ರಾಮನಗರ ಜಿಲ್ಲಾ ಮಾವು ತೋಟದ ಬೆಳೆಗಾರರ ಮಾರಾಟ ಸಂಘದ ವತಿಯಿಂದ ತೋಟಗಾರಿಕಾ ಇಲಾಖೆ ಸಹಕಾರದೊಂದಿಗೆ ನಗರದ ಕದ್ರಿ ಉದ್ಯಾನವನದಲ್ಲಿ ಆಯೋಜಿಸಿರುವ ನಾಲ್ಕು ದಿನಗಳ ಮಾವು ಮೇಳ 
ನ್ಯೂಸ್

ರೈತರಿಂದಲೇ ಮಾವು ಮೇಳ ಆಯೋಜನೆ

ಮಂಗಳೂರು: ಮಾವು ಬೆಳೆಗಾರರ ಸ್ವಾವಲಂಬಿ ಬದುಕಿಗೆ ಪೂರಕವಾಗುವಂತೆ ತೋಟಗಾರಿಕಾ ಇಲಾಖೆಯ ಸಹಕಾರದೊಂದಿಗೆ ನೇರವಾಗಿ ರೈತರಿಂದಲೇ ಮಾವು ಮೇಳ ನಡೆಸಲಾಗುತ್ತಿದೆ ಎಂದು ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಪ್ರವೀಣ್ ಅವರು ಹೇಳಿದರು.
ರಾಮನಗರ ಜಿಲ್ಲಾ ಮಾವು ತೋಟದ ಬೆಳೆಗಾರರ ಮಾರಾಟ ಸಂಘದ ವತಿಯಿಂದ ತೋಟಗಾರಿಕಾ ಇಲಾಖೆ ಸಹಕಾರದೊಂದಿಗೆ ನಗರದ ಕದ್ರಿ ಉದ್ಯಾನವನದಲ್ಲಿ ಆಯೋಜಿಸಿರುವ ನಾಲ್ಕು ದಿನಗಳ ಮಾವು ಮೇಳವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಮಾರುಕಟ್ಟೆಯಲ್ಲಿ ಕೃತಕವಾಗಿ ಮಾಗಿಸಿದ ಮಾವಿನ ಹಣ್ಣುಗಳನ್ನು ಮಾರಾಟ ಮಾಡಲಾಗುತ್ತಿದೆ. ಆದರೆ, ಈ ಮೇಳದಲ್ಲಿ ರೈತರೇ ತಮ್ಮ ತೋಟಗಳಿಂದ ಕೊಯ್ದ, ನೈಸರ್ಗಿಕವಾಗಿ ಮಾಗಿಸಿದ ಮಾವಿನ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದಾರೆ. ಮಾವನ್ನು ನೈಸರ್ಗಿಕವಾಗಿ ಮಾಗಿಸಲು ಸರಕಾರ ಪ್ರೋತ್ಸಾಹ ನೀಡುತ್ತಿದೆ ಎಂದರು.
ಕದ್ರಿ ಉದ್ಯಾನವನ ಸಮಿತಿ ಸದಸ್ಯ ಜಗನ್ನಾಥ ಗಾಂಭೀರ್ ಮಾವು ಮೇಳಕ್ಕೆ ಚಾಲನೆ ನೀಡಿದರು. ಮಾವು ಬೆಳೆಗಾರರಾದ ರಾಮನಗರದ ವಾಸು, ನಿಂಗರಾಜು, ಪುಟ್ಟರಾಜು, ಮಾದೇಶ, ಪ್ರವೀಣ್ ಮತ್ತಿತರರು ಉಪಸ್ಥಿತರಿದ್ದರು. ಮಾವು ಮೇಳದಲ್ಲಿ ವಿವಿಧ ತಳಿಗಳಾದ ಆಲ್ಫೊನ್ಸೋ, ಬಾದಾಮಿ, ಮಲ್ಲಿಕಾ, ರಸಪುರಿ, ಮಲಗೋವಾ, ಸಿಂಧೂರ, ಕಾಲಪಾಡಿ, ತೋತಾಪುರಿ, ಬಂಗನಪಲ್ಲಿ, ಶುಗರ್ ಬೇಬಿ ಮುಂತಾದ ಹಣ್ಣುಗಳು ಮೇಳದಲ್ಲಿ ಗಮನ ಸೆಳೆಯುತ್ತಿದೆ.