ಇಂಫಾಲ: ಜನಾಂಗೀಯ ಹಿಂಸಾಚಾರದಿಂದ ಕುದಿಯುತ್ತಿರುವ ರಾಜ್ಯದ ಜನತೆಗೆ ಸಾಂತ್ವನ ಹೇಳಲು ಮಣಿಪುರಕ್ಕೆ ಭೇಟಿ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮನವಿ ಮಾಡಿದ್ದಾರೆ.
ಪ್ರಧಾನಿ ಅವರು ಇಲ್ಲಿಗೆ ಬಂದು ಜನರ ಮಾತನ್ನು ಆಲಿಸುವುದು ಹಾಗೂ ಮಣಿಪುರದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದು ಮುಖ್ಯ ಎಂದು ಭಾವಿಸುತ್ತೇನೆ. ಪ್ರಧಾನಿಯವರು ತಮ್ಮ ಸಮಯದಿಂದ 1-2 ದಿನ ಮಣಿಪುರಕ್ಕೆ ಬಂದು ಜನರ ಮಾತುಗಳನ್ನು ಕೇಳಿದರೆ ಅದು ಇಲ್ಲಿಯ ಜನರಿಗೆ ಸಾಂತ್ವನ ನೀಡಲಿದೆ. ಇಲ್ಲಿನ ಪರಿಸ್ಥಿತಿಯನ್ನು ಸುಧಾರಿಸುವ ಯಾವುದನ್ನಾದರೂ ಬೆಂಬಲಿಸಲು ಕಾಂಗ್ರೆಸ್ ಪಕ್ಷ ಸಿದ್ಧವಿದೆ ಎಂದು ಹೇಳಿದರು.
ಮಣಿಪುರದಲ್ಲಿ ಶಾಂತಿಯನ್ನು ತರಲು ಕಾಂಗ್ರೆಸ್ ಎಲ್ಲವನ್ನೂ ಮಾಡುತ್ತದೆ. ಹಿಂಸಾಚಾರ ನಡೆದ ನಂತರ ನಾನು ಮೂರನೇ ಬಾರಿಗೆ ಮಣಿಪುರಕ್ಕೆ ಬಂದಿದ್ದೇನೆ. ಪರಿಸ್ಥಿತಿಯಲ್ಲಿ ಸ್ವಲ್ಪಮಟ್ಟಿಗೆ ಸುಧಾರಣೆಯಾಗಬಹುದು ಎಂದು ನಿರೀಕ್ಷಿಸಿದ್ದೆ, ಆದರೆ ಪರಿಸ್ಥಿತಿ ಇನ್ನೂ ಇರಬೇಕಾದಂತೆ ಇಲ್ಲದಿರುವುದನ್ನು ನೋಡಿ ನಿರಾಶೆಗೊಂಡಿದ್ದೇನೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಈಶಾನ್ಯ ರಾಜ್ಯದ ಪರಿಹಾರ ಶಿಬಿರಗಳಿಗೆ ಭೇಟಿ ನೀಡಿ ಅಲ್ಲಿನ ಜನರು ಮತ್ತು ಅವರ ನೋವನ್ನು ಆಲಿಸಿದ್ದೇನೆ. ಅವರ ಮಾತು ಕೇಳಲು, ಅವರಲ್ಲಿ ಆತ್ಮವಿಶ್ವಾಸ ತುಂಬಲು ವಿರೋಧ ಪಕ್ಷದಲ್ಲಿದ್ದುಕೊಂಡು ಕ್ರಮಕೈಗೊಳ್ಳುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ಇಲ್ಲಿಗೆ ಬಂದಿದ್ದೇನೆ. ಹಿಂಸಾಚಾರ ಎಲ್ಲರಿಗೂ ನೋವುಂಟು ಮಾಡುತ್ತಿದೆ. ಇಲ್ಲಿ ಶಾಂತಿ ನೆಲೆಸುವುದು ಅಗತ್ಯ ಎಂದು ತಿಳಿಸಿದ್ದಾರೆ.
ರಾಜ್ಯಪಾಲರೊಂದಿಗೆ ಮಾತನಾಡಿದ್ದೇನೆ. ಸಾಧ್ಯವಿರುವ ಎಲ್ಲ ರೀತಿಯಲ್ಲಿ ಸಹಾಯ ಮಾಡಲು ನಾವು ಬಯಸುತ್ತೇವೆ. ಈ ವಿಷಯವನ್ನು ಮುಂದೆ ರಾಜಕೀಯಗೊಳಿಸಲು ಬಯಸುವುದಿಲ್ಲ. ಅಂತಹ ಉದ್ದೇಶ ನನಗಿಲ್ಲ. ಹಿಂಸೆ ಮತ್ತು ದ್ವೇಷದಿಂದ ಯಾವುದೇ ಪರಿಹಾರ ಸಿಗುವುದಿಲ್ಲ ಎಂದು ಹೇಳಿದರು. (ಏಜೆನ್ಸೀಸ್)