ನವದೆಹಲಿ: ಲೋಕಸಭೆಯಲ್ಲಿ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರು ಹೇಳಿಕೆ ನೀಡುತ್ತಿದ್ದ ಸಂದರ್ಭದಲ್ಲಿ ತಮಿಳುನಾಡಿನ ಕಾಂಗ್ರೆಸ್ ಸಂಸದ ಮಾಣಿಕಂ ಠಾಗೋರ್ ಮತ್ತು ಇತರೆ ಕೆಲವು ಸಂಸದರು ಅವರ ಮೇಲೆರಗಲು ಹೋದಾಗ ಕಲಾಪಕ್ಕೆ ಅಡ್ಡಿಯಾಗಿ ಎರಡು ಗಂಟೆಗೂ ಹೆಚ್ಚು ಕಾಲ ಕಲಾಪ ಮುಂಡೂಲ್ಪಟ್ಟಿತ್ತು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಸಂಸದ ಜಗದಂಬಿಕಾ ಪಾಲ್, ಕೇಂದ್ರ ಆರೋಗ್ಯ ಸಚಿವರು ಲೋಕಸಭೆಯಲ್ಲಿ ಮಾತನಾಡುತ್ತಿದ್ದಾಗ ಕಾಂಗ್ರೆಸ್ ಸಂಸದ ಮಾಣಿಕಂ ಠಾಗೋರ್ ಅವರ ಮೇಲೆರಗಲು ಮುಂದಾಗಿದ್ದರು. ಪ್ರಜಾಪ್ರಭುತ್ವದಲ್ಲಿ ಇದೊಂದು ಕೆಟ್ಟ ಘಟನೆ ಎಂದು ಹೇಳಿದ್ದರು.
ಈ ನಡುವೆ, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಕೂಡ ಪ್ರತಿಕ್ರಿಯಿಸಿದ್ದು, ನನ್ನ ಕ್ಷೇತ್ರ ವಯನಾಡಿನಲ್ಲಿ ಮೆಡಿಕಲ್ ಕಾಲೇಜು ಇಲ್ಲದ ಕಾರಣ ಅಲ್ಲೊಂದು ಸ್ಥಾಪನೆಯಾಗಬೇಕು ಎಂದು ಬಯಸಿದ್ದೆ. ಈ ಬಗ್ಗೆ ಪ್ರಶ್ನೆ ಕೇಳಿದ್ದೆ. ಸಹಜವಾಗಿಯೇ ಬಿಜೆಪಿಯವರಿಗೆ ನಾನು ಮಾತನಾಡುವುದು ಬೇಕಾಗಿರಲಿಲ್ಲ. ಸಂಸತ್ತಿನಲ್ಲಿ ನಮಗೆ ಮಾತನಾಡಲು ಬಿಡುವುದಿಲ್ಲ. ಆ ವಿಡಿಯೋ ದೃಶ್ಯಗಳನ್ನು ಗಮನಿಸಿ ನೋಡಿ, ಮಾಣಿಕಂ ಠಾಗೋರ್ ಯಾರ ಮೇಲೂ ದಾಳಿ ನಡೆಸಲು ಹೋಗಿಲ್ಲ. ಬದಲಾಗಿ ಎಲ್ಲರೂ ಅವರ ಮೇಲೆಯೇ ಮುಗಿಬಿದ್ದಿದ್ದರು ಎಂದಿದ್ದಾರೆ. (ಏಜೆನ್ಸೀಸ್)