ನ್ಯೂಸ್

ನಾಯಕಿ ಪಾತ್ರ ಬೇಕಾದ್ರೆ ಮಣಿರತ್ನಂ ನಿರ್ದೇಶನದ ಆ ಸಿನಿಮಾದಲ್ಲಿ ನಟಿಸಬೇಡಿ; ಮನಿಷಾ ಕೊಯಿರಾಲಾ ಬಾಯ್ಬಿಟ್ಟ ರಹಸ್ಯ ಹೀಗಿದೆ.. | Manisha Koirala

ಮುಂಬೈ: ನಟಿ ಮನಿಷಾ ಕೊಯಿರಾಲಾ(Manisha Koirala) 1991ರಲ್ಲಿ ಬಿಡುಗಡೆಯಾದ 'ಸೌದಾಗರ್' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. 90ರ ದಶಕದ ಈ ನಟಿ ಇಂದಿಗೂ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. 1995ರಲ್ಲಿ ತೆರೆಕಂಡ ‘ಬಾಂಬೆ’ ಚಿತ್ರದಲ್ಲಿ ಮನಿಷಾ ಅವರ ಕೆಲಸ ಅಪಾರ ಮೆಚ್ಚುಗೆಗೆ ಪಾತ್ರವಾಯಿತು. 20ರ ಹರೆಯದಲ್ಲಿ ತಾಯಿ ಪಾತ್ರ ಮಾಡಿ ಮನಿಷಾ ಸೈ ಎನ್ನಿಸಿಕೊಂಡಿದ್ದರು.

ಇತ್ತೀಚಿನ ಸಂದರ್ಶನವೊಂದರಲ್ಲಿ ಮನಿಷಾ ಬಾಂಬೆ ಸಿನಿಮಾಗೆ ಸಂಬಂಧಿಸಿದ ಘಟನೆಯೊಂದನ್ನು ಹಂಚಿಕೊಂಡಿದ್ದಾರೆ. ಬಾಂಬೆ ಸಿನಿಮಾದ ಆಫರ್​ ಬಂದಾಗ ಈ ಚಿತ್ರ ಮಾಡದಂತೆ ಮನಿಷಾಗೆ ಹಲವರು ಸಲಹೆ ನೀಡಿದ್ದರು ಎಂದು ಹೇಳಿದ್ದಾರೆ. ನನಗೆ ಬಾಂಬೆ ಸಿನಿಮಾದಲ್ಲಿ ಅಭಿನಯಿಸಲು ಇಷ್ಟವಿರಲಿಲ್ಲ. ಅಮ್ಮನ ಪಾತ್ರ ಮಾಡಬೇಡಿ ಅಂತ ಜನ ಹೇಳುತ್ತಿದ್ದರು. ಈಗಲೇ ಅಮ್ಮನ ಪಾತ್ರ ಮಾಡೋದು ಬೇಡ ಅಂದಿದ್ರು. ಒಮ್ಮೆ ನಾನು ತಾಯಿಯ ಪಾತ್ರದಲ್ಲಿ ನಟಿಸಿದರೆ ಆ ಇಮೇಜ್‌ನೊಂದಿಗೆ ಸಿಲುಕಿಕೊಳ್ಳುತ್ತೇನೆ. ಮತ್ತೆ ನಾಯಕಿ ಪಾತ್ರಗಳನ್ನು ಪಡೆಯುವುದಿಲ್ಲ ಎಂದು ಹೇಳುತ್ತಿದ್ದರು ಎಂದರು.

ಆದರೆ ಸಿನಿಮಾಟೋಗ್ರಾಫರ್ ಅಶೋಕ್ ಮೆಹ್ತಾ ಅವರು, ಮಣಿರತ್ನಂ ಅವರು ಎಷ್ಟರ ಮಟ್ಟಿಗೆ ಒಳ್ಳೆಯ ಕೆಲಸ ಮಾಡಿದ್ದಾರೆ ಗೊತ್ತಾ? ನೀವು ಅವರ ಚಿತ್ರವನ್ನು ನಿರಾಕರಿಸಿದರೆ ನೀವು ಮೂರ್ಖರು ಎಂದು ಹೇಳಿದರು. ಅವರೊಂದಿಗೆ ಕೆಲಸ ಮಾಡುವ ಅವಕಾಶವನ್ನು ಬಳಸಿಕೊಳ್ಳುವಂತೆ ಸಲಹೆ ನೀಡಿದರು. ಅವರ ಮಾತು ಮಣಿರತ್ನಂ ಅವರನ್ನು ಭೇಟಿ ಮಾಡುವ ನನ್ನ ನಿರ್ಧಾರವನ್ನು ದೃಢಪಡಿಸುವಂತೆ ಮಾಡಿತು.

