ಭಾರತೀಯ ಚಿತ್ರರಂಗದಲ್ಲಿ ಇದುವರೆಗೆ ನಟ ಕಿಚ್ಚ ಸುದೀಪ್ ಪತ್ನಿಯಾಗಿ ಗುರುತಿಸಿಕೊಂಡಿದ್ದ, ಪ್ರಿಯಾ ಇದೀಗ ವಿತರಕಿ, ನಿರ್ಮಾಪಕಿಯಾಗಿ ಗುರುತಿಸಿಕೊಳ್ಳಲು ಮುಂದಾಗಿದ್ದಾರೆ. ಸುಪ್ರಿಯಾನ್ವಿ ಪ್ರೊಡಕ್ಷನ್ಸ್ ಬ್ಯಾನರ್ ಮೂಲಕ "ಮಾರ್ಕ್' ಚಿತ್ರವನ್ನು ವಿತರಣೆ ಮಾಡಿದ್ದ ಅವರು, ಇದೀಗ "ಮ್ಯಾಂಗೋ ಪಚ್ಚ' ನಿರ್ಮಿಸಿದ್ದಾರೆ. ವಿವೇಕ್ ನಿರ್ದೇಶನದ ಈ ಚಿತ್ರದ ಮೂಲಕ ಸುದೀಪ್ ಅಕ್ಕನ ಮಗ ಸಂಚಿತ್ ನಾಯಕನಾಗಿ ಪದಾರ್ಪಣೆ ಮಾಡಿದ್ದು, ಕಳೆದ ಶುಕ್ರವಾರ ರಿಲೀಸ್ ಆಗಿರುವ ಚಿತ್ರಕ್ಕೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಅದರ ನಡುವೆಯೇ ವಿಜಯವಾಣಿ ಜತೆ ಮಾತಿಗೆ ಸಿಕ್ಕಿದ್ದರು ಪ್ರಿಯಾ ಸುದೀಪ್. ಕಿಚ್ಚನ ಸಪೋರ್ಟ್, ಪಚ್ಚನ ಪ್ಲಸ್ ಪಾಯಿಂಟ್, ಮುಂದಿನ ಯೋಜನೆ, ಯೋಚನೆಗಳ ಬಗ್ಗೆ ಮುಕ್ತವಾಗಿ ಮಾತನಾಡಿದರು.
* ನಿರ್ಮಾಪಕಿಯಾಗಲು ಈ ಕಥೆಯನ್ನೇ ಆಯ್ಕೆ ಮಾಡಿಕೊಂಡಿದ್ದೇಕೆ?
- ನಿರ್ದೇಶಕ ವಿವೇಕ್ ಮತ್ತು ನಟ ಧನಂಜಯ್ ಇಬ್ಬರೂ ಗೆಳೆಯರು. ಧನಂಜಯ್ ಮೂಲಕ ವಿವೇಕ್ ಕೆಆರ್ಜಿ ಸ್ಟುಡಿಯೋಸ್ನ ಕಾರ್ತಿಕ್ಗೆ ಈ ಕಥೆ ಹೇಳಿದ್ದರು. ಆದರೆ, ಬೇರೆ ಪ್ರಾಜೆಕ್ಟ್ಗಳಿದ್ದ ಕಾರಣ ಇಷ್ಟವಾದರೂ ಈ ಕಥೆಯನ್ನು ಮುಂದೆ ಮಾಡೋಣ ಅಂತ ಕಾರ್ತಿಕ್ ಸುಮ್ಮನಾಗಿದ್ದರು. ಧನಂಜಯ್ಗೆ ಕಥೆ ಹೇಳಿದಾಗ ಅವರು ಸಂಚಿತ್ರನ್ನು ಸೂಚಿಸಿದರು. ಬಳಿಕ ಸಂಚಿತ್ಗೂ ಕಥೆ ಇಷ್ಟವಾಯಿತು. ಆಗ ಸಂಚಿತ್ನ "ಜಿಮ್ಮಿ' ಮೂಲಕ ಲಾಂಚ್ ಮಾಡುತ್ತಿದ್ದೆವು. ಸಂಚಿತ್ ನಾಯಕನಾಗಿ ನಟಿಸಿ, ನಿರ್ದೇಶಿಸುತ್ತಿದ್ದ ಚಿತ್ರವದು. ಆದರೆ, ಮೊದಲ ಪ್ರಯತ್ನದಲ್ಲೇ ಎರಡನ್ನೂ ಒಟ್ಟಿಗೆ ನಿಭಾಯಿಸುವುದು ಕಷ್ಟವಾಗಬಹುದು ಅಂತ ಸುದೀಪ್, ಸಂಚಿತ್ಗೆ "ಮ್ಯಾಂಗೋ ಪಚ್ಚ' ಮಾಡಿ ಅನುಭವ ಪಡೆಯಲು ತಿಳಿಸಿದರು. ಈಗ ಬರುತ್ತಿರುವ ಕಥೆಗಳಲ್ಲಿ 2000ರಲ್ಲಿ ಮೈಸೂರಿನಲ್ಲಿ ನಡೆಯುವ ಈ ಸ್ಟೋರಿ ತುಂಬ ವಿಭಿನ್ನವಾಗಿತ್ತು. ಹೀಗಾಗಿ ನಾವೇ ನಿರ್ಮಿಸಲು ಮುಂದಾದೆವು.
* ನಿರ್ಮಾಪಕಿಯಾಗಲು ನಿಮ್ಮ ಸಿದ್ಧತೆ ಹೇಗಿತ್ತು?
- ಮೊದಲಿನಿಂದಲೂ ಅಪ್ಪ-ಅಮ್ಮ ನಿರ್ಮಾಣ ನೋಡಿಕೊಳ್ಳುತ್ತಿದ್ದರು. ಸುದೀಪ್ ಮತ್ತು ಅವರನ್ನು ನೋಡಿ ಕಲಿಯುತ್ತಿದ್ದೆ. ಆದರೆ, ಸಾನ್ವಿಗೆ ಸಮಯ ನೀಡಬೇಕು ಅಂತ ತೀರ್ಮಾನಿಸಿದ್ದ ಕಾರಣ ಆಗ ನನಗೆ ವೃತ್ತಿಯಾಗಿ ತೆಗೆದುಕೊಳ್ಳಲು ಇಷ್ಟವಿರಲಿಲ್ಲ. ಈಗ ಸಾನ್ವಿ ದೊಡ್ಡವಳಾಗಿದ್ದಾಳೆ, ಸ್ವತಂತ್ರಳಾಗಿದ್ದಾಳೆ. ನನಗೂ ಸಮಯವಿದೆ. ಜತೆಗೆ ದಶಕಗಳಿಂದ ಸಿನಿಮಾದಲ್ಲೇ ಇದ್ದ ಕಾರಣ ನನಗೂ ಬೇರೇನೂ ಗೊತ್ತಿರಲಿಲ್ಲ. ಸುದೀಪ್ಗೆ ಚಿತ್ರರಂಗ ತುಂಬ ಕೊಟ್ಟಿದೆ. ನಾವೂ ವಾಪಸ್ ಚಿತ್ರರಂಗಕ್ಕೆ ಏನಾದರೂ ನೀಡಬೇಕು ಅಂತ ಅನ್ನಿಸುತ್ತಿತ್ತು. ಹೀಗಾಗಿ ಹೊಸ ಪ್ರತಿಭೆಗಳನ್ನು ಪರಿಚಯಿಸಲು ಒಂದು ವೇದಿಕೆ ನೀಡಬೇಕು ಅಂತ ನಿರ್ಮಾಣ ಸಂಸ್ಥೆ ಪ್ರಾರಂಭಿಸಿದೆವು. ದೊಡ್ಡ ಬಜೆಟ್ ಸಿನಿಮಾನೇ ಮಾಡಬೇಕು ಅಂತೇನಿಲ್ಲ. ಒಳ್ಳೆಯ, ಸರಳ ಕಥೆಗಳನ್ನು ಹೇಳಬೇಕು ಅಂತಿಷ್ಟ.
* ನಿಮ್ಮ ಸಾಹಸಕ್ಕೆ ಸುದೀಪ್ ಅವರ ಸಹಕಾರ ಹೇಗಿದೆ?
- ನಿರ್ಮಾಣ ಸಂಸ್ಥೆ ಪ್ರಾರಂಭಿಸುವಾಗ ನನಗೂ ಆತ್ಮವಿಶ್ವಾಸ ಇರಲಿಲ್ಲ. ಆದರೆ, ಸುದೀಪ್ ಪ್ರತಿ ಹಂತದಲ್ಲೂ ಜತೆಗಿದ್ದಾರೆ. "ನೀನು ಸ್ವಂತ ನಿರ್ಧಾರ ಮಾಡು, ಅದಕ್ಕೂ ಮೀರಿ ಏನಾದರೂ ಇದ್ದರೆ ನಾನಿದೀನಲ್ಲ' ಎಂದು ಮುನ್ನುಗ್ಗಲು ಧೈರ್ಯ ನೀಡಿದರು. "ಮ್ಯಾಂಗೋ ಪಚ್ಚ' ಚಿತ್ರೀಕರಣದ ಸಮಯದಲ್ಲೂ ಪ್ರತಿ ಶೆಡ್ಯೂಲ್ ಬಳಿಕ ಕೆಲ ಸನ್ನಿವೇಶಗಳನ್ನು ತೋರಿಸುತ್ತಿದ್ದೆವು. ಅವರೂ ನೋಡಿ ಖುಷಿ ಪಡುತ್ತಿದ್ದರು. ಎರಡು ದಿನ ನನ್ನ ಮನವಿ ಮೇರೆಗೆ ಸೆಟ್ಗೂ ಬಂದಿದ್ದರು. ಕ್ಲೆಮ್ಯಾಕ್ಸ್ ಸೀನ್ ವೇಳೆ ಎರಡು, ಮೂರು ಐಡಿಯಾ ಕೊಟ್ಟರು. ಸಂಕಲನ, ಹಿನ್ನೆಲೆ ಸಂಗೀತದ ಸಮಯದಲ್ಲೂ ಅವರ ಇನ್ಪುಟ್ಸ್ ಇದೆ.
* "ಮ್ಯಾಂಗೋ ಪಚ್ಚ' ಮೂಡಿಬಂದಿರುವ ರೀತಿ ಇಷ್ಟವಾಗಿದೆಯೇ?
- ನಮ್ಮ ಸಿನಿಮಾ ಎಷ್ಟೇ ಬಾರಿ ನೋಡಿದರೂ ನಮಗೆ ಇಷ್ಟವಾಗುತ್ತದೆ. ನಾನಂತೂ ಇದುವರೆಗೆ 50ರಿಂದ 60 ಬಾರಿ ನೋಡಿದ್ದೇನೆ. ಪ್ರತಿ ಬಾರಿ ನೋಡಿದಾಗಲೂ ಖುಷಿಯಾಗುತ್ತದೆ. ಸಂಚಿತ್ ಚಿತ್ರರಂಗಕ್ಕೆ ಹೊಸತನ ಹೊತ್ತು ಬರುತ್ತಿದ್ದಾನೆ. ಮೊದಲ ಚಿತ್ರದಲ್ಲೇ ಚೆನ್ನಾಗಿ ನಟಿಸಿದ್ದಾನೆ, ಭರವಸೆ ಮೂಡಿಸಿದ್ದಾನೆ. ಚರಣ್ ರಾಜ್ ಸಂಗೀತ ಕೂಡ ತುಂಬ ಚೆನ್ನಾಗಿದ್ದು, ಅವರೇ ನಮ್ಮ ಚಿತ್ರದ ಮತ್ತೊಬ್ಬ ಹೀರೋ ಎನ್ನಬಹುದು.
* "...ಪಚ್ಚ'ದಲ್ಲಿ "ಕಿಚ್ಚ'ನನ್ನು ನೋಡಬಹುದೇ?
