- ರಸ್ತೆಯಲ್ಲಿ ಹರಿದ ನೀರು
- ಸಂಚಾರ ಅಸ್ತವ್ಯಸ್ತ
- ಕೃತಕ ನೆರೆ ಸೃಷ್ಟಿ
ವಿಜಯವಾಣಿ ಸುದ್ದಿಜಾಲ ಮಂಗಳೂರು/ಉಡುಪಿ
ಕರಾವಳಿಯಲ್ಲಿ ಸುಡುವ ಬಿಸಿಲು ಹಾಗೂ ಅತಿಯಾದ ಸೆಕೆ ಜನರನ್ನು ಹೈರಾಣಾಗಿದ್ದು, ಗುರುವಾರ ಸಂಜೆ ದಿಢೀರ್ ಗುಡುಗು ಸಹಿತ ಮಳೆಯಾಗಿದೆ. ಮಂಗಳೂರು ನಗರದಲ್ಲಿ 20 ನಿಮಿಷಗಳ ಕಾಲ ಗುಡುಗು ಸಹಿತ ಅಬ್ಬರದ ಮಳೆಗೆ ಪ್ರಮುಖ ರಸ್ತೆಗಳು ಕೆರೆಯಂತಾಗಿದ್ದು, ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.
ಮೂಡುಬಿದಿರೆ, ಬೆಳ್ತಂಗಡಿ, ಕಡಬ, ಉಡುಪಿ, ಪಡುಬಿದ್ರಿ, ಕುಂದಾಪುರ ಸುತ್ತಮುತ್ತ ಸಿಡಿಲು ಸಹಿತ ಭಾರಿ ಮಳೆ ಸುರಿದಿದೆ. ಉಡುಪಿ ನಗರದಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೂ ಮೋಡದ ಕವಿದ ವಾತಾವರಣ ಇತ್ತು. ಸಂಜೆ 5:45ಕ್ಕೆ ಮಳೆ ಸುರಿಯಿತು. ಅರ್ಧ ತಾಸು ಬಳಿಕ ಮಳೆ ನಿಂತರೂ ತುಂತುರು ಹನಿ ಜಿನುಗುತ್ತಲೇ ಇತ್ತು.
ಮಂಗಳೂರು ನಗರದ ರಾಷ್ಟ್ರೀಯ ಹೆದ್ದಾರಿಯ ಪಂಪ್‌ವೆಲ್, ಕೂಳೂರು, ಕೊಟ್ಟಾರ ಚೌಕಿಯಲ್ಲಿ ಮಳೆನೀರು ಸರಾಗವಾಗಿ ಹರಿಯದೆ ರಸ್ತೆಯಲ್ಲೇ ಸುಮಾರು ಎರಡರಿಂದ ಮೂರು ಅಡಿಗಳಷ್ಟು ನೀರು ನಿಂತಿತ್ತು. ಪಂಪ್‌ವೆಲ್ ಫ್ಲೈಓವರ್ ಅಡಿಯಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ಕೃತಕ ಪ್ರವಾಹ ಸೃಷ್ಟಿಯಾಗಿದ್ದು, ದ್ವಿಚಕ್ರ ವಾಹನ ಸವಾರರು ಭಯದಲ್ಲೇ ಸಂಚರಿಸಿದರು. ಕೂಳೂರು ಹೆದ್ದಾರಿಯಲ್ಲಿ ನೀರು ನಿಂತಿದ್ದರಿಂದ ವಾಹನಗಳು ಕಿಲೋಮೀಟರ್‌ಗಟ್ಟಲೆ ಸಾಲುಗಟ್ಟಿ ನಿಂತು ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತು.