ಬಳಿಕ ನಾನು, ನನ್ನ ತಾಯಿಯೊಂದಿಗೆ ಚೆನ್ನೈ ಹೋದೆ. ಬಳಿಕ ಲುಕ್​ ಟೆಸ್ಟ್​​ ನಡೆಯಿತು. ನಾನು ಮಣಿ ಸರ್ ಅವರನ್ನು ಭೇಟಿಯಾದಾಗ ಅವರ ಬುದ್ಧಿಶಕ್ತಿ, ನಮ್ರತೆ ಮತ್ತು ಸೃಜನಶೀಲತೆಯ ಹಸಿವು ನನ್ನನ್ನು ಆಕರ್ಷಿಸಿತು. ಏಕತೆ ಮತ್ತು ಒಂದು ಕುಟುಂಬವಾಗಿ ಒಟ್ಟಿಗೆ ಸೇರುವ ಬಗ್ಗೆ ಚಿತ್ರದ ಸಂದೇಶವೂ ನನ್ನನ್ನು ಆಕರ್ಷಿಸಿತು. ಆದರೆ ಇಂದು ನಾನು 'ಬಾಂಬೆ' ಸಿನಿಮಾದ ಭಾಗವಾಗಿರುವುದಕ್ಕೆ ಹೆಮ್ಮೆಯಾಗುತ್ತಿದೆ ಎಂದು ಹೇಳಿದರು.‘

ಮಣಿರತ್ನಂ ಅವರೊಂದಿಗೆ ಕೆಲಸ ಮಾಡುವುದು ಹೇಗೆ ನಟಿಯಾಗಿ ಬೆಳೆಯಲು ಸಹಾಯ ಮಾಡಿತು ಎಂಬುದನ್ನು ಹೇಳಿದ ಮನಿಷಾ ಕೊಯಿರಾಲಾ, ಮಣಿ ಸರ್ ಜತೆ ಕೆಲಸ ಮಾಡಿ ತುಂಬಾ ಬೆಳೆದೆ. ಅವರು ಶಾಟ್ ತೆಗೆದ ರೀತಿ, ಪ್ರಯೋಗ ಮಾಡಿದ ರೀತಿ, ನನ್ನನ್ನು ಗದರಿಸಿ ಸರಿ ದಾರಿಗೆ ತಂದಿದ್ದಕ್ಕಾಗಿ ಅವರು ನನ್ನ ಗುರುಗಳು ಎಂದರೆ ತಪ್ಪಲ್ಲ. ಅಶೋಕ್ ಜಿ ಅವರಿಗೆ ನಾನು ತುಂಬಾ ಕೃತಜ್ಞನಳಾಗಿದ್ದೇನೆ ಎಂದು ಹೇಳಿದರು.

ಬಾಂಬೆ ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ಸೂಪರ್ ಹಿಟ್ ಆಗಿತ್ತು. ಈ ಚಿತ್ರವು ಫಿಲ್ಮ್‌ಫೇರ್ ರಾಷ್ಟ್ರೀಯ ಪ್ರಶಸ್ತಿಯನ್ನು ಸಹ ಗೆದ್ದುಕೊಂಡಿತು. ಬಾಬರಿ ಮಸೀದಿ ಧ್ವಂಸದ ನಂತರ ಮುಂಬೈನಲ್ಲಿ ನಡೆದ ಗಲಭೆಯ ಹಿನ್ನೆಲೆ ಈ ಚಿತ್ರದ ಕಥೆಯಾಗಿದೆ. ಚಿತ್ರದಲ್ಲಿ ಮನಿಷಾ ಜತೆ ನಟ ಅರವಿಂದ್ ಸ್ವಾಮಿ ಮುಖ್ಯ ಭೂಮಿಕೆಯಲ್ಲಿದ್ದರು.(ಏಜೆನ್ಸೀಸ್​​)