- ಸುದೀಪ್ ಸರ್ ಸಿನಿಮಾದಲ್ಲಿದ್ದಾರಾ? ಇಲ್ಲವಾ? ಎಂಬುದನ್ನು ಸಿನಿಮಾ ನೋಡಿ ಪ್ರೇಕ್ಷಕರೇ ಹೇಳಬೇಕು. ಕಥೆಗೆ ಅವರ ಅವಶ್ಯಕತೆ ಇತ್ತಾ ಇಲ್ಲವಾ ಎಂಬುದು ಮುಖ್ಯವಾಗುತ್ತದೆ. ಸುಖಾಸುಮ್ಮನೇ ಪಾತ್ರ ಸೃಷ್ಟಿಸುವುದು, ನಮಗೂ ಇಷ್ಟವಿರಲಿಲ್ಲ. ಹಾಗೇನಾದರೂ ಆದರೆ, ಕಥೆಗೆ ನ್ಯಾಯ ಕೊಡೋಕೆ ಆಗಲ್ಲ. ಆದರೆ, ಒಂದು ಸರ್ಪೆಸ್ ವಿಷಯವಂತೂ ಇದೆ. ಅದೇನು ಅಂತ ಥಿಯೇಟರ್ನಲ್ಲೇ ನೋಡಿ.
* "ಮಾರ್ಕ್'ನಲ್ಲಿ ಹಾಡಿದ್ದ ಸಾನ್ವಿ, "... ಪಚ್ಚ'ದಲ್ಲೂ ಹಾಡಿದ್ದಾರಾ?
- ಹೌದು, ಸಾನ್ವಿ ಈ ಚಿತ್ರದ ಕ್ರೆಡಿಟ್ ಟೈಟಲ್ ಸಾಂಗ್ ಬರೆದಿದ್ದಾಳೆ. ಸಿನಿಮಾ ನೋಡಿ ಆಕೆ ಕೂಡ ತುಂಬ ಖುಷಿಯಾಗಿದ್ದಾಳೆ. ಆಗಾಗ ಕಥೆಗಳನ್ನು ಬರೆಯುತ್ತಿರುತ್ತಾಳೆ. ಒಂದು ಸಿನಿಮಾ ಕಥೆ ಕೂಡ ಮಾಡುವ ಸಾಮರ್ಥ್ಯ ಆಕೆಯಲ್ಲಿದ್ದು, ನಾವೂ ಸಹ ಉತ್ತೇಜಿಸುತ್ತಿದ್ದೇವೆ.
- "ಮ್ಯಾಂಗೋ ಪಚ್ಚ' ನಡುವೆಯೇ ಹಲವು ಕಥೆಗಳನ್ನು ಕೇಳಿದ್ದೇನೆ. ಆದರೆ, ಸದ್ಯಕ್ಕಂತೂ ಯಾವುದೂ ಇಷ್ಟವಾಗಿಲ್ಲ. ಕೆಲವೊಮ್ಮೆ ಕನ್ನಡದಲ್ಲಿ ಕಥೆಗಳು ಮತದ್ತು ಕಥೆಗಾರರ ಕೊರತೆಯಿದೆಯಾ ಅಥವಾ ಒಳ್ಳೆ ಕಥೆಗಳು, ಕಥೆಗಾರರು ನಮಗೆ ಸಿಗುತ್ತಿಲ್ಲವೇ ಎಂಬ ಅನುಮಾನ ಮೂಡುತ್ತದೆ. ನಾನಂತೂ ಒಳ್ಳೆ ಕಥೆಗಳನ್ನು ಕೇಳಲು, ಉತ್ತಮ ಸಿನಿಮಾ ನಿರ್ಮಿಸಲು ಉತ್ಸುಕಳಾಗಿದ್ದೇನೆ. ಮುಂದೆ "ಜಿಮ್ಮೆ'ಯನ್ನು ಖಂಡಿತ ನಿರ್ಮಿಸಲಿದ್ದೇವೆ.