ಲಾಲ್‌ಬಾಗ್, ಬಿಜೈ, ಕೆಎಸ್ಸಾರ್ಟಿಸಿ ಸುತ್ತಮುತ್ತ ಮಳೆಯಿಂದ ರಸ್ತೆಯೇ ತೋಡಿನಂತಾಗಿತ್ತು. ಅಲ್ಲಲ್ಲಿ ರಸ್ತೆ ಅಗೆಯುವ ಕಾಮಗಾರಿ ನಡೆಯುತ್ತಿದ್ದು, ಮಳೆಯಿಂದಾಗಿ ಸಂಜೆ ಹೊತ್ತು ವಾಹನ ದಟ್ಟಣೆ ಜಾಸ್ತಿಯಾಗಿ ಸಂಚಾರಸಿಕ್ಕು ಉಂಟಾಯಿತು.
ಮಳೆಗಾಲಕ್ಕೆ ಸಿದ್ಧಗೊಳ್ಳದ ಮಹಾನಗರ
ಜೂನ್ ಮೊದಲ ವಾರ ಮುಂಗಾರು ಪ್ರವೇಶಿಸುವ ಸೂಚನೆ ಇದ್ದರೂ, ಮಂಗಳೂರು ಮಹಾನಗರ ಪಾಲಿಕೆ ಮಳೆಗಾಲದ ಪೂರ್ವಸಿದ್ಧತೆ ಕೈಗೊಳ್ಳುವಲ್ಲಿ ವಿಫಲವಾಗಿದೆ ಎಂಬುದು ಈ ಮಳೆಯಿಂದ ಸಾಬೀತಾಗಿದೆ. ನಗರದ ಅನೇಕ ಕಡೆ ರಾಜಕಾಲುವೆಗಳ ಹೂಳೆತ್ತುವ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ. ಚರಂಡಿಗಳು ಕಸಕಡ್ಡಿಗಳಿಂದ ತುಂಬಿರುವುದರಿಂದ ಮಳೆನೀರು ರಸ್ತೆಗೇ ನುಗ್ಗುತ್ತಿದೆ. ರಸ್ತೆ ಬದಿಯ ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗಿ ಸಾಮಗ್ರಿಗಳು ಹಾನಿಗೊಳಗಾಗಿವೆ.
ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮದಲ್ಲಿ ಸಿಡಿಲು ಬಡಿದು ಜಯಾ ಸಾಲ್ಯಾನ್ ಎಂಬುವರ ತಲೆಗೆ ಗಾಯವಾಗಿದ್ದು, ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂಡುಬಿದಿರೆ ತಾಲೂಕಿನ ವಾಲ್ಪಾಡಿ ಗ್ರಾಮದಲ್ಲಿ ಮನೆ ಮೇಲೆ ಮರ ಬಿದ್ದ ಪರಿಣಾಮ ಶೇಖರ ಪೂಜಾರಿ ಎಂಬುವರ ಪತ್ನಿ ಸುಂದರಿ ಗಾಯಗೊಂಡಿದ್ದಾರೆ. ಇದೇ ಗ್ರಾಮದ ರಾಜು ಎಂಬುವವರ ಮನೆಗೂ ಹಾನಿಯಾಗಿದ್ದು, ವಿದ್ಯುತ್ ಕಂಬಗಳು ತುಂಡಾಗಿ ಬಿದ್ದಿವೆ. ಕೃಷಿ ತೋಟಗಳಿಗೂ ವ್ಯಾಪಕ ನಷ್ಟ ಉಂಟಾಗಿದೆ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ 12 ಮನೆ, ಉಡುಪಿ ತಾಲೂಕಿನ 5, ಕಾಪು ಮತ್ತು ಹೆಬ್ರಿ ತಾಲೂಕಿನಲ್ಲಿ ತಲಾ 1 ಮನೆಗಳು ಭಾಗಶಃ ಹಾನಿಯಾಗಿವೆ. ಹೆಬ್ರಿ ತಾಲೂಕಿನಲ್ಲಿ 3 ಕುಟುಂಬದ ತೋಟಗಾರಿಕಾ ಬೆಳೆ ಮಳೆಯಿಂದ ಹಾನಿಗೀಡಾಗಿದೆ.