ಮಂಗಳೂರು : ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ಮಂಗಳೂರು ಇದರ ವತಿಯಿಂದ ಮಾ.22ರಿಂದ 26ರವರೆಗೆ ಕರಾವಳಿಯ ಅತೀ ದೊಡ್ಡ ಆಹಾರೋತ್ಸವ ‘ಮಂಗಳೂರು ಸ್ಟ್ರೀಟ್ ಫುಡ್ ಫೆಸ್ಟಿವಲ್ ‘ನಡೆಯಲಿದೆ.
ನಗರದ ಕರಾವಳಿ ಉತ್ಸವ ಮೈದಾನದಿಂದ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದ ಮುಖಾಂತರ ಮಣ್ಣಗುಡ್ಡೆ ಗುರ್ಜಿ ಜಂಕ್ಷನ್‌ವರೆಗೆ ಪ್ರತೀ ದಿನ ಸಾಯಂಕಾಲ 5ರಿಂದ ರಾತ್ರಿ 11ರವೆಗೆ ಆಹಾರೋತ್ಸವ ನಡೆಯಲಿದೆ . ತುಳುನಾಡಿನ ಸಾಂಪ್ರದಾಯಿಕ ತಿಂಡಿ ತಿನಿಸುಗಳ ಜತೆಗೆ ಹೊರ ರಾಜ್ಯಗಳ ಸಸ್ಯಾಹಾರ ಹಾಗೂ ಮಾಂಸಾಹಾರ ಆಹಾರಗಳಿಗೆ ಆದ್ಯತೆ ಕಲ್ಪಿಸಲಾಗಿದೆ ಎಂದು ಸಂಘಟಕ ಯತೀಶ್ ಬೈಕಂಪಾಡಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ತುಳುನಾಡಿನ ಆಹಾರ ವೈವಿಧ್ಯತೆಯ ಪರಿಚಯಿಸುವ ಜತೆಗೆ ಸ್ವ ಉದ್ಯೋಗಕ್ಕೆ ಪೂರಕ ವೇದಿಕೆ ನಿರ್ಮಿಸುವ ಪ್ರಯತ್ನ ಇದಾಗಿದೆ. ಹೋಟೆಲ್ ಉದ್ಯಮ, ಐಸ್‌ಕ್ರೀಂ, ಮನೆ ಉತ್ಪನ್ನಗಳು, ಸ್ವಾವಲಂಬಿ ಉತ್ಪಾದಕರು ಆಹಾರೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಿನೆಮಾ ತಾರೆಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು ನೃತ್ಯ, ಹಾಡು, ಮಿಮಿಕ್ರಿ, ನಟನೆ, ಬೀದಿ ಜಾದೂ, ಕರೊಕೆ, ವಾದ್ಯಗೋಷ್ಠಿ, ಬೀದಿ ಸರ್ಕಸ್, ಸೈಕಲ್ ಬ್ಯಾಲೆನ್ಸ್, ಬಗ್ಗಿ ವಾಹನ, ಗೇಮ್ಸ್, ಜುಂಬಾ, ಫಿಟ್‌ನೆಸ್ ಕ್ರೀಡೆ, ಯೋಗ ಮುಂತಾದ ಮನೋರಂಜನಾ ಕಾರ್ಯಕ್ರಮಗಳು ನಡೆಯಲಿದೆ. ದೇಹದಾರ್ಡ್ಯ, ಪಟಾಕಿ ಪ್ರದರ್ಶನ, ಚೆಂಡೆ ಮತ್ತು ನಾಸಿಕ್ ಬ್ಯಾಂಡ್, ಕಿರು ಮ್ಯೂಸಿಕ್ ಬ್ಯಾಂಡ್, ಬೆಂಕಿ ನೃತ್ಯ, ಫ್ಲಾಶ್ ಬೆಳಕಿನಾಟ ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು.