ನವದೆಹಲಿ: ಮಣಿಪುರ ರಾಜ್ಯ ನೀರು ಪೂರೈಕೆ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಅಡಿಪಾಯ ಹಾಕಲಿದ್ದಾರೆ.
2024 ರ ವೇಳೆಗೆ ಎಲ್ಲ ಗ್ರಾಮೀಣ ಕುಟುಂಬಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಮಣಿಪುರ ರಾಜ್ಯ ಸರ್ಕಾರದ ಪ್ರಮುಖ ಯೋಜನೆ ಇದಾಗಿದೆ.
ಗ್ರೇಟರ್ ಇಂಫಾಲ್ ಯೋಜನಾ ಪ್ರದೇಶದಲ್ಲಿ ಉಳಿದಿರುವ ಮನೆಗಳಿಗೆ ಶುದ್ಧ ಕುಡಿಯುವ ನೀರಿನ ನಲ್ಲಿ ಸಂಪರ್ಕಗಳನ್ನು (ಎಫ್‌ಎಚ್‌ಟಿಸಿ) ಒದಗಿಸಲು ಮತ್ತು ಮಣಿಪುರದ ಎಲ್ಲ 16 ಜಿಲ್ಲೆಗಳಲ್ಲಿ 2,80,756 ಮನೆಗಳನ್ನು ಒಳಗೊಂಡಂತೆ 1,731 ಗ್ರಾಮೀಣ ವಸತಿ ಪ್ರದೇಶಗಳಿಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಇದನ್ನು ಯೋಜಿಸಲಾಗಿದೆ.
"ಮಣಿಪುರ ನೀರು ಸರಬರಾಜು ಯೋಜನೆ 2024 ರ ವೇಳೆಗೆ 'ಹರ್ ಘರ್ ಜಲ' ಗುರಿಯನ್ನು ಸಾಧಿಸುವಲ್ಲಿ ರಾಜ್ಯ ಸರ್ಕಾರದ ಪ್ರಯತ್ನಗಳ ಒಂದು ಪ್ರಮುಖ ಅಂಶವಾಗಿದೆ" ಎಂದು ಪ್ರಧಾನಿಯವರ ಕಚೇರಿ ಹೇಳಿಕೆ ಬುಧವಾರ ತಿಳಿಸಿದೆ.
ಯೋಜನೆಯ ವೆಚ್ಚ 3054.58 ಕೋಟಿ ರೂ.ಆಗಲಿರಲಿದ್ದು, ನ್ಯೂ ಡೆವಲಪ್ಮೆಂಟ್ ಬ್ಯಾಂಕ್ ಧನಸಹಾಯ ಒದಗಿಸಲಿದೆ. ಭಾರತದಲ್ಲಿ ಅಂದಾಜು 19 ಕೋಟಿ ಕುಟುಂಬಗಳಿದ್ದು, ಅವುಗಳ ಪೈಕಿ ಕೇವಲ ಶೇ. 24 ಕುಟುಂಬಗಳು ಮಾತ್ರ ಎಫ್‌ಎಚ್‌ಟಿಸಿ ಸೌಲಭ್ಯಗಳನ್ನು ಹೊಂದಿವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಜಲ್ ಜೀವನ್ ಅಭಿಯಾನ ರಾಜ್ಯ ಸರ್ಕಾರಗಳು, ಪಂಚಾಯತ್ ರಾಜ್ ಸಂಸ್ಥೆಗಳು ಮತ್ತು ಸ್ಥಳೀಯ ಸಮುದಾಯಗಳು ಸೇರಿದಂತೆ ಎಲ್ಲಾ ಪಾಲುದಾರರ ಸಹಭಾಗಿತ್ವದ ಮೂಲಕ 14 ಕೋಟಿ ಕುಟುಂಬಗಳಿಗೆ ಎಫ್‌ಎಚ್‌ಟಿಸಿಯನ್ನು ಒದಗಿಸುವ ಗುರಿ ಹೊಂದಿದೆ ಎಂದು ಅದು ಹೇಳಿದೆ.