆ. ಕಾಂಗ್ರೆಸ್ ಆಡಳಿತದಲ್ಲಿ ನಾರಿಯರು ನಡುರಸ್ತೆಗೆ ಕಾಲಿಡುವುದೇ ದುಸ್ತರವಾಗಿದೆ ಎಂದು ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ.

ಸಿದ್ದರಾಮಯ್ಯನವರೇ.. ನಿಮ್ಮ ಸರ್ಕಾರದ ಭದ್ರತಾ ವೈಫಲ್ಯಕ್ಕೆ ಜನ ಹಿಡಿಶಾಪ ಹಾಕುತ್ತಿದ್ದಾರೆ. ಛೀ! ನಾಚಿಕೆಗೇಡು ಎಂದು ಜೆಡಿಎಸ್ ಹರಿಹಾಯ್ದಿದೆ.

ಮನಮೋಹನ್ ಸಿಂಗ್ ಹೆಸರಿಗೆ ವಿರೋಧ

ಬೆಂಗಳೂರು ನಗರ ವಿ.ವಿ.ಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೆಸರಿಡಲು ಸಿದ್ದರಾಮಯ್ಯ ಅವರೇ ಬೆಂಗಳೂರು ವಿ.ವಿ. ನಿಮ್ಮ ಮನೆತನದ ಆಸ್ತಿಯಲ್ಲ. ಕಾಂಗ್ರೆಸ್ ಆಸ್ತಿಯೂ ಅಲ್ಲ ಎಂದು ಜೆಡಿಎಸ್ ವಾಗ್ದಾಳಿ ನಡೆಸಿದೆ.

ನಮಗೆ ಡಾ.ಮನಮೋಹನ್ ಸಿಂಗ್ ಮೇಲೆ ಅಪಾರವಾದ ಗೌರವವಿದೆ. ಆದರೆ ಬೆಂಗಳೂರು ನಗರ ವಿ.ವಿ.ಗೆ ಪರ್ಯಾಯವಾಗಿ ಬೇರೆ ಯಾವುದೇ ಹೆಸರಿಡಲು ತೀವ್ರ ವಿರೋಧವಿದೆ. ರಾಜ್ಯದಲ್ಲಿ ಕನ್ನಡ ಭಾಷೆ, ನೆಲ, ಜಲ ನಾಡಿಗಾಗಿ ಹೋರಾಡಿದ ಸಾವಿರಾರು ಕನ್ನಡಿಗ ಸಾಧಕರು ಇದ್ದಾರೆ. ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಕರ್ನಾಟಕಕ್ಕೆ ಕೀರ್ತಿ ತಂದ ಮಹನೀಯರಿದ್ದಾರೆ. ಆ ಕನ್ನಡಿಗರು ಕಾಂಗ್ರೆಸ್ಸಿಗರ ಕಣ್ಣಿಗೆ ಬೀಳಲಿಲ್ಲವೇ? ಎಂದು ಕೆಣಕಿದೆ.

ಸಿದ್ದರಾಮಯ್ಯನವರೇ, ನಿಮಗೆ ಅಷ್ಟು ಅಭಿಮಾನ, ಗೌರವ ಇದ್ದರೆ ಮೈಸೂರಿನಲ್ಲಿ ನಿರ್ಮಿಸುತ್ತಿರುವ ನಿಮ್ಮ ಹೊಸ ಮನೆಗೆ ಮನಮೋಹನ್ ಸಿಂಗ್ ನಿವಾಸ ಎಂದು ಹೆಸರಿಟ್ಟು ಕೊಳ್ಳಿ. ನಿಮ್ಮ ಸೊಸೆಯ ಒಡೆತನದಲ್ಲಿರುವ ಬಹುಕೋಟಿ ಮೌಲ್ಯದ ಐಶಾರಾಮಿ ಕ್ಲಬ್ ಗೆ ಮರು ನಾಮಕರಣ ಮಾಡಿಕೊಳ್ಳಿ. ಕೆಲ ತಿಂಗಳ ಹಿಂದಷ್ಟೆ ಬೆಂಗಳೂರಿನಲ್ಲಿ ರಾಜೀವ್ ಗಾಂಧಿ ಕಂಚಿನ ಪ್ರತಿಮೆ ಅನಾವರಣಗೊಳಿಸಲಾಗಿತ್ತು. ಈಗ ಬೆಂಗಳೂರು ವಿವಿಗೆ ಮನಮೋಹನ್ ಸಿಂಗ್ ಹೆಸರು ನಾಮಕರಣ ಮಾಡುವುದಾಗಿ ಘೋಷಿಸಿದ್ದೀರಿ. ಹೈಕಮಾಂಡ್ ಗುಲಾಮಗಿರಿಗೆ ನೀವು ಸದಾ ಸಿದ್ಧರಾಮಯ್ಯ ಎಂದು ಜೆಡಿಎಸ್ ಟಾಂಗ್ ಕೊಟ್ಟಿದೆ.

ಸಿದ್ದರಾಮಯ್ಯ ಅಲ್ಲ, ಉರ್ದುರಾಮಯ್ಯ

ಕರ್ನಾಟಕದಲ್ಲಿ ಕನ್ನಡಕ್ಕೆ ಪ್ರಥಮ ಆದ್ಯತೆ , ಕನ್ನಡವೇ ಆಡಳಿತ ಭಾಷೆ ಎಂದು ಪುಂಗಿ ಬಿಡುತ್ತಲೇ ರಾಜ್ಯದಲ್ಲಿ 100 ಉರ್ದು ಶಾಲೆಗಳನ್ನು ಪಬ್ಲಿಕ್ ಶಾಲೆ ಮಾದರಿಯಲ್ಲಿ ಹೈಟೆಕ್ ಮಾಡುತ್ತಿದ್ದಾರೆ. ಮತಬ್ಯಾಂಕ್‌ಗಾಗಿ ಒಂದು ಸಮುದಾಯವನ್ನು ಅತಿಯಾಗಿ ಓಲೈಕೆ ಮಾಡುತ್ತಿರುವ ಸಿದ್ದರಾಮಯ್ಯ ಉರ್ದುರಾಮಯ್ಯ ಆಗಿ ಬದಲಾಗಿ ಕನ್ನಡಭಾಷೆಗೆ ದ್ರೋಹ ಬಗೆಯುತ್ತಿದ್ದಾರೆ ಎಂದು ಜೆಡಿಎಸ್ ಟೀಕಿಸಿದೆ.

100 ಹೈಟೆಕ್ ಉರ್ದು ಶಾಲೆಯ ಘೋಷಣೆ ಕನ್ನಡಕ್ಕೆ ಹಾಗೂ ಕನ್ನಡ ಭಾಷಿಕರ ಮೇಲೆ ಮಾಡುತ್ತಿರುವ ಗಧಾ ಪ್ರಹಾರ ಎಂಬುದರಲ್ಲಿ ಸಂದೇಹವೇ ಇಲ್ಲ ಎಂದು ಜೆಡಿಎಸ್ ಆರೋಪಿಸಿದೆ.